Advertisement

“ದೀಪಾ ಕರ್ಮಾಕರ್‌-ದಿ ಸ್ಮಾಲ್‌ ವಂಡರ್‌’ 

12:45 AM Jan 24, 2019 | |

ಹೊಸದಿಲ್ಲಿ: ಭಾರತದ ಜಿಮ್ನಾಸ್ಟ್‌ ತಾರೆ ದೀಪಾ ಕರ್ಮಾಕರ್‌ ಕುರಿತಾದ “ದೀಪಾ ಕರ್ಮಾಕರ್‌-ದಿ ಸ್ಮಾಲ್‌ ವಂಡರ್‌” ಪುಸ್ತಕವನ್ನು ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, “ಜಿಮ್ನಾಸ್ಟ್‌ ದೀಪಾ ದೇಶದ ಹೆಮ್ಮೆ, ಯುವ ಜನಾಂಗಕ್ಕೆ ಪ್ರೇರಣೆ’ ಎಂದರು.

Advertisement

ದೀಪಾ ದೇಶದ ಹೆಮ್ಮೆ
“ದೀಪಾ ಕರ್ಮಾಕರ್‌ ಜಿಮ್ನಾಸ್ಟ್‌ನಲ್ಲಿ ವಿಶೇಷ ಛಾಪು ಮೂಡಿಸಿರುವುದು ಮಾತ್ರವಲ್ಲ, ಯುವ ಜನಾಂಗಕ್ಕೆ ಸ್ಫೂರ್ತಿಯಾಗಿದ್ದಾರೆ, ದೇಶಕ್ಕಾಗಿ ವಿಶೇಷ ಕೊಡುಗೆ ನೀಡಲು ಪ್ರೇರಣೆಯಾಗಿದ್ದಾರೆ. ಜಿಮ್ನಾಸ್ಟಿಕ್‌ನ ಪ್ರೊಡುನೋವಾ ವಾಲ್ಟ್  ವಿಭಾಗದಲ್ಲಿ ಕೇವಲ 7 ಆ್ಯತ್ಲೀಟ್‌ಗಳು ಪ್ರಯತ್ನಪಟ್ಟಿದ್ದು, 5 ಆ್ಯತ್ಲೀಟ್‌ಗಳು ಯಶಸ್ವಿಯಾಗಿದ್ದಾರೆ. ಇವರಲ್ಲಿ ನಮ್ಮ ದೀಪಾ ಕರ್ಮಾಕರ್‌ ಕೂಡ ಒಬ್ಬರು ಎಂದು ಹೇಳಲು ಹೆಮ್ಮೆಯಾಗುತ್ತದೆ’ ಎಂದು ಸಚಿನ್‌ ಹೇಳಿದರು.

ಈ ಸಂದರ್ಭದಲ್ಲಿ ಮಾತಾಡಿದ ದೀಪಾ ಕರ್ಮಾಕರ್‌, “ಮಾರ್ಚ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ ಅರ್ಹತಾ ಕೂಟದಲ್ಲಿ ನಾನು ಪಾಲ್ಗೊಳ್ಳಲಿದ್ದೇನೆ. ಆಯ್ಕೆ ಪ್ರಕ್ರಿಯೆ ಸಾಕಷ್ಟು ಜಟಿಲಗೊಂಡಿದೆ. ಜಿಮ್ನಾಸ್ಟಿಕ್‌ನಲ್ಲಿ ಹಿಂದುಳಿದ ಭಾರತದಂಥ ದೇಶಗಳಿಗೆ ಇದು ಭಾರೀ ಸವಾಲಾಗಲಿದೆ. ನನ್ನ ಗರಿಷ್ಠ ಪ್ರಯತ್ನ ಮಾಡುತ್ತೇನೆ’ ಎಂದರು.

ಒಲಿಂಪಿಕ್ಸ್‌ನಲ್ಲೂ ಕ್ರಿಕೆಟ್‌: ಸಚಿನ್‌
“ಒಲಿಂಪಿಕ್ಸ್‌ನಲ್ಲಿ ಕ್ರಿಕೆಟಿಗೂ ಮಾನ್ಯತೆ ಸಿಗಬೇಕು. ಕ್ರಿಕೆಟ್‌ನಲ್ಲಿ ಸಾಕಷ್ಟು ಮಾದರಿಗಳಿದ್ದು, 4 ವರ್ಷಗಳಿಗೊಮ್ಮೆ ನಡೆಯುವ ಈ ಕ್ರೀಡಾಕೂಟ ಇವುಗಳನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯುತ್ತದೆ’ ಎಂದು ತೆಂಡುಲ್ಕರ್‌ ಹೇಳಿದರು.

“ಒಬ್ಬ ಕ್ರಿಕೆಟಿಗಾಗಿ ಹೇಳುವುದಾದರೆ, ಈ ಕ್ರೀಡೆ ಜಾಗತೀಕರಣಗೊಳ್ಳಬೇಕು. ಇದರಲ್ಲಿ ಯಾವುದೇ ಸಂದೇಹವಿಲ್ಲ. 2016ರ ರಿಯೋ ಒಲಿಂಪಿಕ್ಸ್‌ ವೇಳೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಅಧ್ಯಕ್ಷ ಥಾಮಸ್‌ ಬಾಕ್‌ ಅವರನ್ನು ಭೇಟಿಯಾಗಿದ್ದ ನಾನು, ಒಲಿಂಪಿಕ್ಸ್‌ನಲ್ಲಿ ಕ್ರಿಕೆಟನ್ನೂ ಸೇರಿಸಬೇಕು ಎಂದು ಮನವಿ ಮಾಡಿದ್ದೆ. ಕ್ರಿಕೆಟಿನಲ್ಲಿ ಏಕದಿನ, ಟಿ20, ಟಿ10 ಮಾದರಿಯ ಪಂದ್ಯಗಳಿವೆ. ಒಲಿಂಪಿಕ್ಸ್‌ನಲ್ಲಿ 5 ಓವರ್‌ಗಳ ಪಂದ್ಯ ಆಯೋಜಿಸಿದರೂ ಸಾಕು’ ಎಂದು ಸಚಿನ್‌ ಅಭಿಪ್ರಾಯಪಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next