Advertisement

ಟೆಂಡರ್‌ ಶ್ಯೂರ್‌ ಮಾದರಿ ಸ್ಮಾರ್ಟ್‌ಸಿಟಿ

12:13 PM Dec 20, 2018 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ “ಸ್ಮಾರ್ಟ್‌ಸಿಟಿ’ ಯೋಜನೆ ಅನುಷ್ಠಾನಕ್ಕೆ ಬಿಬಿಎಂಪಿ ಮುಂದಾಗಿದ್ದು, ಮೊದಲ ಹಂತದಲ್ಲಿ ನಗರದ 17 ರಸ್ತೆಗಳನ್ನು ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶೀಘ್ರದಲ್ಲಿಯೇ ಚಾಲನೆ ನೀಡಲಿದೆ.

Advertisement

ಮೂರು ವರ್ಷಗಳ ಸತತ ಪ್ರಯತ್ನದಿಂದಾಗಿ ಬೆಂಗಳೂರು ಮೂರನೇ ಪಟ್ಟಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿದೆ. ಆ ಹಿನ್ನೆಲೆಯಲ್ಲಿ ಶೀಘ್ರ ಯೋಜನೆ ಅನುಷ್ಠಾನಗೊಳಿಸಲು ಪಾಲಿಕೆ ಸಿದ್ಧತೆ ನಡೆಸಿದೆ. ಅದರಂತೆ ಈಗಾಗಲೇ 17 ರಸ್ತೆಗಳಲ್ಲಿ ಟೆಂಡರ್‌ಶ್ಯೂರ್‌ ಕಾಮಗಾರಿ ಕೈಗೆತ್ತಿಕೊಳ್ಳಲು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ, ತಿಂಗಳಲ್ಲಿ ಕಾಮಗಾರಿ ಆರಂಭಿಸಲು ನಿರ್ಧರಿಸಿದೆ. 

ಸ್ಮಾರ್ಟ್‌ಸಿಟಿ ಯೋಜನೆಯನ್ನು ಬೆಂಗಳೂರಿನ ಕೇಂದ್ರ ಭಾಗದ ಗಾಂಧಿನಗರ, ಶಿವಾಜಿನಗರ, ಮಲ್ಲೇಶ್ವರ ಹಾಗೂ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 16 ವಾರ್ಡ್‌ಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಜಾರಿಯಾಗಲಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಯಾವ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಯೋಜನೆ ಕೈಗೆತ್ತಿಕೊಳ್ಳಬೇಕು ಎಂಬ ಬಗ್ಗೆ ಈಗಾಗಲೇ ಸಮಗ್ರ ಯೋಜನಾ ವರದಿ (ಡಿಪಿಆರ್‌)ಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. 

ಇದರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನಗೊಳಿಸಲು ವಿಶೇಷ ಉದ್ದೇಶ ವಾಹಕ (ಎಸ್‌ಪಿವಿ) ಸಹ ರಚಿಸಲಾಗಿದೆ. ಅದರಂತೆ ಇದೀಗ ಯೋಜನೆಯ ಮೊದಲ ಹಂತದಲ್ಲಿ 17 ಟೆಂಡರ್‌ ಶ್ಯೂರ್‌ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಡಿಪಿಆರ್‌ ಸಿದ್ಧಪಡಿಸಲಾಗಿದೆ.

190.30 ಕೋಟಿ ರೂ. ವೆಚ್ಚ: ಪಾಲಿಕೆಯಿಂದ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ಸ್ಮಾರ್ಟ್‌ಸಿಟಿ ಪ್ರಸ್ತಾವನೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಟೆಂಡರ್‌ ಶ್ಯೂರ್‌ ಮಾದರಿ ರಸ್ತೆಗಳನ್ನು ನಿರ್ಮಿಸುವುದಾಗಿ ಉಲ್ಲೇಖೀಸಲಾಗಿದೆ. ಅದರಂತೆ ಒಟ್ಟು 17.79 ಕಿ.ಮೀ. ಉದ್ದದ 17 ರಸ್ತೆಗಳನ್ನು ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು 190.30 ಕೋಟಿ ರೂ. ವೆಚ್ಚವಾಗಲಿದೆ.

Advertisement

ಸ್ಮಾರ್ಟ್‌ಸಿಟಿಗೆ 1,742 ಕೋಟಿ ರೂ. ಬೇಕು: ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಸ್ಮಾರ್ಟ್‌ಸಿಟಿಯಡಿ ಒಟ್ಟು 1,742 ಕೋಟಿ ರೂ. ಮೊತ್ತದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಅದರಂತೆ ಸ್ಮಾರ್ಟ್‌ಸಿಟಿ ಯೋಜನೆಗಾಗಿ ಕೇಂದ್ರ ಸರ್ಕಾರ 500 ಕೋಟಿ ರೂ. ಅನುದಾನ ನೀಡಿದರೆ, ಉಳಿದ 1,242 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರದ ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.

ಲೋಗೋ ಕಳಿಸಿ, ಬಹುಮಾನ ಪಡೆಯಿರಿ!: ಬೆಂಗಳೂರು ಸ್ಮಾರ್ಟ್‌ಸಿಟಿಗೆ ಪ್ರತ್ಯೇಕ ಲೋಗೋ ಸಿದ್ಧಪಡಿಸಲು ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ. ಅದರಂತೆ ಸ್ಮಾರ್ಟ್‌ಸಿಟಿ ಯೋಜನೆಯ ಉದ್ದೇಶಕ್ಕೆ ಹೊಂದುವಂತಹ ಲೋಗೋ ಸಿದ್ಧಪಡಿಸಿದವರಿಗೆ ಬಹುಮಾನ ನೀಡಲು ತೀರ್ಮಾನಿಸಲಾಗಿದೆ. ಅದರಂತೆ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು bsclnodal@gmail.com ಗೆ ಕಳುಹಿಸಬೇಕು. 

ಹೇಗಿರಲಿವೆ ಸ್ಮಾರ್ಟ್‌ಸಿಟಿ ಟೆಂಡರ್‌ಶ್ಯೂರ್‌ ರಸ್ತೆಗಳು?
– ಸುಸಜ್ಜಿತ ಪಾದಚಾರಿ ಮಾರ್ಗ
– ಸ್ಮಾರ್ಟ್‌ ಕಾರ್ಡ್‌ ಬಳಸುವ ಸೈಕಲ್‌ ನಿಲುಗಡೆ ತಾಣ
– ಇ-ಆಟೋ ನಿಲುಗಡೆ
– ಇ-ಶೌಚಾಗೃಹ, ಕುಡಿಯುವ ನೀರಿನ ಘಟಕ ಹಾಗೂ ಎಟಿಎಂ
– ಸೆನ್ಸಾರ್‌ ಆಧಾರಿತ ತ್ಯಾಜ್ಯ ಡಬ್ಬಿ
– ಪಾದಚಾರಿ ಮಾರ್ಗದಡಿ ಒಎಫ್ಸಿ, ನೀರು, ವಿದ್ಯುತ್‌ ಸೇವೆ 

ಟೆಂಡರ್‌ಶ್ಯೂರ್‌ಗೆ ಆಯ್ಕೆಯಾದ ರಸ್ತೆಗಳು 
ರಸ್ತೆ    ಉದ್ದ (ಕಿ.ಮೀ.ಗಳಲ್ಲಿ)    ವೆಚ್ಚ (ಕೋಟಿ ರೂ.ಗಳಲ್ಲಿ) 

-ಕಮರ್ಷಿಯಲ್‌ ಸ್ಟ್ರೀಟ್‌    1.00    11
-ಕಾಮರಾಜ ರಸ್ತೆ    1.90    20.90
-ಹಲಸೂರು ರಸ್ತೆ    0.60    06
-ಡಿಕನ್‌ಸನ್‌ ರಸ್ತೆ    1.22    13.42
-ಇನ್ಫೆಂಟ್ರಿ ರಸ್ತೆ        1.65    18.15
-ಸೆಂಟ್ರಲ್‌ ಸ್ಟ್ರೀಟ್‌    1.60    17.60
-ಬೌರಿಂಗ್‌ ಆಸ್ಪತ್ರೆ ರಸ್ತೆ    0.97    9.75
-ಮಿಲ್ಲರ್ ರಸ್ತೆ    2.41    25.91
-ರಾಜಭವನ ರಸ್ತೆ    0.92    10.16
-ಮಗ್ರತ್‌ ರಸ್ತೆ        1.30    13
-ಕಾನ್ವೆಂಟ್‌ ರಸ್ತೆ    0.43    4.30
-ಹೇನ್ಸ್‌ ರಸ್ತೆ    0.33    3.26
-ವುಡ್‌ ಸ್ಟ್ರೀಟ್‌    0.28    2.76
-ಕಾಸ್ಟೆಲ್‌ ಸ್ಟ್ರೀಟ್‌    0.40    3.96
-ಟಾಟೆ ಲೇನ್‌    0.13    1.30
-ಕಸ್ತೂರಬಾ ರಸ್ತೆ    0.80    8.80
-ಕ್ವೀನ್ಸ್‌ ರಸ್ತೆ    1.85    20.35
ಒಟ್ಟು    17.79    190.30

ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನಕ್ಕೆ ಬಿಬಿಎಂಪಿ ವತಿಯಿಂದ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮೊದಲಿಗೆ ಟೆಂಡರ್‌ಶ್ಯೂರ್‌ ರಸ್ತೆಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಅದರಂತೆ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಬಹುತೇಕ ಮುಗಿದಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ. ಇದರೊಂದಿಗೆ ಸ್ಮಾರ್ಟ್‌ಸಿಟಿ ಲೋಗೋ ಸ್ಪರ್ಧೆ ಏರ್ಪಡಿಸಿದ್ದು, ಉತ್ತಮ ಲೋಗೋಗೆ ಬಹುಮಾನ ನೀಡಲಾಗುವುದು.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತರು, ಬೆಂಗಳೂರು ಸ್ಮಾರ್ಟ್‌ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕರು

* ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next