ಹೊಸದಿಲ್ಲಿ: ಭಾರತ-ಚೀನ ನಡುವಿನ ನೈಜ ಗಡಿ ರೇಖೆ ಹಾದು ಹೋಗುವ ಲಡಾಖ್‌ನ ಉತ್ತರ ಭಾಗದಲ್ಲಿ ಹಾಗೂ ಉತ್ತರ ಸಿಕ್ಕಿಂ ಪ್ರಾಂತಗಳಲ್ಲಿ ಭಾರತೀಯ ಭೂಸೇನೆ ನಡೆಸುತ್ತಿರುವ ಗಸ್ತನ್ನು ಮತ್ತಷ್ಟು ಬಿಗಿಗೊಳಿಸಲು ರಕ್ಷಣ ಇಲಾಖೆ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಲಘು ಶಸ್ತ್ರಾಸ್ತ್ರ ಸೌಲಭ್ಯವಿರುವ 800 ಬಹು ಪಯೋಗಿ ವಾಹನಗಳನ್ನು (ಎಲ್‌ಎಎಂವಿ)ಕೊಳ್ಳುವ ಪ್ರಕ್ರಿಯೆಗೆ ಇಲಾಖೆ ಚಾಲನೆ ನೀಡಿದೆ.
ಈ ಕುರಿತಂತೆ, ಸೇವೆಯ ವತಿಯಿಂದ ರಿಕ್ವೆಸ್ಟ್ ಆಫ್ ಇಂಟೆರೆಸ್ಟ್ (ಆರ್‌ಎಫ್ಐ) ಪ್ರಕಟಿಸಲಾಗಿದೆ. ಅದರಲ್ಲಿ ಭಾರತೀಯ ಕಂಪೆನಿಗಳು ಸ್ವದೇಶದಲ್ಲೇ ಉತ್ಪಾದಿಸಲಾಗುವ ಎಲ್‌ಎಎಂವಿಗಳನ್ನು ಕೊಳ್ಳಲು ತಾನು ಸಿದ್ಧವಿರುವುದಾಗಿ ಸೇನೆ ತಿಳಿಸಿದೆ.
ಟೆಂಡರ್ ಪಡೆಯುವ ಕಂಪೆನಿಯು ಮುಂದಿನ 3 ವರ್ಷಗಳಲ್ಲಿ ಒಪ್ಪಂದದಲ್ಲಿ ಉಲ್ಲೇಖೀಸಲಾಗುವ ಎಲ್ಲ ಎಲ್‌ಎಎಂವಿ ವಾಹನಗಳನ್ನು ಸೇನೆಗೆ ಕಡ್ಡಾಯವಾಗಿ ಕೊಡಲೇಬೇಕು.
ವರ್ಷಕ್ಕೆ 300 ವಾಹನಗಳನ್ನು ತಯಾರಿಸಿ ಹಸ್ತಾಂತರ ಮಾಡಬೇಕು ಎಂದು ಸೇನೆ ಸೂಚಿಸಿದೆ. ಈ ವಾಹನಗಳನ್ನು ಪಶ್ಚಿಮ ಭಾಗದಲ್ಲಿರುವ ಪಾಕಿಸ್ಥಾನದೊಂದಿಗಿನ ಗಡಿ ರೇಖೆಯಲ್ಲೂ ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಸೇನೆ ತನ್ನ ಆರ್‌ಎಫ್ಐನಲ್ಲಿ ತಿಳಿಸಿದೆ.