Advertisement

ಮಳಿಗೆಗಳ ಟೆಂಡರ್‌ ವಿಳಂಬ

12:56 PM Feb 04, 2020 | Suhan S |

ದೇವದುರ್ಗ: ಇಲ್ಲಿನ ಎಪಿಎಂಸಿಯಲ್ಲಿ ನಿರ್ಮಿಸಿದ ಮಳಿಗೆಗಳ ಟೆಂಡರ್‌ ಪ್ರಕ್ರಿಯೆ ವಿಳಂಬದಿಂದಾಗಿ ಮಳಿಗೆಗಳು ನಿರುಪಯುಕ್ತವಾಗಿವೆ. ಇನ್ನೊಂದೆಡೆ ಇಲ್ಲಿ ಕೃಷಿ ಉತ್ಪನ್ನಗಳ ವಹಿವಾಟು ನಡೆಯದಿದ್ದರೂ ಮಳಿಗೆಗಳನ್ನು ನಿರ್ಮಿಸಿ ಸರ್ಕಾರದ ಅನುದಾನ ಪೋಲು ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

Advertisement

ಪ್ರತಿ ವರ್ಷ ದೇವದುರ್ಗ ಎಪಿಎಂಸಿಯಲ್ಲಿ ಕೃಷಿ ಉತ್ಪನ್ನ ವಹಿವಾಟು ನಡೆಸಿಕೊಂಡು ಬರಲಾಗುವುದು ಎಂದು ಹೇಳುತ್ತಲೇ ಇಲ್ಲಿನ ಎಪಿಎಂಸಿಯನ್ನು ರಾಯಚೂರು ಎಪಿಎಂಸಿಗೆ ವಿಲೀನ ಮಾಡುತ್ತ ಬರಲಾಗಿದೆ. ಹೀಗಾಗಿ ದೇವದುರ್ಗ ಎಪಿಎಂಸಿಯಲ್ಲಿ ಯಾವುದೇ ಕೃಷಿ ಉತ್ಪನ್ನಗಳ ವಹಿವಾಟು ನಡೆಯುತ್ತಿಲ್ಲ. ಸುತ್ತಮುತ್ತಲಿನ ರೈತರು ಕೃಷಿ ಉತ್ಪನ್ನಗಳನ್ನು ರಾಯಚೂರು ಇಲ್ಲವೇ ಇತರೆಜಿಲ್ಲೆಗಳ ಎಪಿಎಂಸಿಗೆ ತೆಗೆದುಕೊಂಡು ಹೋಗಿ ಮಾರುತ್ತಿದ್ದಾರೆ.

19 ಮಳಿಗೆ: ದೇವದುರ್ಗ ಎಪಿಎಂಸಿಯಲ್ಲಿ ಸುಮಾರು 10-15 ವರ್ಷಗಳ ಹಿಂದೆ ನಿರ್ಮಿಸಿದ 9 ಮಳಿಗೆಗಳು ಶಿಥಿಲಗೊಂಡಿದ್ದು, ಎರಡು ವರ್ಷದ ಹಿಂದೆ ದುರಸ್ತಿ ಮಾಡಲಾಗಿದೆ. ವರ್ಷದ ಹಿಂದೆ ಮತ್ತೇ 10 ಹೊಸ ಮಳಿಗೆ ನಿರ್ಮಿಸಲಾಗಿದೆ. ಆದರೆ ಇವುಗಳನ್ನು ಟೆಂಡರ್‌ ಕರೆದು ಹಂಚಿಕೆ ಮಾಡುವ ಕಾರ್ಯ ಆಗಿಲ್ಲ.

ಸರ್ಕಾರಕ್ಕೆ ಪ್ರಸ್ತಾವನೆ: ಎಪಿಎಂಸಿಯಲ್ಲಿ ನಿರ್ಮಿಸಿದ ಮಳಿಗೆಗಳನ್ನು ಟೆಂಡರ್‌ ಕರೆದು ಹಂಚಿಕೆ ಮಾಡಬೇಕಿದೆ.ಒಂದು ಮಳಿಗೆಗೆ ಜಿಎಸ್‌ಟಿ ಸೇರಿ 6,700 ರೂ. ಬಾಡಿಗೆ ನಿಗದಿಪಡಿಸಿ ಟೆಂಡರ್‌ ಪ್ರಕ್ರಿಯೆ ನಡೆಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈವರೆಗೆ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ.

ರಾಜಕೀಯ ಒತ್ತಡ: ಎಪಿಎಂಸಿಯಲ್ಲಿ ನಿರ್ಮಿಸಿದ ಮಳಿಗೆಗಳಲ್ಲಿ ತಮಗೆ ಮೂರ್‍ನಾಲ್ಕು ಮಳಿಗೆ ಬೇಕೆಂದು ರಾಜಕೀಯ ಪಕ್ಷಗಳ ಮುಖಂಡರು ಎಪಿಎಂಸಿ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆನ್ನಲಾಗಿದೆ. ಇಲ್ಲಿ ಕೃಷಿ ಉತ್ಪನ್ನ ವಹಿವಾಟು ನಡೆಯದಿದ್ದರೂ ಇವುಗಳನ್ನು ಬಾಡಿಗೆ ಪಡೆದು ಇತರೆ ವ್ಯಾಪಾರಸ್ಥರಿಗೆ ಹೆಚ್ಚಿನ ದರಕ್ಕೆ ಬಾಡಿಗೆ ನೀಡಿ ಆದಾಯ ಮಾಡಿಕೊಳ್ಳುವ ಉದ್ದೇಶ ಇವರದ್ದಾಗಿದೆ ಎನ್ನಲಾಗಿದೆ.

Advertisement

ಕೃಷಿ ಉತ್ಪನ್ನ ವಹಿವಾಟು ಇಲ್ಲ: ದೇವದುರ್ಗ ಎಪಿಎಂಸಿಯಲ್ಲಿ ಕೃಷಿ ಉತ್ಪನ್ನ ವಹಿವಾಟು ನಡೆಯದ್ದರಿಂದ ಸುತ್ತಲಿನ ಗ್ರಾಮಗಳ ರೈತರು ಕೃಷಿ ಉತ್ಪನ್ನ ಮಾರಾಟಕ್ಕೆ ಹೈದರಾಬಾದ್‌, ಹುಬ್ಬಳಿ, ರಾಯಚೂರು ಸೇರಿ ಇತರೆ ಜಿಲ್ಲೆಗೆ ಹೋಗಬೇಕಾಗಿದೆ.

ತುಕ್ಕು ಹಿಡಿಯುತ್ತಿದೆ ತೂಕದ ಯಂತ್ರ: ದೇವದುರ್ಗ ಎಪಿಎಂಸಿಯಲ್ಲಿ ಪ್ರತಿ ಶನಿವಾರ ಜಾನುವಾರು ಸಂತೆ ನಡೆಯುತ್ತದೆ. ಕುರಿ, ಆಡು, ಮೇಕೆ ತೂಕಕ್ಕಾಗಿ 60 ಲಕ್ಷ ಅನುದಾನದಲ್ಲಿ ತೂಕದ ಯಂತ್ರ ಸ್ಥಾಪಿಸಲಾಗಿದೆ. ಆದರೆ ಇದು ಬಳಕೆ ಆಗದೇ, ನಿರ್ವಹಣೆ ಇಲ್ಲದೇ ತುಕ್ಕು ಹಿಡಿಯುತ್ತಿದೆ.

ಪಾಳುಬಿದ್ದ ಕಲ್ಯಾಣ ಮಂಟಪ: ಎಪಿಎಂಸಿ ಆವರಣದಲ್ಲಿ ಸಾವಿತ್ರಮ್ಮ ಎ. ವೆಂಕಟೇಶ ನಾಯಕ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಆದರೆ ನಿರ್ವಹಣೆ ಇಲ್ಲದೇ ಪಾಳು ಬಿದ್ದಿದೆ. ಆರಂಭದ ಕೆಲ ವರ್ಷ ಮದುವೆ ಇನ್ನಿತರ ಕಾರ್ಯಗಳಿಗೆ ಬಾಡಿಗೆ ನೀಡಲಾಗಿತ್ತು. ಇದೀಗ ನಿರ್ವಹಣೆ ಇಲ್ಲದೇ ಹಾಳಾಗಿದ್ದು, ಸುತ್ತಲೂ ಜಾಲಿಗಿಡಗಳು ಬೆಳೆದಿವೆ. ಇನ್ನು ಮಳಿಗೆಗಳು ನಿರುಪಯುಕ್ತವಾಗಿದ್ದರಿಂದ ಕಿಡಿಗೇಡಿಗಳ ಅನೈತಿಕ ಚಟುವಟಿಕೆಗೆ ತಾಣವಾಗಿ ಮಾರ್ಪಟ್ಟಿವೆ. ಕಿಡಿಗೇಡಿಗಳು ಇಲ್ಲಿ ಮದ್ಯ ಸೇವಿಸುತ್ತಿದ್ದಾರೆ. ಆದ್ದರಿಂದ ಎಪಿಎಂಸಿಯಲ್ಲಿ ಕೃಷಿ ಉತ್ಪನ್ನ ವಹಿವಾಟು ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದ ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಆಗ್ರಹಿಸಿದ್ದಾರೆ.

ಎಪಿಎಂಸಿ ಮಳಿಗೆಗಳ ಟೆಂಡರ್‌ ಪ್ರಕ್ರಿಯೆ ಆರಂಭಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಜಿಎಸ್‌ಟಿ ಸೇರಿ ಒಂದು ಮಳಿಗೆಗೆ 6,700 ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಎಪಿಎಂಸಿ ಆವರಣದಲ್ಲಿ ಡಾಂಬರ್‌ ರಸ್ತೆ, ಚರಂಡಿ ಕಾಮಗಾರಿ ಆರಂಭವಾಗಿದೆ. ತಿಮ್ಮಪ್ಪ ನಾಯಕ, ಎಪಿಎಂಸಿ ಮೇಲ್ವಿಚಾರಕ

 

ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next