Advertisement

ಅಡಕತ್ತರಿಯಲ್ಲಿ ತ್ಯಾಜ್ಯವಿಲೇವಾರಿ ಟೆಂಡರ್‌

09:34 AM May 31, 2019 | Suhan S |

ಬೆಂಗಳೂರು: ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ವಾರ್ಡ್‌ವಾರು ತ್ಯಾಜ್ಯ ವಿಲೇವಾರಿಗೆ ಗುತ್ತಿಗೆ ವಿಚಾರ ಅಡಕತ್ತರಿಯಲ್ಲಿ ಸಿಲುಕುವಂತಾಗಿದೆ. ಘನತ್ಯಾಜ್ಯ ವಿಲೇವಾರಿಯಲ್ಲಿ ಪಾರದರ್ಶಕತೆ ತರುವ  ಉದ್ದೇಶ ದಿಂದ ಪಾಲಿಕೆ ಅಧಿಕಾರಿಗಳು ಹಸಿ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಟೆಂಡರ್‌ ಆಹ್ವಾನಿಸಿದ್ದಾರೆ. ಇದಕ್ಕೆ ಪಾಲಿಕೆ ಸದಸ್ಯರು ಆರಂಭದಲ್ಲಿ ಸಹಮತ ಸೂಚಿಸಿದರೂ, ನಂತರದಲ್ಲಿ ಹಸಿ ಹಾಗೂ ಒಣ ತ್ಯಾಜ್ಯ ವಿಲೇವಾರಿ ಜವಾಬ್ದಾರಿ ಒಬ್ಬರೇ ಗುತ್ತಿಗೆದಾರರಿಗೆ ನೀಡಬೇಕೆಂದು ಪಟ್ಟುಹಿಡಿದಿದ್ದಾರೆ.

Advertisement

ಇದರೊಂದಿಗೆ ಮೇಯರ್‌ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿ ಹಸಿ ಹಾಗೂ ಒಣ ತ್ಯಾಜ್ಯ ವಿಲೇವಾರಿ ಜವಾಬ್ದಾರಿಯನ್ನು ಒಬ್ಬರೇ ಗುತ್ತಿಗೆದಾರರಿಗೆ ವಹಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೆ, ಪಾಲಿಕೆ ಅಧಿಕಾರಿಗಳು ಮಾತ್ರ ಈಗಾಗಲೇ ಹಸಿ ತ್ಯಾಜ್ಯ ವಿಲೇವಾರಿಗೆ ಟೆಂಡರ್‌ ಪ್ರಕ್ರಿಯೆ ಆರಂಭಿಸಿ, ಶೀಘ್ರ ಕಾರ್ಯಾದೇಶ ನೀಡಲು ಸಿದ್ಧತೆ ನಡೆಸಿದ್ದಾರೆ.

ಗುರುವಾರ ಬಿಬಿಎಂಪಿ ಮಾಸಿಕ ಸಭೆಯಲ್ಲಿ ಪಾಲಿಕೆ ಸದಸ್ಯರು ಪಕ್ಷಾತೀತವಾಗಿ ಮತ್ತೆ ತಮ್ಮ ಹಿಂದಿನ ನಿರ್ಧಾರವನ್ನು ಆಯುಕ್ತರ ಮುಂದಿಟ್ಟಿದ್ದು, ಯಾವುದೇ ಕಾರಣಕ್ಕೂ ಹಸಿ-ಒಣ ಕಸ ವಿಲೇವಾರಿಗೆ ಪ್ರತ್ಯೇಕ ಟೆಂಡರ್‌ ಆಹ್ವಾನಿಸಬಾರದು ಎಂದು ಒತ್ತಾಯಿಸಿದರು. ಪ್ರತ್ಯೇಕ ಟೆಂಡರ್‌ ನೀಡುವುದರಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆ ಹೆಚ್ಚಾಗಲಿದೆ ಎಂದು ಎಚ್ಚರಿಸಿದರು. ಅದಕ್ಕೆ ಉತ್ತರಿಸಿದ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌, ಹಸಿ, ಒಣ ಮತ್ತು ಸಗಟು ತ್ಯಾಜ್ಯ ಪ್ರತ್ಯೇಕವಾಗಿ ಸಂಗ್ರಹಿಸಿ ನಿರ್ವಹಿಸಬೇಕೆಂದು ಹೈಕೋರ್ಟ್‌ ಆದೇಶವಿದೆ. ಚಿಂದಿ ಆಯುವವರಿಗೆ ಒಣ ತ್ಯಾಜ್ಯ ವಿಲೇವಾರಿ ಜವಾಬ್ದಾರಿ ವಹಿಸಲಾಗುವುದೆಂದರು.  ಪಾಲಿಕೆಯಿಂದ ವಾರ್ಡ್‌ವಾರು ತ್ಯಾಜ್ಯ ವಿಲೇವಾರಿಗೆ ಕಳೆದ 4 ವರ್ಷಗಳಿಂದ ಮೈಕ್ರೋ ಪ್ಲಾನ್‌ ಸಿದ್ಧಪಡಿಸಲಾಗಿದೆ.

ಅದರಂತೆ ವಾರ್ಡ್‌ನ ಬಡಾವಣೆ, ಮನೆ ಹಾಗೂ ರಸ್ತೆ ಜಿಪಿಎಸ್‌ ಮ್ಯಾಪಿಂಗ್‌ ಮಾಡಲಾಗಿದೆ. ಅದರ ಆಧಾರದ ಮೇಲೆ ಆಟೋ ಟಿಪ್ಪರ್‌, ಕಾಂಪ್ಯಾಕ್ಟರ್‌ಗಳನ್ನು ನಿಯೋಜಿಸಲಾ ಗಿದೆ. ಇದೀಗ ಸಗಟು ಉತ್ಪಾದಕರಿಂದಲೂ ಪಾಲಿಕೆಯೇ ತ್ಯಾಜ್ಯ ಸಂಗ್ರಹಿಸಲು ಮುಂದಾದರೆ, ಮತ್ತೆ ಮೈಕ್ರೋ ಪ್ಲಾನ್‌ ಮಾಡಬೇಕಾಗುತ್ತದೆ. ಹೀಗೆ ಮಾಡಿ ಟೆಂಡರ್‌ ಕರೆಯಲು ವರ್ಷ ಬೇಕಾಗುತ್ತದೆ ಎಂದು ಹೇಳಿದರು.

ಚಿಂದಿ ಆಯುವವರು ಬೀದಿ ಪಾಲಾಗುತ್ತಾರೆ!: ಪಾಲಿಕೆಯ 33 ವಾರ್ಡ್‌ಗಳಲ್ಲಿ 7,500ಕ್ಕೂ ಹೆಚ್ಚಿನ ಚಿಂದಿ ಆಯುವವರಿದ್ದು ಗುರುತಿನ ಚೀಟಿ ನೀಡಲಾಗಿದೆ. ಇವರಿಂದ ವಾರ್ಡ್‌ಗಳಲ್ಲಿ ತ್ಯಾಜ್ಯ ವಿಂಗಡಣೆ ಪ್ರಮಾಣ ಶೇ.80ಕ್ಕಿಂತ ಹೆಚ್ಚಿದೆ. ಹೀಗಾಗಿ ಉಳಿದ ವಾರ್ಡ್‌ಗಳಿಗೆ ಚಿಂದಿ ಆಯು ವವರು ಮತ್ತು ಎನ್‌ಜಿಒಗಳನ್ನು ನೇಮಿಸಲಾಗುವುದು. ಒಂದೊಮ್ಮೆ ಹಸಿ -ಒಣ ತ್ಯಾಜ್ಯ ವಿಲೇವಾರಿ ಜವಾಬ್ದಾರಿ ಒಬ್ಬರಿಗೆ ನೀಡಿದರೆ ಚಿಂದಿ ಆಯುವವರು ಬೀದಿಗೆ ಬೀಳುವಂತಾಗುತ್ತದೆ ಎಂದು ಆಯುಕ್ತರು ಹೇಳಿದರು.

Advertisement

ಶುಲ್ಕ ವಸೂಲಿ: 10 ಕೆ.ಜಿ.ಗಿಂತಲೂ ಹೆಚ್ಚಿನ ತ್ಯಾಜ್ಯ ಉತ್ಪಾದಿಸುವ ವಾಣಿಜ್ಯ ಉದ್ಯಮ ಮತ್ತು ವಸತಿ ಕಟ್ಟಡಗಳನ್ನು ಸಗಟು ತ್ಯಾಜ್ಯ ಉತ್ಪಾದಕರೆಂದು ಪರಿಗಣಿಸಲಾಗಿದೆ. ಗುತ್ತಿಗೆದಾರರೇ ಸಗಟು ಉತ್ಪಾದಕರಿಂದ ಹಣ ಪಡೆಯುತ್ತಿದ್ದು, ಬಿಬಿಎಂಪಿ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಪಾಲಿಕೆಗೆ ನಿಗದಿತ ಶುಲ್ಕ ಪಾವತಿಸುತ್ತಿದ್ದಾರೆಂದರು.

ಒಬ್ಬರಿಗೆ ಟೆಂಡರ್‌ ನೀಡಿ: ಆಯುಕ್ತರ ಉತ್ತರಕ್ಕೆ ಒಪ್ಪದ ಪಾಲಿಕೆ ಸದಸ್ಯರು, ಮತ್ತೂಮ್ಮೆ ಚರ್ಚಿಸಿ ಗುತ್ತಿಗೆ ಷರತ್ತು ಬದಲಿಸಿ ಎಂದು ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಗುತ್ತಿಗೆ ಷರತ್ತುಗಳನ್ನು ಸಂಪೂರ್ಣವಾಗಿ ಬದಲಿಸಲು ಸಾಧ್ಯವಾಗುವುದಿಲ್ಲ. 33 ವಾರ್ಡ್‌ಗಳಲ್ಲಿ ಚಿಂದಿ ಆಯುವವರು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ತಿಳಿಸಲು ಸಭೆ ನಡೆಸಲಾಗುವುದು. ಜತೆಗೆ ಟೆಂಡರ್‌ ನಲ್ಲಿಯೇ ವಾರ್ಡ್‌ನಲ್ಲಿ ಹೆಚ್ಚುವರಿ ಶೇ.25 ಆಟೋಗಳನ್ನು ಪಡೆಯಬಹುದು ಎಂಬ ನಿಯಮವಿದೆ. ಹೀಗಾಗಿ ಹೆಚ್ಚುವರಿ ಆಟೋಗಳನ್ನು ಒಣ ತ್ಯಾಜ್ಯ ವಿಲೇವಾರಿಗೆ ಬಳಸುವ ಕುರಿತಂತೆ ಚರ್ಚಿಸಲಾಗುವುದೆಂದರು. ರೋಗಿಗಳ ಪರದಾಟ:ಇಂದಿರಾನಗರ-ಕೋರಮಂಗಲದಿಂದ ಮಣಿಪಾಲ್‌ ಆಸ್ಪತ್ರೆಗೆ ಬರುವವರಿಗೆ ದೊಮ್ಮಲೂರು ಮೇಲ್ಸೇತುವೆ ಬಳಿ ಮಾರ್ಗಸೂಚಿ ಫ‌ಲಕವಿಲ್ಲ. ಯಾವ ಕಡೆ ಹೋಗಬೇಕೆಂದು ಗೊತ್ತಾಗದೆ ಸುತ್ತಿ ಬಳಸಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸೂಕ್ತ ಮಾರ್ಗಸೂಚಿ ಅಳವಡಿಸುವಂತೆ ಪಕ್ಷೇತರ ಸದಸ್ಯ ಲಕ್ಷ್ಮೀನಾರಾಯಣ ಆಗ್ರಹಿಸಿದರು. ಮಧ್ಯಪ್ರವೇಶಿಸಿದ ಮೇಯರ್‌ ಗಂಗಾಂಬಿಕೆ, ಪಾಲಿಕೆ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡು ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದೆಂದರು. ಬಿಬಿಎಂಪಿ ಮಾಸಿಕ ಸಭೆಯಲ್ಲಿ ಪಾಲಿಕೆ ಸದಸ್ಯರು ಪಕ್ಷಾತೀತವಾಗಿ ತಮ್ಮ ಅಭಿಪ್ರಾಯ ಮಂಡಿಸಿದರು.. ಕೌನ್ಸಿಲ್‌ ಸಭೆಯಲ್ಲಿ

ನಡೆದಿದ್ದು ಏನೇನು?: ಬಿಜೆಪಿ-ಕಾಂಗ್ರೆಸ್‌ ಸದಸ್ಯರು ತಮ್ಮ ನಾಯಕರನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಕೌನ್ಸಿಲ್‌ ಸಭೆಯ ಅರ್ಧ ದಿನ ಹಾಳು ಮಾಡಿದರು. ಕಾಂಗ್ರೆಸ್‌ ಪ್ರಧಾನಿ ಮೋದಿ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರೆ, ತಮ್ಮ ಪಕ್ಷದ ಹೀನಾಯ ಸೋಲನ್ನು ಬಿಜೆಪಿ ಸದಸ್ಯರು ಅಣಕಿಸಿದ ಕಾರಣಕ್ಕಾಗಿ ಕಾಂಗ್ರೆಸ್‌ ಸದಸ್ಯರು ಗದ್ದಲವೆಬ್ಬಿಸಿದರು. ಪರಿಣಾಮ ಸಭೆಯ ಅರ್ಧ ದಿನ ಯಾವುದೇ ಗಂಭೀರ ಚರ್ಚೆ ನಡೆಯದೆ ಮುಕ್ತಾಯವಾಯಿತು.

ಕುಸ್ತಿಗೆ ನಿಂತ ಸದಸ್ಯರು: ಸಭೆಯಲ್ಲಿ ಬಿಜೆಪಿ ಸದಸ್ಯ ಬಾಲಕೃಷ್ಣ ತಮ್ಮ ವಾರ್ಡ್‌ನಲ್ಲಿ ತ್ಯಾಜ್ಯ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂದು ಆರೋಪಿಸಿದರು. ಮಧ್ಯಪ್ರವೇಶಿಸಿದ ಕಾಂಗ್ರೆಸ್‌ ಸದಸ್ಯ ವೆಂಕಟೇಶ್‌, ಮೋದಿ ಅವರನ್ನು ಕೇಳಿ ಸರಿಪಡಿಸುತ್ತಾರೆ ಎಂದು ವ್ಯಂಗ್ಯವಾಡಿದರು. ಕೆರಳಿದ ಬಿಜೆಪಿ ಸದಸ್ಯರು, ಸಮಸ್ಯೆ ಬಗ್ಗೆ ಕೇಳಿದರೆ ಮೋದಿ ಅವರ ಹೆಸರನ್ನೇಕೆ ಎಳೆದು ತರುತ್ತೀರಿ ಎಂದರು. ಒಂದು ಹಂತದಲ್ಲಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಅವರಿದ್ದ ಕಡೆಗೆ ತೆರಳಿ ಕುಸ್ತಿ ಆಡುವಂತೆ ವರ್ತಿಸಿದರು. ಆಗ ಇತರ ಸದಸ್ಯರು ಇಬ್ಬರೂ ನಾಯಕರನ್ನು ತಡೆದರಾದರೂ, ಗಲಾಟೆ ಮಾತ್ರ ಕಡಿಮೆಯಾಗಲಿಲ್ಲ. ಹೀಗಾಗಿ ಮೇಯರ್‌ ಸಭೆ ಮುಂದೂಡಿದರು.

ಕೌನ್ಸಿಲ್‌ ಸಭೆಯಲ್ಲಿ ಮೋದಿ ಜಪ: ಸಭೆ ಆರಂಭದಲ್ಲೇ ಬಿಜೆಪಿಯ ಎಲ್ಲಾ 101 ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಮುಖವಾಡಧರಿಸಿ ಸಭಾಂಗಣದೊಳಗೆ ಬಂದರು. ಜತೆಗೆ, ಮೋದಿ ಮೋದಿ ಎಂಬ ಘೋಷಣೆ ಮೂಲಕ ಬಿಜೆಪಿ ಗೆಲುವನ್ನು ಸಂಭ್ರಮಿಸಿದರು.ಪಕ್ಷಾ ತೀತವಾಗಿ ಎಲ್ಲಾ ಸದಸ್ಯರು, ಬಿಜೆಪಿ ಗೆಲುವಿಗೆ ಅಭಿನಂದನೆ ಸಲ್ಲಿಸಿದರಲ್ಲದೆ, ಬೆಂಗಳೂರಿನ 3 ಕ್ಷೇತ್ರಗಳಿಂದ ಆಯ್ಕೆಯಾದ ನೂತನ ಸಂಸದರು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದಕಾರ್ಪೋರೇಟರ್‌ ಮುನಿಸ್ವಾಮಿ ಅವರಿಗೆ ಅಭಿನಂದಿಸಿದರು.

ಜಲಮಂಡಳಿ ಕಾರ್ಯವೈಖರಿಗೆ ಆಕ್ರೋಶ: ಜಲಮಂಡಳಿ ನಿರ್ಲಕ್ಷ್ಯದಿಂದ ಬಿಬಿಎಂಪಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳ ಜಾರಿಯಲ್ಲಿ ವಿಳಂಬವಾಗುತ್ತಿದೆ ಎಂದು ಮಾಜಿ ಮೇಯರ್‌ ಮಂಜುನಾಥರೆಡ್ಡಿ ಆರೋಪಿಸಿದರು. ಜಲಮಂಡಳಿ ಅಸಮರ್ಪಕ ಕಾಮಗಾರಿ ಕೈಗೆತ್ತಿಕೊಂಡಿದೆ. ಮಳೆಗಾಲಕ್ಕೆ ಮುಂಚಿತವಾಗಿ ವೈಟ್‌ಟಾಪಿಂಗ್‌ ಕಾಮಗಾರಿ ಮುಗಿಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದ್ದರೂ, ಜಲಮಂಡಳಿ ಪೈಪ್‌ ಸ್ಥಳಾಂತರ ಮಾಡುತ್ತಿಲ್ಲ. ಹೀಗಾಗಿ ಮತ್ತಿತರ ಕಾಮಗಾರಿಗಳಿಗೂ ಸಮಸ್ಯೆ ಎದುರಾಗುತ್ತಿದೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next