ಗಂಗಾವತಿ: ತುಂಗಭದ್ರಾ ನದಿಗೆ ವಿಜಯನಗರದ ಅರಸರು ನಿರ್ಮಿಸಿದ್ದರೆನ್ನಲಾಗುವ 800 ವರ್ಷಗಳ ಹಿಂದಿನ ವಿಜಯನಗರ ಕಾಲುವೆಗಳ ಶಾಶ್ವತ ದುರಸ್ತಿ ಕಾರ್ಯಕ್ಕೆ ರಾಜ್ಯ ಸರಕಾರ ಏಷಿಯನ್ ಬ್ಯಾಂಕ್ ನೆರವಿನೊಂದಿಗೆ 372 ಕೋಟಿ ರೂ. ಮಂಜೂರಿ ಮಾಡಿ ಕಾಮಗಾರಿ ಆರಂಭಿಸಿದೆ. ವಿಜಯನಗರ ಕಾಲುವೆಗಳು ಹೊಸಪೇಟೆ, ಕೊಪ್ಪಳ, ಗಂಗಾವತಿ ಮತ್ತು ಸಿರಗುಪ್ಪಾ ತಾಲೂಕಿನಲ್ಲಿದ್ದು ತುಂಗಭದ್ರಾ ನದಿಗೆ ನೈಸರ್ಗಿಕವಾಗಿ ಅಣೆಕಟ್ಟು ನಿರ್ಮಿಸಿ ನೆಲಮಟ್ಟದಲ್ಲಿ ಕಾಲುವೆಗಳನ್ನು ತೋಡಿ ರೈತರ ಭೂಮಿಗೆ ವಿಜಯನಗರದ ಅರಸರು ನೀರಾವರಿ ವ್ಯವಸ್ಥೆ ಮಾಡಿದ್ದರು. ಅಂದಿನ ಕಾಲದಲ್ಲಿ ಇಲ್ಲಿನ ರೈತರು ತೋಟಗಾರಿಕೆ, ಹೂವು ಮತ್ತು ಗಡ್ಡೆಗಳನ್ನು ಬೆಳೆಯುತ್ತಿದ್ದರು. ಇದರಿಂದಾಗಿ ವಿಜಯನಗರ ಸಾಮ್ರಾಜ್ಯದಲ್ಲಿ ಕೃಷಿ ಕ್ಷೇತ್ರ ಸಮೃದ್ಧವಾಗಿತ್ತು. ಪ್ರೌಢದೇವರಾಯನ ಕಾಲದಲ್ಲಿ ಈ ಅಣೆಕಟ್ಟುಗಳು, ಕೆರೆಗಳು ಮತ್ತು ನೆಲಮಟ್ಟ ಮತ್ತು ಗಂಗಾವತಿ ಮೇಲ್ಮಟ್ಟ, ಕೆಳಮಟ್ಟದ
ಅಣೆಕಟ್ಟು ನಿರ್ಮಿಸಿ ವರ್ಷದ 12 ತಿಂಗಳು ಕಾಲುವೆ ಮೂಲಕ ನೀರಾವರಿಯನ್ನು ಇಂದಿಗೂ ಕಲ್ಪಿಸಲಾಗುತ್ತಿದೆ. ನೀರಾವರಿ ಇಲಾಖೆ ಸರಿಯಾಗಿ ನಿರ್ವಾಹಣೆ ಮಾಡದ ಕಾರಣ ಅಣೆಕಟ್ಟು ಮತ್ತು ಕಾಲುವೆಗಳು ಶಿಥಿಲಗೊಂಡು ನೀರಿನ ಸೋರಿಕೆ ಅಧಿಕವಾಗುಗಿತ್ತು.
ಇಲ್ಲಿಯ ರೈತರು ವಿಜಯನಗರ ಕಾಲುವೆಗಳನ್ನು ದುರಸ್ತಿ ಮಾಡಿಸುವಂತೆ ದಶಕಗಳಿಂದ ಮನವಿ ಮಾಡುತ್ತಿದ್ದರು. 2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಸೇರಿ ಕಾಲುವೆಗಳ ವ್ಯಾಪ್ತಿಯ ಶಾಸಕರು ವಿಜಯನಗರ ಕಾಲುವೆಗಳ ದುರಸ್ತಿಗೊಳಿಸಲು ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ವಿಜಯನಗರ ಕಾಲುವೆಗಳ ದುರಸ್ತಿ ಮಾಡಲು 500 ಕೋಟಿ ಮಂಜೂರಿ ಮಾಡಲು ನಿರ್ಣಯ ತೆಗೆದುಕೊಂಡಿದ್ದರು.
ಈ ಕಾಲುವೆಗಳು ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಯುನೆಸ್ಕೋ ಮತ್ತು ನೀರನಾಯಿ ಸಂರಕ್ಷಿತ ಪ್ರದೇಶದಲ್ಲಿ ಬರುವುದರಿಂದ ಕಾಮಗಾರಿಗೆ ಆರ್ಥಿಕ ನೆರವು ನೀಡುವ ಏಷಯನ್ ಅಭಿವೃದ್ಧಿ ಬ್ಯಾಂಕ್ ಪರಿಸರ ಸಂರಕ್ಷಣೆ ಮಾಡುವ ಜತೆ ಕಾಲುವೆ ಕಾಮಗಾರಿ ಹೇಗೆ ನಿರ್ವಹಿಸಬೇಕೆಂದು ಹಲವು ಭಾರಿ ರೈತರು ಪರಿಸರ ತಜ್ಞರ ಜತೆ ಸಭೆ ನಡೆಸಿ ಸಲಹೆಗಳನ್ನು ಸ್ವೀಕರಿಸಿದ ನಂತರ ಇದೀಗ ಕಾಮಗಾರಿ ನಡೆಸಲು ಅನುಮತಿ ನೀಡಿದೆ. ಈಗಾಗಲೇ ಜಂಗಲ್ ಕಟಿಂಗ್ ನಡೆಸಿದ್ದು, ಮುಂದಿನ ಡಿಸೆಂಬರ್‌ನಲ್ಲಿ ಪೂರ್ಣಪ್ರಮಾಣದ ಕಾಮಗಾರಿ ನಡೆಯಲಿದೆ. ಪ್ರಸ್ತುತ ಹುಲಿಗಿ-ಶಿವಪೂರ, ಸಾಣಾಪೂರ-ಆನೆಗೊಂದಿ ಮತ್ತು ಗಂಗಾವತಿ ಮೇಲ್ಮಟ್ಟ, ಕೆಳಮಟ್ಟದ ಅಣೆಕಟ್ಟು ನಿರ್ಮಾಣಕ್ಕೆ ತಾಂತ್ರಿಕ ತೊಂದರೆ ಇದ್ದು, ಸರಕಾರ ಇವುಗಳಿಗೆ ಪ್ರತೇಕ ಟೆಂಡರ್ ಕರೆಯಲಿದೆ. ಸದ್ಯ ಕಾಲುವೆಗಳ ಶಾಶ್ವತ ದುರಸ್ತಿ ಕಾರ್ಯ ನಡೆಯಲಿದೆ.
ವರ್ಷದ 12ತಿಂಗಳು ನೀರಾವರಿ ಕಲ್ಪಿಸುವ ವಿಜಯನಗರ ಕಾಲುವೆಗಳು ಮತ್ತು ಅಣೆಕಟ್ಟುಗಳ ಶಾಶ್ವತ ದುರಸ್ತಿಗಾಗಿ ಒಟ್ಟು 372 ಕೋಟಿ ಮಂಜೂರಾಗಿದೆ. ಕಾಮಗಾರಿಯನ್ನು ಆರ್.ಎನ್. ಶೆಟ್ಟಿ ಕಂಪನಿ ನಿರ್ವಹಿಸಲಿದೆ. ಸದ್ಯ ಕಾಲುವೆಗಳ ದುರಸ್ತಿ ನಡೆಯಲಿದ್ದು, ಶೀಘ್ರದಲ್ಲೇ ಅಣೆಕಟ್ಟುಗಳ ದುರಸ್ತಿಗೆ ಪ್ರತೇಕ ಟೆಂಡರ್ ಕರೆಯಲಾಗುತ್ತದೆ. ಗಂಗಾವತಿ ಭಾಗದಲ್ಲಿ 94 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು, ಡಿಸೆಂಬರ್‌ನಿಂದ ಕೆಲಸ ಆರಂಭವಾಗಲಿದೆ. ರೈತರು ಒಂದು ಬೆಳೆಯನ್ನು ಬಿಡಬೇಕಾಗುತ್ತದೆ. ಮೂಲ ವಿನ್ಯಾಸಕ್ಕೆ ಧಕ್ಕೆಯಾಗದಂತೆ ಒಳ್ಳೆಯ ಗುಣಮಟ್ಟದ ಕಾಮಗಾರಿ ಮಾಡಿ ರೈತರಿಗೆ ಅನುಕೂಲ ಮಾಡಲಾಗುತ್ತದೆ.
–
ಪರಣ್ಣಮುನವಳ್ಳಿ,ಶಾಸಕರು
.ಕೆ.ನಿಂಗಜ