Advertisement

ದಶಕ ಕಳೆದರೂ ಸೂಕ್ತ ಪರಿಹಾರ ಮರೀಚಿಕೆ

01:42 AM May 22, 2020 | Sriram |

ಮಂಗಳೂರು: ಮಂಗಳೂರು ವಿಮಾನ ದುರಂತ ಸಂಭವಿಸಿ 10 ವರ್ಷ ಕಳೆದರೂ ಮಡಿದ ವರ ಕುಟುಂಬಗಳಿಗೆ “ಸೂಕ್ತ ಪರಿಹಾರ’ ಇನ್ನೂ ಮರೀಚಿಕೆಯಾಗಿದೆ.

Advertisement

ವಿಮಾನ ದುರಂತ ಸಂತ್ರಸ್ತರ ಸಮಿತಿ “ಸೂಕ್ತ ಪರಿಹಾರ’ಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ನಲ್ಲಿ ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ತೀರ್ಪಿನ ನಿರೀಕ್ಷೆ ಯಲ್ಲಿದೆ.

2010 ಮೇ 22ರಂದು ಮುಂಜಾನೆ ಮಂಗಳೂರಿಗೆ ದುಬಾೖ ಯಿಂದ ಬಂದಿಳಿದ ಏರ್‌ ಇಂಡಿಯಾ ಎಕ್ಸ್‌ ಪ್ರಸ್‌ ರನ್‌ವೇಯಿಂದ ಜಾರಿ ಕೆಳಗಿನ ಕೆಂಜಾರಿನ ಪ್ರಪಾತಕ್ಕೆ ಬಿದ್ದು 158 ಪ್ರಯಾಣಿಕರು ಸಾವನ್ನಪ್ಪಿದ್ದರು. 8 ಮಂದಿ ಬದುಕುಳಿದಿದ್ದರು.

ಮೃತರ ಕುಟುಂಬದ ಸದಸ್ಯರು/ ವಾರಸುದಾರರಿಗೆ ವಿಮಾನ ಯಾನ ಸಂಸ್ಥೆ ತನ್ನ ವಿಮೆಯನ್ನು ಸೇರಿಸಿ ನಿರ್ದಿಷ್ಟ ಮೊತ್ತದ ಪರಿಹಾರವನ್ನು ವಿತರಿಸಿದ್ದು, ಅದನ್ನು ಬಹುತೇಕ ಎಲ್ಲರೂ ಸ್ವೀಕರಿಸಿದ್ದಾರೆ. ಆದರೆ ಅದು “ಸೂಕ್ತ ಪರಿಹಾರ’ ಅಲ್ಲ; “ಮಾಂಟ್ರಿಯಲ್‌ ಒಪ್ಪಂದ’ದ ಪ್ರಕಾರವೇ ನೀಡಬೇಕು ಎನ್ನುವುದು ಸಂತ್ರಸ್ತರ ಸಮಿತಿಯ ಆಗ್ರಹ.

ಮಾಂಟ್ರಿಯಲ್‌ ಒಪ್ಪಂದದ ಪ್ರಕಾರ ವಿಮಾನ ದುರಂತ ಸಂತ್ರಸ್ತರ ಕುಟುಂಬಗಳಿಗೆ ಕನಿಷ್ಠ ಪರಿಹಾರ ಮೊತ್ತ ಅಂದಾಜು 75 ಲಕ್ಷ ರೂ. ಸಿಗಬಹುದು. ಹಾಗಾಗಿ ಈ ನಿಟ್ಟಿನಲ್ಲಿ ಸಂತ್ರಸ್ತರ ಸಮಿತಿಯು ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆ ಹೂಡಿದ್ದು, ವಿಚಾರಣೆ ಮುಗಿದಿದೆ. ಅಂತಿಮ ತೀರ್ಮಾನಕ್ಕಾಗಿ ಕಾಯು ತ್ತಿದ್ದೇವೆ. ಕೋವಿಡ್ 19 ಕಾರಣ ಕೋರ್ಟ್‌ ಕಲಾಪಗಳು ಸುಗಮವಾಗಿ ನಡೆಯದೆ ವಿಳಂಬವಾಗಿದೆ ಎಂದು ಸಮಿತಿಯ ಅಬ್ದುಲ್‌ ರಜಾಕ್‌ ಅವರು ಉದಯವಾಣಿಗೆ ತಿಳಿಸಿದ್ದಾರೆ.

Advertisement

ಏನಿದು
ಮಾಂಟ್ರಿಯಲ್‌ ಒಪ್ಪಂದ?
ವಿಮಾನ ಯಾನದ ಸಂದರ್ಭ ದುರಂತ ಘಟಿಸಿ ಸಾವು-ನೋವು ಸಂಭವಿಸಿದರೆ, ವಿಮಾನ ವಿಳಂಬವಾದರೆ, ಸರಕು (ಕಾರ್ಗೊ) ನಷ್ಟ ಅಥವಾ ಹಾನಿಗೊಂಡರೆ ನೀಡಬೇಕಾದ ಪರಿಹಾರ ಮೊತ್ತಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಒಪ್ಪಂದ ಇದು. 1999ರಲ್ಲಿ ಕೆನಡಾದ ಮಾಂಟ್ರಿಯಲ್‌ನಲ್ಲಿ ಅಂತಾರಾಷ್ಟ್ರೀಯ ನಾಗರಿಕ ವಿಮಾನ ಯಾನ ಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಭಾರತವೂ ಸಹಿ ಮಾಡಿದೆ. ಈ ಒಪ್ಪಂದದಿಂದ ವಿಮಾನ ಪ್ರಯಾಣಿಕರಿಗೆ ಸೂಕ್ತ ಪರಿಹಾರ ಪಡೆಯಲು, ವಿಮಾನ ಸಂಸ್ಥೆಗಳಿಗೆ ಅತ್ಯುತ್ತಮ ಸೇವೆ ಒದಗಿಸಲು ಅನುಕೂಲವಾಗುತ್ತದೆ.

ಇಂದು ವಾರ್ಷಿಕ ಸಂಸ್ಮರಣೆ
ಮಂಗಳೂರು ವಿಮಾನ ದುರಂತದ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮವು ಮೇ 22ರಂದು ಬೆಳಗ್ಗೆ 9.30ಕ್ಕೆ ಕೂಳೂರು -ತಣ್ಣೀರುಬಾವಿ ರಸ್ತೆಯಲ್ಲಿರುವ ಸ್ಮಾರಕ ಸ್ಥಳದಲ್ಲಿ ನಡೆಯಲಿದೆ.

ಕನಿಷ್ಠ ಪರಿಹಾರದ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಮಾಂಟ್ರಿಯಲ್‌ ಒಪ್ಪಂದವನ್ನು ಅನ್ವಯಿಸ ಬೇಕೆಂಬುದು ನಮ್ಮ ಬೇಡಿಕೆ. ಸುಪ್ರೀಂ ಕೋರ್ಟಿನ ಅಭಿಪ್ರಾಯದ ನಿರೀಕ್ಷೆಯಲ್ಲಿದ್ದೇವೆ.
– ವೈ. ಮಹಮದ್‌ ಬ್ಯಾರಿ,
ಮಂಗಳೂರು ವಿಮಾನ ದುರಂತ ಸಂತ್ರಸ್ತರ ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next