Advertisement

ಹತ್ತು ತಂಡ, ಹತ್ತಾರು ನಂಬಿಕೆ, ಇಂದಿನಿಂದ ಐಪಿಎಲ್‌

10:10 PM Mar 30, 2023 | Team Udayavani |

ಭಾರತೀಯ ಸಿನಿಮಾಗಳು ಬಿಡುಗಡೆಯಾಗುವುದೇ ಶುಕ್ರವಾರದಂದು. ಈ ದಿನ ಲಕ್ಷ್ಮಿ ದೇವಿಯನ್ನು ಬಹಳ ಆರಾಧಿಸುತ್ತಾರೆ. ವಿಶೇಷವೆಂದರೆ ಈ ಬಾರಿಯ ಐಪಿಎಲ್‌ ಕೂಡ ಶುಕ್ರವಾರದಿಂದಲೇ ಆರಂಭವಾಗುತ್ತಿದೆ. 10 ತಂಡಗಳು, 74 ಪಂದ್ಯಗಳು ಸೇರಿ ಹಲವು ಬದಲಾವಣೆಗಳ ನಡುವೆಯೇ ತಂಡಗಳು ಕಣಕ್ಕಿಳಿಯಲಿವೆ. ಹಲವು ವಿಶೇಷಗಳನ್ನು ಹೊತ್ತಿರುವ ಐಪಿಎಲ್‌ 16ನೇ ಆವೃತ್ತಿ ಕುರಿತ ಇಣುಕು ನೋಟ ಇಲ್ಲಿದೆ.

Advertisement

ತಂಡಗಳು
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು
ವಿರಾಟ್‌ ಕೊಹ್ಲಿಯಂತಹ ಮಹಾನ್‌ ತಾರೆಯನ್ನು ಹೊಂದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಒಮ್ಮೆಯೂ ಐಪಿಎಲ್‌ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿ ಆ ಬರವನ್ನು ನೀಗಿಸಿಕೊಳ್ಳುವ ಉದ್ದೇಶ ಹೊಂದಿದೆ.
ಶಕ್ತಿ: ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಲಯ ಹೊಂದಿದ್ದಾರೆ. ನಾಯಕ ಫಾ ಡು ಪ್ಲೆಸಿಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಬ್ಯಾಟಿಂಗ್‌.
ದೌರ್ಬಲ್ಯ: ಆರ್‌ಸಿಬಿ ಬೌಲಿಂಗ್‌ನಲ್ಲಿ ಬಹಳ ಕಳಪೆ ದಾಖಲೆ ಹೊಂದಿದೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ದುರ್ಬಲ.
ಮುಖ್ಯ ಆಟಗಾರರು: ಕೊಹ್ಲಿ, ಮ್ಯಾಕ್ಸ್‌ವೆಲ್‌, ಮೊಹಮ್ಮದ್‌ ಸಿರಾಜ್‌

ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ನಾಯಕತ್ವದಲ್ಲಿ ಐದು ಬಾರಿ ಐಪಿಎಲ್‌ ಪ್ರಶಸ್ತಿಗಳನ್ನು ಗೆದ್ದಿರುವ ಮುಂಬೈ ಅತ್ಯಂತ ಬಲಿಷ್ಠ ತಂಡ. ಈ ಬಾರಿಯೂ ಅದನ್ನು ಮುಂದುವರಿಸುವ ಉತ್ಸಾಹ ಹೊಂದಿದೆ.
ಶಕ್ತಿ: ರೋಹಿತ್‌, ಸೂರ್ಯಕುಮಾರ್‌, ಕಿಶನ್‌ರನ್ನೊಳಗೊಂಡಂತೆ ಕೂಟದಲ್ಲೇ ಅತ್ಯಂತ ಬಲಿಷ್ಠ ಬ್ಯಾಟಿಂಗ್‌ ಲೈನ್‌ಅಪ್‌.
ದೌರ್ಬಲ್ಯ: ವೇಗಿ ಬುಮ್ರಾ ಈ ಬಾರಿ ಆಡುತ್ತಿಲ್ಲ. ಹಾಗಾಗಿ ಜೋಫ್ರಾ ಆರ್ಚರ್‌ ಒಬ್ಬರೇ ನಂಬಿಗಸ್ಥ ಬೌಲರ್‌.
ಮುಖ್ಯ ಆಟಗಾರರು: ರೋಹಿತ್‌ ಶರ್ಮ, ಸೂರ್ಯಕುಮಾರ್‌ ಯಾದವ್‌, ಟಿಮ್‌ ಡೇವಿಡ್‌.

ಚೆನ್ನೈ ಸೂಪರ್‌ ಕಿಂಗ್ಸ್‌
ಬೆನ್‌ ಸ್ಟೋಕ್ಸ್‌ರನ್ನು ಚೆನ್ನೈ ಕಿಂಗ್ಸ್‌ 16 ಕೋಟಿ ರೂ. ನೀಡಿ ಖರೀದಿಸಿದೆ. ಅಲ್ಲಿಗೆ ಧೋನಿ ನಂತರ ತಂಡದ ಚುಕ್ಕಾಣಿ ಅವರೇ ಹಿಡಿಯಲಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಈ ತಂಡ 4 ಬಾರಿ ಪ್ರಶಸ್ತಿ ಗೆದ್ದಿದೆ.
ಶಕ್ತಿ: ಎಂ.ಎಸ್‌.ಧೋನಿಯ ನಾಯಕತ್ವ, ಹಾಗೆಯೇ ತಂಡದಲ್ಲಿರುವ ಅತ್ಯಂತ ಅನುಭವ ಆಟಗಾರರು.
ದೌರ್ಬಲ್ಯ: ತಂಡದ ವೇಗದ ಬೌಲಿಂಗ್‌ ವಿಭಾಗ ದುರ್ಬಲ. ಗಾಯದಿಂದ ಸುಧಾರಿಸಿಕೊಂಡಿರುವ ದೀಪಕ್‌ ಚಹರ್‌ರನ್ನು ಅವಲಂಬಿಸುವುದು ಅಸಾಧ್ಯ.
ಮುಖ್ಯ ಆಟಗಾರರು: ಎಂ.ಎಸ್‌.ಧೋನಿ, ಬೆನ್‌ ಸ್ಟೋಕ್ಸ್‌, ರವೀಂದ್ರ ಜಡೇಜ

ಕೋಲ್ಕತ ನೈಟ್‌ ರೈಡರ್ಸ್‌
ಎರಡು ಬಾರಿ ಚಾಂಪಿಯನ್‌ ಆಗಿರುವ ಕೋಲ್ಕತ ನೈಟ್‌ ರೈಡರ್ಸ್‌ ತಂಡ ಈ ಬಾರಿ ಶ್ರೇಯಸ್‌ ಐಯ್ಯರ್‌ ಗೈರಿನಿಂದ ದುರ್ಬಲವಾಗಿ ಗೋಚರಿಸುತ್ತಿದೆ.ಶಕ್ತಿ: ಆಲ್‌ರೌಂಡರ್‌ಗಳೇ ಈ ತಂಡದ ಶಕ್ತಿ: ಆಂಡ್ರೆ ರಸೆಲ್‌, ಶಾರ್ದೂಲ್‌ ಠಾಕೂರ್‌, ಸುನೀಲ್‌ ನಾರಾಯಣ್‌, ಶಕಿಬ್‌ ಹಸನ್‌ ಎರಡೂ ವಿಭಾಗಗಳಲ್ಲಿ ನೆರವಾಗುತ್ತಾರೆ.
ದೌರ್ಬಲ್ಯ: ಆರಂಭಿಕ ಬ್ಯಾಟಿಂಗ್‌ ಕ್ರಮಾಂಕ ಅಸ್ಥಿರವಾಗಿದೆ. ಸ್ಥಿರವಾಗಿ ಆಡಬಲ್ಲ ಬ್ಯಾಟರ್‌ಗಳ ಕೊರತೆಯಿದೆ.
ಮುಖ್ಯ ಆಟಗಾರರು: ನಿತೀಶ್‌ ರಾಣಾ, ಶಾರ್ದೂಲ್‌ ಠಾಕೂರ್‌, ಆಂಡ್ರೆ ರಸೆಲ್‌.

Advertisement

ಸನ್‌ರೈಸರ್ಸ್‌ ಹೈದ್ರಾಬಾದ್‌
ಒಂದು ಬಾರಿಯ ಚಾಂಪಿಯನ್‌ ಆಗಿರುವ ಹೈದ್ರಾಬಾದ್‌ ತಂಡ ಬಲಿಷ್ಠವಾಗಿದೆ. ಲಯದಲ್ಲಿರುವ ವಿದೇಶಿ ಆಟಗಾರರಿಂದ ತುಂಬಿಕೊಂಡಿದೆ.
ಶಕ್ತಿ: ಉಮ್ರಾನ್‌ ಮಲಿಕ್‌, ಭುವನೇಶ್ವರ್‌ ಕುಮಾರ್‌, ಟಿ.ನಟರಾಜನ್‌ರನ್ನು ಹೊಂದಿರುವ ಅತ್ಯುತ್ತಮ ಬೌಲಿಂಗ್‌ ವಿಭಾಗ.
ದೌರ್ಬಲ್ಯ: ಈ ತಂಡ ಬ್ಯಾಟಿಂಗ್‌ ಅಸ್ಥಿರವಾಗಿದೆ. ದೇಶೀಯ ಆಟಗಾರರು ಗಮನ ಸೆಳೆದಿಲ್ಲ.
ಮುಖ್ಯ ಆಟಗಾರರು: ಐಡೆನ್‌ ಮಾರ್ಕ್ರಮ್‌, ಹ್ಯಾರಿ ಬ್ರೂಕ್‌, ಉಮ್ರಾನ್‌ ಮಲಿಕ್‌

ರಾಜಸ್ಥಾನ್‌ ರಾಯಲ್ಸ್‌
ಮೊದಲ ಐಪಿಎಲ್‌ ಪ್ರಶಸ್ತಿಯನ್ನು ಗೆದ್ದಿರುವ ರಾಜಸ್ಥಾನ್‌ ರಾಯಲ್ಸ್‌, 2022ರಲ್ಲಿ ಇನ್ನೊಮ್ಮೆ ಫೈನಲ್‌ಗೇರಿತ್ತು. ಈ ಬಾರಿ ನವೋತ್ಸಾಹದಲ್ಲಿದೆ.
ಶಕ್ತಿ: ಅನುಭವಿ ಮತ್ತು ಭರವಸೆಯ ಯುವ ಆಟಗಾರರ ಉತ್ತಮ ಸಂಯೋಜನೆಯಿದೆ.
ದೌರ್ಬಲ್ಯ: ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ದುರ್ಬಲ. ಶಿಮ್ರಾನ್‌ ಹೆಟ್‌ಮೈರ್‌ ಅಸ್ಥಿರ ಪ್ರದರ್ಶನ.
ಮುಖ್ಯ ಆಟಗಾರರು: ಜೋಸ್‌ ಬಟ್ಲರ್‌, ಯಜುವೇಂದ್ರ ಚಹಲ್‌, ಸಂಜು ಸ್ಯಾಮ್ಸನ್‌.

ಪಂಜಾಬ್‌ ಕಿಂಗ್ಸ್‌
ಪಂಜಾಬ್‌ ಕಿಂಗ್ಸ್‌ ತಂಡ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. 2014ರಲ್ಲಿ ಫೈನಲ್‌ಗೇರಿದ್ದೇ ಅತ್ಯುತ್ತಮ ಸಾಧನೆ.
ಶಕ್ತಿ: ತಂಡದ ಬ್ಯಾಟಿಂಗ್‌ ಪಡೆಯಲ್ಲಿ ಧವನ್‌, ಲಿವಿಂಗ್‌ಸ್ಟೋನ್‌, ರಾಜಪಕ್ಸ, ಸ್ಯಾಮ್‌ ಕರನ್‌ರಂತಹ ಸಿಡಿಗುಂಡುಗಳಿದ್ದಾರೆ.
ದೌರ್ಬಲ್ಯ: ಅಂತಿಮ ಓವರ್‌ಗಳಲ್ಲಿ ನಿಖರ ದಾಳಿ ಸಂಘಟಿಸಬಲ್ಲ ಬೌಲಿಂಗ್‌ ತುಕಡಿಯಿಲ್ಲ.
ಮುಖ್ಯ ಆಟಗಾರರು: ಶಿಖರ್‌ ಧವನ್‌, ಸ್ಯಾಮ ಕರನ್‌, ಅರ್ಷದೀಪ್‌ ಸಿಂಗ್‌.

ಡೆಲ್ಲಿ ಕ್ಯಾಪಿಟಲ್ಸ್‌
ಒಮ್ಮೆಯೂ ಐಪಿಎಲ್‌ ಗೆಲ್ಲದ ತಂಡಗಳಲ್ಲಿ ಡೆಲ್ಲಿಯೂ ಒಂದು. ಕಳೆದ ನಾಲ್ಕು ಆವೃತ್ತಿಗಳಿಂದ ತಂಡ ಬಹಳ ಸುಧಾರಿಸಿದೆ.

ಶಕ್ತಿ: ಡೇವಿಡ್‌ ವಾರ್ನರ್‌, ಮಿಚೆಲ್‌ ಮಾರ್ಷ್‌, ಪೃಥ್ವಿ ಶಾ ಅವರಿರುವ ಪ್ರಬಲ ಅಗ್ರಕ್ರಮಾಂಕ.
ದೌರ್ಬಲ್ಯ: ರಿಷಭ್‌ ಪಂತ್‌ ಗೈರಿನಿಂದ ಅತ್ಯುತ್ತಮ ವಿಕೆಟ್‌ ಕೀಪಿಂಗ್‌ ಬ್ಯಾಟರ್‌ ಇಲ್ಲವಾಗಿದ್ದಾರೆ.
ಮುಖ್ಯ ಆಟಗಾರರು: ಡೇವಿಡ್‌ ವಾರ್ನರ್‌, ಅಕ್ಷರ್‌ ಪಟೇಲ್‌, ಅನ್ರಿಚ್‌ ನೋರ್ಜೆ.

ಗುಜರಾತ್‌ ಟೈಟಾನ್ಸ್‌
2022ರಲ್ಲಿ ಮೊದಲ ಬಾರಿಗೆ ಆಡಿದ ಗುಜರಾತ್‌ ಟೈಟಾನ್ಸ್‌ ಇದೇ ಯತ್ನದಲ್ಲಿ ಪ್ರಶಸ್ತಿ ಗೆದ್ದಿದೆ. ಹಾರ್ದಿಕ್‌ ಪಾಂಡ್ಯ ನಾಯಕತ್ವದಲ್ಲಿ ಈ ಬಾರಿಯೂ ಬಲಿಷ್ಠವಾಗಿದೆ.
ಶಕ್ತಿ: ಹಾರ್ದಿಕ್‌, ಶುಭಮನ್‌ ಗಿಲ್‌, ಶಮಿ, ಮಿಲ್ಲರ್‌ರಂತಹ ಆಟಗಾರರ ಉಪಸ್ಥಿತಿಯಲ್ಲಿ ತಂಡ ಪ್ರಬಲವಾಗಿದೆ.
ದೌರ್ಬಲ್ಯ: ಲಾಕೀ ಫ‌ರ್ಗ್ಯುಸನ್‌ ಕೋಲ್ಕತ ಪಾಲಾಗಿರುವುದರಿಂದ ಬೌಲಿಂಗ್‌ ವಿಭಾಗ ಸ್ವಲ್ಪ ಸಂದಿಗ್ಧದಲ್ಲಿದೆ.
ಮುಖ್ಯ ಆಟಗಾರರು: ಹಾರ್ದಿಕ್‌ ಪಾಂಡ್ಯ, ಶುಭಮನ್‌ ಗಿಲ್‌, ಮೊಹಮ್ಮದ್‌ ಶಮಿ.

ಲಕ್ನೋ ಸೂಪರ್‌ ಜೈಂಟ್ಸ್‌
2022ರಲ್ಲಿ ಕೆ.ಎಲ್‌.ರಾಹುಲ್‌ ನಾಯಕತ್ವದಲ್ಲಿ ಆಡಿದ ಲಕ್ನೋ ಸೂಪರ್‌ ಜೈಂಟ್ಸ್‌ 3ನೇ ಸ್ಥಾನ ಪಡೆದಿತ್ತು. ಈ ಬಾರಿ ಅದನ್ನು ಮೀರುವುದೇ ಅದರ ಗುರಿ.
ಶಕ್ತಿ: ರಾಹುಲ್‌, ಡಿ ಕಾಕ್‌ರಂತಹ ಸ್ಫೋಟಕ ಬ್ಯಾಟರ್‌ಗಳಿದ್ದಾರೆ. ಆಲ್‌ರೌಂಡರ್‌ಗಳ ದೊಡ್ಡ ಬಳಗವೇ ಇದೆ.
ದೌರ್ಬಲ್ಯ: ಸ್ಪಿನ್‌ ಬೌಲಿಂಗ್‌ ವಿಭಾಗ ದುರ್ಬಲವಾಗಿದೆ. ರವಿ ಬಿಷ್ಣೋಯಿ ಒಬ್ಬರೇ ಇಲ್ಲಿ ಆಸರೆ.
ಮುಖ್ಯ ಆಟಗಾರರು: ಕ್ವಿಂಟನ್‌ ಡಿ ಕಾಕ್‌, ಕೆ.ಎಲ್‌.ರಾಹುಲ್‌, ಮಾರ್ಕ್‌ ವುಡ್‌.

Advertisement

Udayavani is now on Telegram. Click here to join our channel and stay updated with the latest news.

Next