Advertisement

ಭಾರಿ ಸಿಡಿಲಿಗೆ ಹತ್ತು ಮಂದಿ ಬಲಿ​​​​​​​

06:00 AM Apr 16, 2018 | |

ಹುಬ್ಬಳ್ಳಿ: ಬೇಸಿಗೆ ಮಳೆ ಅಬ್ಬರಕ್ಕೆ ಉತ್ತರ ಕರ್ನಾಟಕ ಅಕ್ಷರಶಃ ತತ್ತರಿಸಿ ಹೋಗಿದೆ. ರವಿವಾರ ಸಿಡಿಲಿಗೆ 10 ಜನ ಮೃತಪಟ್ಟಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಭತ್ತದ ಬೆಳೆ ನೆಲಕಚ್ಚಿದ್ದು, ಮರಗಳು ಧರೆಗುರುಳಿ ಸಂಚಾರ ಅಸ್ತವ್ಯಸ್ತವಾಗಿದೆ.


ಯಾದಗಿರಿ ಜಿಲ್ಲೆಯಲ್ಲಿ ಸಿಡಿಲಿಗೆ ತಂದೆ-ಮಗ ಸೇರಿದಂತೆ ಆರು ಜನ ಮತ್ತು 12 ಕುರಿಗಳು, ಒಂದು ಆಕಳು ಮೃತಪಟ್ಟಿವೆ. ಶಹಾಪುರ ತಾಲೂಕು ಶಾರದಳ್ಳಿ ಗ್ರಾಮದ ಹೊರವಲಯದಲ್ಲಿ ಜಮೀನು ಕೆಲಸಕ್ಕೆ ಹೋದಾಗ ಸಿಡಿಲು ಬಡಿದು ತಂದೆ ಹಣಮಂತ ಮರೆಪ್ಪ (48) ಮತ್ತು ಮಗ ಭೀಮಣ್ಣ ಹಣಮಂತ (16) ಮೃತಪಟ್ಟಿದ್ದಾರೆ. ಅಲ್ದಾಳ ಗ್ರಾಮದ ಕುಮಾರ ಶಿವಲಿಂಗಪ್ಪ ಪಾಟೀಲ (40), ಗುರುಮಠಕಲ್‌ ಪಟ್ಟಣ ಕೆರೆ ಹತ್ತಿರದ ಈಶ್ವರ ದೇವಸ್ಥಾನದಲ್ಲಿ ತಂಗಿದ್ದ ಬುಗ್ಗಪ್ಪ ಜಂಗಲಬನಿ (32), ಸುರಪುರ ತಾಲೂಕು ಕಕ್ಕೇರಾ ಸಮೀಪದ ಪಿರಗಾರದೊಡ್ಡಿಯಲ್ಲಿ ದನಗಾಯಿ ಮೌನೇಶ (13) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಗಾಯಗೊಂಡಿರುವ ರಾಕೇಶ, ಹಣಮಂತ, ಪುರುಷೋತ್ತಮ ಎಂಬುವವರನ್ನು ರಾಯಚೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಹಾಪುರ ತಾಲೂಕು ಗೋಗಿಯಲ್ಲಿ 23 ಕುರಿಗಳು ಮೃತಪಟ್ಟಿವೆ.


ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಬರಡೋಲದಲ್ಲಿ ಸಿಡಿಲಿಗೆ 8 ವರ್ಷದ ಪ್ರತಿಭಾ ಹನುಮಂತ ಸಂಖ, 13 ವರ್ಷದ ಪೂಜಾ ಈರಣ್ಣ ಮೇಡೆದಾರ ಎಂಬ ಬಾಲಕಿಯರು ಬಲಿಯಾಗಿದ್ದಾರೆ. ಇಂಡಿ ತಾಲೂಕಿನ ಚೋರಗಿ ಗ್ರಾಮದ ಪೂಜಾ ಬೇಡಿಗೆ ಶಾಲೆಗೆ ರಜೆ ಇದ್ದಿದ್ದರಿಂದ ಬರಡೋಲ ಗ್ರಾಮದ ದೊಡ್ಡಮ್ಮನ ಮನೆಗೆ ಬಂದಿದ್ದಳು. ಘಟನೆಯಲ್ಲಿ ಸ್ಥಳದಲ್ಲಿದ್ದ ಇನ್ನು ಮೂವರು ಅದೃಷ್ಟವಶಾತ್‌ ಪಾರಾಗಿದ್ದಾರೆ. ಸಿಂದಗಿ ಪಟ್ಟಣದಲ್ಲಿ ಕಾಲೇಜು ಮೈದಾನದಲ್ಲಿ ಜೋರಾಗಿ ಬೀಸಿದ ಬಿರುಗಾಳಿಯಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದಾಗ ಸಿಡಿಲು ಬಡಿದು ಬಮ್ಮನಳ್ಳಿ ನಿವಾಸಿ ಸತೀಶ ನಾರಾಯಣಪುರ (16) ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. 


ಮುದ್ದೇಬಿಹಾಳ, ಇಂಡಿ, ಬಸವನ ಬಾಗೇವಾಡಿ ಸೇರಿದಂತೆ ಇತರೆ ತಾಲೂಕಿನಲ್ಲಿ ಭಾರಿ ಬಿರುಗಾಳಿ ಸಹಿತ ಮಳೆ ಸುರಿದಿದೆ. ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ಮುದ್ದೇಬಿಹಾಳ ಪಟ್ಟಣದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ರದ್ದಾಗಿದೆ.

Advertisement

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದಲ್ಲಿ ಸಿಡಿಲು ಬಡಿದು ಉಮೇಶ ಹಲಗಿಯವರ (38) ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ಮೆಹಬೂಬ್‌ (19) ಸಿಡಿಲಿಗೆ ಬಲಿಯಾಗಿದ್ದಾರೆ. ಧಾರವಾಡ, ಹಾವೇರಿ, ಬೆಳಗಾವಿ, ಕೊಪ್ಪಳ ಜಿಲ್ಲೆ ಸೇರಿದಂತೆ ವಿವಿಧೆಡೆ ಆಲಿಕಲ್ಲು ಮಳೆಯಾಗಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next