Advertisement

ನೆರೆ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‌

02:35 PM Nov 06, 2019 | Team Udayavani |

ಹಾನಗಲ್ಲ: ಇತ್ತೀಚೆಗೆ ಸಂಭವಿಸಿದ ನೆರೆ ಹಾವಳಿಯಿಂದ ನಿರಾಶ್ರಿತರಾದ ಎಲ್ಲ ಕುಟುಂಬಗಳಿಗೆ ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಿಸಿ ಕೊಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಕುಟುಂಬಗಳಿಗೂ ಶಾಶ್ವತ ಮನೆ ನಿರ್ಮಿಸಲಾಗುವುದು ಎಂದು ಸಂಸದ ಶಿವಕುಮಾರ ಉದಾಸಿ ಭರವಸೆ ನೀಡಿದರು.

Advertisement

ಶೀಗಿಹಳ್ಳಿ ಗ್ರಾಮದಲ್ಲಿ ನಿರಾಶ್ರಿತರಿಗಾಗಿ 12 ಲಕ್ಷ ರೂಗಳಲ್ಲಿ ನಿರ್ಮಿಸಿದ 23 ತಾತ್ಕಾಲಿಕ ಶೆಡ್‌ಗಳು, ಉದ್ಯೋಗಖಾತ್ರಿ ಯೋಜನೆಯಡಿ ನಿರ್ಮಿಸಿದ 14 ಲಕ್ಷ ರೂ.ಗಳ ಪಕ್ಕಾ ಗಟಾರ, ಕಾಂಕ್ರಿಟ್‌ ರಸ್ತೆ, ಶಿಂಗಾಪುರ ಗ್ರಾಮದಲ್ಲಿ 3 ಲಕ್ಷ ರೂ.ಗಳ ಬಸ್‌ ನಿಲ್ದಾಣ, 7 ಲಕ್ಷ ರೂ.ಗಳ ಶೌಚಾಲಯ, 12 ಲಕ್ಷರೂಗಳ ವಾಲ್ಮೀಕಿ ಸಮುದಾಯ ಭವನ, ನರೇಗಾ ಯೋಜನೆಯಡಿಯ 8 ಲಕ್ಷರೂಗಳ ಅಂಗನವಾಡಿ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ವರದಾ ನದಿಯ ಪ್ರವಾಹದಿಂದಾಗಿ ಶೀಗಿಹಳ್ಳಿ ಗ್ರಾಮದಲ್ಲಿ 30, ಹಳೆಶಿಂಗಾಪುರದಲ್ಲಿ 40 ಕುಟುಂಬಗಳು ಸೇರಿದಂತೆ ಒಟ್ಟು 70 ಕುಟುಂಬಗಳು ಆಶ್ರಯ ಕಳೆದುಕೊಂಡಿವೆ. ಅವರಲ್ಲಿ ಅತ್ಯಂತ ಸಮಸ್ಯೆಯಲ್ಲಿರುವ 23 ಕುಟುಂಬಗಳನ್ನು ಸ್ಥಳಾಂತರಿಸಿ ತಾತ್ಕಾಲಿಕ ಶೆಡ್‌ ಗಳನ್ನು ನೀಡಲಾಗಿದೆ. ಸರಕಾರ ಮುಂಬರುವ ದಿನಗಳಲ್ಲಿ ತಲಾ 5 ಲಕ್ಷರೂ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ಕೊಡುತ್ತದೆ. ನಿರಾಶ್ರಿತರು ಆತಂಕಪಡುವ ಅಗತ್ಯವಿಲ್ಲ ಎಂದರು. ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವ ಧಿಯಲ್ಲಿ ಶಿಂಗಾಪುರ ಪ್ಲಾಟ್‌ನ್ನು ಹೊಸ ಗ್ರಾಮವಾಗಿ ವಿಜಯನಗರ ಎಂದು ಘೋಷಿಸಲಾಯಿತು.

ಆದರೆ ಕರಡು ಪ್ರತಿ ಅಂತಿಮ ಹಂತದಲ್ಲಿತ್ತು. ಕಂದಾಯ ಗ್ರಾಮವಾಗಿ ಪರಿವರ್ತನೆಯಾಗಲಿಲ್ಲ. ಇದರಿಂದ ಅನುದಾನ ನೀಡಲು ದಾಖಲೆಗಳು ಸಮಸ್ಯೆಯಾಗಿ ಕಾಡುತ್ತಿದೆ. ಹೀಗಾಗಿ ಇಲ್ಲಿಯ ಪ್ರತಿ ಮನೆಯನ್ನೂ ಸಮೀಕ್ಷೆ ಕಾರ್ಯ ನಡೆಸಿ, ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಇನ್ನೊಂದು ತಿಂಗಳಲ್ಲಿ ಈ ಸಮೀಕ್ಷೆ ಪೂರ್ಣಗೊಳ್ಳಲಿದೆ. ನಂತರ ಕಂದಾಯ ಗ್ರಾಮವಾಗಿ ಘೋಷಣೆಯಾಗಲಿದೆ ಎಂದು ತಿಳಿಸಿದರು.

ಗೌರಮ್ಮ ತಿಮ್ಮಣ್ಣನವರ, ಗೌರವ್ವ ಶೇತಸನದಿ, ಬಸವಣ್ಣೆಪ್ಪ ಬೆಂಚಳ್ಳಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಮಾಲತೇಶ ಆರೇರ, ಸೋಮಣ್ಣ ಗೋಣಿಗೇರ, ನಾಗನಗೌಡ ಪಾಟೀಲ, ದೇವೇಂದ್ರಪ್ಪ ಸವದತ್ತಿ, ತಿಪ್ಪಣ್ಣ ಕೋರಿ, ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next