Advertisement

“ಕ್ಲಾಕ್‌ ಟವರ್‌’ವೃತ್ತದ ವಿಸ್ತರಣೆಗೆ ತಾತ್ಕಾಲಿಕ ತಡೆ

10:29 PM Sep 23, 2020 | mahesh |

ಮಹಾನಗರ: ನಗರದ ಕ್ಲಾಕ್‌ ಟವರ್‌ ವೃತ್ತವನ್ನು ವಿಸ್ತರಣೆಗೊಳಿಸುವ ಸ್ಮಾರ್ಟ್‌ಸಿಟಿಯ ಕಾಮಗಾರಿಗೆ ಟ್ರಾಫಿಕ್‌ ಪೊಲೀಸರು ಆಕ್ಷೇಪಣೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ತಡೆ ಹಾಕಲಾಗಿದೆ. ಕ್ಲಾಕ್‌ ಟವರ್‌ಗೆ ಕಾರಂಜಿ ನಿರ್ಮಿಸಿ ಸೌಂದರ್ಯ ವರ್ಧಿಸುವ ಉದ್ದೇಶದಿಂದ ವೃತ್ತವನ್ನು ಸುಮಾರು 4 ಮೀಟರ್‌ನಷ್ಟು ವಿಸ್ತರಿಸಿ ತಡೆಗೋಡೆ ನಿರ್ಮಿಸುವ ಕಾಮಗಾರಿ 2-3 ದಿನಗಳಿಂದ ನಡೆದಿದ್ದು, ಬುಧವಾರ ನಗರ ಪೊಲೀಸ್‌ ಆಯುಕ್ತರ ಸೂಚನೆ ಮೇರೆಗೆ ಟ್ರಾಫಿಕ್‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವೃತ್ತ ವಿಸ್ತರಣೆ ಮಾಡುವುದರಿಂದ ಸುಗಮ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಮನಗಂಡು ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡುವಂತೆ ಪಾಲಿಕೆಯ ಆಯುಕ್ತರಿಗೆ ಸೂಚನೆ ನೀಡಿದರು. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Advertisement

ಕ್ಲಾಕ್‌ ಟವರ್‌ ನಿರ್ಮಿಸಿರುವ ಪ್ರದೇಶವು ಅತ್ಯಂತ ವಾಹನ ನಿಬಿಡ ಪ್ರದೇಶ. ಈಗಾ ಗಲೇ ಪೀಕ್‌ ಆವರ್‌ನಲ್ಲಿ ಇಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿ ಸುಗಮ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ ವೃತ್ತ ವಿಸ್ತರಣೆ ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು ಎಂದು ಪೊಲೀಸರು ಪಾಲಿಕೆಗೆ ಸೂಚಿಸಿದ್ದಾರೆ.

ಸಂಚಾರ ಸಮಸ್ಯೆ ಭೀತಿ
ಕ್ಲಾಕ್‌ ಟವರ್‌ ವೃತ್ತವನ್ನು ವಿಸ್ತರಿಸುವ ಬಗ್ಗೆ ನಗರದ ಕೆಲವು ಮಂದಿ ನಾಗರಿಕರು ಕೂಡ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈಗಾಗಲೇ ಈ ಪ್ರದೇಶದಲ್ಲಿ ವಾಹನ ದಟ್ಟಣೆ ಇದೆ. ವೃತ್ತವನ್ನು ವಿಸ್ತರಿಸಿದರೆ ಮತ್ತಷ್ಟು ಸಂಚಾರ ಸಮಸ್ಯೆ ಉಂಟಾಗಲಿದೆ ಎಂದು ಉದ್ಯಮಿ ನಿತಿನ್‌ ಅಮೀನ್‌ ಅವರು ಉದಯವಾಣಿ ಸುದಿನ ಜತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ವಾಮನ್‌ ನಾಯಕ್‌ ಅವರು ಈ ಕ್ಲಾಕ್‌ ಟವರ್‌ಗೆ 1964ರಲ್ಲಿ ಕ್ಲಾಕ್‌ ನಿರ್ಮಿಸಿ ಕೊಟ್ಟಿದ್ದರು. ಸುಗಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ ಎಂಬ ಕಾರಣದಿಂದ 1994ರಲ್ಲಿ ಕ್ಲಾಕ್‌ ಟವರನ್ನು ಕೆಡಹಲಾಗಿತ್ತು. 24 ವರ್ಷಗಳ ಬಳಿಕ 2018ರಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಅದೇ ಸ್ಥಳದಲ್ಲಿ ಕ್ಲಾಕ್‌ ಟವರ್‌ ಮರು ನಿರ್ಮಾಣ ಕಾಮಗಾರಿ ಆರಂಭಿಸಿ 2019ರಲ್ಲಿ ಪೂರ್ಣಗೊಳಿಸಲಾಗಿತ್ತು. ಇದೀಗ ಕಾರಂಜಿ ನಿರ್ಮಿಸುವ ಉದ್ದೇಶದಿಂದ ವೃತ್ತವನ್ನು ವಿಸ್ತರಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು.

ವೈಜ್ಞಾನಿಕ ಅಧ್ಯಯನ ನಡೆಸಿ ಕ್ರಮ
ಕ್ಲಾಕ್‌ ಟವರ್‌ ವೃತ್ತವನ್ನು ವಿಸ್ತರಿಸುವುದು ಮುಂದಿನ ದಿನಗಳಲ್ಲಿ ಸಂಚಾರ ಸಮಸ್ಯೆ ಬಿಗಡಾಯಿಸಲಿದೆ. ಹಾಗಾಗಿ ಪೊಲೀಸ್‌ ಆಯುಕ್ತರ ಸೂಚನೆ ಮೇರೆಗೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಪಾಲಿಕೆಯ ಆಯುಕ್ತರಿಗೆ ಸೂಚಿಸಲಾಗಿದೆ. ವೃತ್ತದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ಮುಂದಿನ ಕ್ರಮದ ಬಗ್ಗೆ ಪಾಲಿಕೆಗೆ ಸಲಹೆ ನೀಡಲಾಗುವುದು.
-ನಟರಾಜ್‌ ಎಂ.ಸಿ., ಎಸಿಪಿ, ಟ್ರಾಫಿಕ್‌

Advertisement

ಪರಿಶೀಲಿಸಲಾಗುವುದು
ಕ್ಲಾಕ್‌ ಟವರ್‌ ವೃತ್ತ ವಿಸ್ತರಣೆ ಮಾಡುವ ಬಗ್ಗೆ ಸಾರ್ವಜನಿಕರಿಂದ ಮತ್ತು ಪೊಲೀಸರಿಂದ ಆಕ್ಷೇಪಗಳು ವ್ಯಕ್ತವಾಗಿವೆ. ಹಾಗಾಗಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು.
-ದಿವಾಕರ್‌ ಪಾಂಡೇಶ್ವರ, ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next