Advertisement

ತಾತ್ಕಾಲಿಕ ಚಾಲಕರ ಕ್ಷಮತೆಯೇ ಪ್ರಶ್ನಾರ್ಹ

11:28 AM Mar 17, 2018 | Team Udayavani |

ಬೆಂಗಳೂರು: ಮುಷ್ಕರಕ್ಕೆ ಮುಂದಾದ ಮೆಟ್ರೋ ಸಿಬ್ಬಂದಿಗೆ ಪರ್ಯಾಯವಾಗಿ ಸಿದ್ಧಗೊಳಿಸಿರುವ ಚಾಲಕರ ಸಾಮರ್ಥ್ಯ ಪ್ರಮಾಣೀಕರಿಸುವುದು ಸ್ವತಃ ಬೆಂಗಳೂರು ಮೆಟ್ರೋ ರೈಲು ನಿಗಮ. ಹಾಗಾಗಿ, ಈ “ತಾತ್ಕಾಲಿಕ ಚಾಲಕ’ರ ಕಾರ್ಯಕ್ಷಮತೆಯೇ ಈಗ ಪ್ರಶ್ನಾರ್ಹವಾಗಿದೆ.

Advertisement

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೆಟ್ರೋ ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದ ಸಿಬ್ಬಂದಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಎಂಆರ್‌ಸಿಎಲ್‌ 80 ಜನ ಸಹಾಯಕ ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ತರಬೇತಿ ನೀಡಿ, ಮೆಟ್ರೋ ಸೇವೆ ಕಲ್ಪಿಸಲು ನಿರ್ಧರಿಸಿದೆ.

ಆದರೆ, ಸಾವಿರಾರು ಪ್ರಯಾಣಿಕರನ್ನು ಹೊತ್ತೂಯ್ಯುವ ಮೆಟ್ರೋ ರೈಲು ಓಡಿಸುವವರಿಗೆ ನಿರ್ದಿಷ್ಟ ಮಾನದಂಡಗಳಿವೆ. ಅವುಗಳನ್ನು ಪೂರೈಸಿದವರನ್ನು ಈ ಜವಾಬ್ದಾರಿಯುತ ಹುದ್ದೆಗೆ ಅರ್ಹರೆಂದು ಪ್ರಮಾಣೀಕರಿಸಲಾಗುತ್ತದೆ. ಆದರೆ ಚಾಲಕರ ಪ್ರಮಾಣೀಕರಣ ಪಾರದರ್ಶಕವಾಗಿರುತ್ತದೆಯೇ ಎಂಬ ಪ್ರಶ್ನೆ ಸ್ವತಃ ನಿಗಮದೊಳಗೇ ಕೇಳಿಬರುತ್ತಿದೆ.

ರೈಲ್ವೆ ನಿಯಮಗಳ ಪ್ರಕಾರ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗವು ಕಾಯಂ ಸಿಬ್ಬಂದಿ ಹೊಂದಿರಬೇಕು. ಈ ಸಿಬ್ಬಂದಿಗೆ ವರ್ಷಗಟ್ಟಲೆ ತರಬೇತಿ ನೀಡಲಾಗಿರುತ್ತದೆ. ಪ್ರಸ್ತುತ ಈ ವಿಭಾಗದಲ್ಲಿ 1,800 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಮೊದಲೆರಡು ಬ್ಯಾಚ್‌ಗಳನ್ನು ದೆಹಲಿ ಮೆಟ್ರೋ ರೈಲು ನಿಗಮ ಪ್ರಮಾಣೀಕರಿಸಿದ್ದರೆ, ಉಳಿದ ಬ್ಯಾಚ್‌ಗಳನ್ನು ಬಿಎಂಆರ್‌ಸಿಎಲ್‌ ತರಬೇತಿ ಸಂಸ್ಥೆ ಪ್ರಮಾಣೀಕರಿಸಿದೆ ಎಂದು ನಿಗಮದ ಎಂಜಿನಿಯರೊಬ್ಬರು ತಿಳಿಸುತ್ತಾರೆ.

ಯಾವುದೇ ವ್ಯಕ್ತಿ “ನಮ್ಮ ಮೆಟ್ರೋ’ ಚಾಲನೆಗೆ ಅರ್ಹತೆ ಪಡೆಯಬೇಕಾದರೆ ತರಬೇತಿ ಪೂರ್ಣಗೊಳಿಸಿ, ಲಿಖೀತ ಮತ್ತು ಮೌಖೀಕ ಪರೀಕ್ಷೆ ಪೂರೈಸಿರಬೇಕು. ತದನಂತರ ಕಾರ್ಯಾಚರಣೆ, ರೋಲಿಂಗ್‌ ಸ್ಟಾಕ್‌ (ಹಳಿ) ಮತ್ತು ಸಿಗ್ನಲಿಂಗ್‌ ವಿಭಾಗದ ಡಿಜಿಎಂಗಳು ಪ್ರಮಾಣೀಕರಿಸುತ್ತಾರೆ. ಆದರೆ, ಈಗ ಮುಷ್ಕರ ನಿರತರಿಗೆ ಪ್ರತಿಯಾಗಿ ಗುತ್ತಿಗೆ ಆಧಾರದಲ್ಲಿ 100 ಜನರನ್ನು ನೇಮಕ ಮಾಡಿಕೊಂಡು, ಕೆಲವೇ ತಿಂಗಳಲ್ಲಿ ತರಬೇತಿ ಕೊಟ್ಟು, ಅರ್ಹತೆಯ ಸರ್ಟಿಫಿಕೇಟ್‌ ಕೂಡ ನೀಡಲಾಗಿದೆ.

Advertisement

1,800 ಜನರ ಕೆಲಸ 80 ಜನರಿಂದ ಮಾಡಿಸಲು ಮುಂದಾಗಿರುವ ಬಿಎಂಆರ್‌ಸಿ, ಈ “ತಾತ್ಕಾಲಿಕ ಚಾಲಕ’ರಿಗೆ ಬಿಎಂಆರ್‌ಸಿಯು ಮೆಟ್ರೋ ಸಿಮ್ಯುಲೇಟರ್‌ಗಳ ಚಾಲನೆ, ಪ್ರತಿ ಭಾನುವಾರ ಪ್ರಾಯೋಗಿಕವಾಗಿ ಮೆಟ್ರೋ ರೈಲುಗಳ ಚಾಲನೆ, ನಿಲುಗಡೆ ಸೇರಿದಂತೆ ವಿವಿಧ ರೀತಿಯ ತರಬೇತಿ ನೀಡಿದೆ. ಅಷ್ಟಕ್ಕೂ, “ನಮ್ಮ ಮೆಟ್ರೋ’ ಬಹುತೇಕ ಸ್ವಯಂಚಾಲಿತ ವ್ಯವಸ್ಥೆ ಹೊಂದಿರುವುದರಿಂದ ಹೆಚ್ಚಿನ ತರಬೇತಿ ಅವಶ್ಯಕತೆಯೂ ಬರುವುದಿಲ್ಲ ಎನ್ನುವುದು ನಿಗಮದ ವಾದ.

ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ: ನಮ್ಮ ಮೆಟ್ರೋ ಮೊದಲ ಹಂತದ ನಿರ್ವಹಣೆ 80 ಜನರಿಂದ ಸಾಧ್ಯವೇ ಎಂಬ ಅನುಮಾನವಿದೆ. ಕಾರಣ, ಮೊದಲ ಹಂತದ ಉದ್ದ 42 ಕಿ.ಮೀ ಇದರಲ್ಲಿ ತಲಾ ಒಬ್ಬರಂತೆ 43 ಜನ ನಿಲ್ದಾಣಗಳಿಗೆ, ಪ್ರತಿ ರೈಲಿಗೊಬ್ಬರಂತೆ 50 ಚಾಲಕರು ಬೇಕು. ಇನ್ನು ಆಪರೇಷನ್‌ ಕಂಟ್ರೋಲ್‌ ಸೆಂಟರ್‌, ಡಿಪೋ ಕಂಟ್ರೋಲ್‌ ಸೆಂಟರ್‌ಗೆ ತಲಾ 10 ಜನ ಬೇಕು. ಈಗಿರುವ ಜನದಟ್ಟಣೆಯಲ್ಲಿ ಇಷ್ಟು ಸಿಬ್ಬಂದಿ ಮೂಲಕ ಮೆಟ್ರೋ ನಿರ್ವಹಣೆ ಕಷ್ಟ ಸಾಧ್ಯ. ಹಾಗಾಗಿ, ಒಂದು ವೇಳೆ ಮುಷ್ಕರ ಖಚಿತವಾದರೆ, ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಹೆಚ್ಚಿದೆ.

ಮೆಟ್ರೋ ಚಾಲಕರ ಕೆಲಸ ಏನು?: ಅಷ್ಟಕ್ಕೂ ಸಂಪೂರ್ಣ ಅಟೋಮೆಟಿಕ್‌ ಆಗಿರುವ “ನಮ್ಮ ಮೆಟ್ರೋ’ ರೈಲು ಚಾಲಕರ ಕೆಲಸ ತುಂಬಾ ಸುಲಭ. ನಿಲ್ದಾಣ ಬಂದಾಗ ನಿಲುಗಡೆ ಗುಂಡಿ ಒತ್ತುವುದು. ದ್ವಾರಗಳು ಸ್ವಯಂಪ್ರೇರಿತವಾಗಿ ತೆರೆದುಕೊಳ್ಳುತ್ತವೆ ಮತ್ತು ಮುಚ್ಚುತ್ತವೆ. ಚಾರ್ಜಸ್‌ ಸ್ಪೀಡ್‌ (ನಿಗದಿತ ಜಾಗದಲ್ಲಿ ಇಂತಿಷ್ಟೇ ವೇಗದಲ್ಲಿ ಓಡಬೇಕು),

ಸರಿಯಾಗಿ ನಿಲುಗಡೆ ಆಗಿದೆಯೇ ಇದೆಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದರ ಮೇಲೆ ಆಪರೇಷನ್‌ ಕಂಟ್ರೋಲ್‌ ಸೆಂಟರ್‌ ನಿಗಾ ಇಟ್ಟಿರುತ್ತದೆ. ಆದರೆ, ಈ ಅಟೋಮೆಟಿಕ್‌ ವ್ಯವಸ್ಥೆ ಕೈಕೊಟ್ಟ ಉದಾಹರಣೆಗಳೂ ಸಾಕಷ್ಟಿವೆ. ಆಗ ಚಾಲಕರ ಅವಶ್ಯಕತೆ ಬೀಳುತ್ತದೆ. ಹೀಗೆ ವ್ಯವಸ್ಥೆ ಕೈಕೊಟ್ಟಾಗೆಲ್ಲಾ ಚಾಲಕರು ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರುವುದು, ಆತಂಕಕ್ಕೆ ಎಡೆಮಾಡಿಕೊಡದಂತೆ ಕಾರ್ಯನಿರ್ವಹಿಸಿದ್ದಾರೆ.

ಚಾಲಕನಾಗಲು ಬೇಕು 10 ವರ್ಷ!: ಭಾರತೀಯ ರೈಲ್ವೆಯಲ್ಲಿ ಚಾಲಕನಾಗಬೇಕಾದರೆ ಹೆಚ್ಚು-ಕಡಿಮೆ ಹತ್ತು ವರ್ಷ ಹಿಡಿಯುತ್ತದೆ! ಹೌದು, ಸಾವಿರಾರು ಪ್ರಯಾಣಿಕರನ್ನು ಕೊಂಡೊಯ್ಯುವ ರೈಲು ಚಾಲನೆ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಅತ್ಯಂತ ಜವಾಬ್ದಾರಿಯುತವಾದುದು. ಇದೇ ಕಾರಣಕ್ಕೆ ಸಾಮಾನ್ಯ ರೈಲಿನಲ್ಲಿ ಮೊದಲು ಸಹಾಯಕ ಚಾಲಕನಾಗಿ ತರಬೇತಿ ನೀಡಲಾಗುತ್ತದೆ. ನಂತರ ಸರಕು ಸಾಗಣೆ ಮಾಡುವ ರೈಲುಗಳ ಚಾಲಕನ ಹುದ್ದೆ ನೀಡಲಾಗುತ್ತದೆ. ಆಮೇಲೆ ಪ್ಯಾಸೆಂಜರ್‌ ರೈಲು ಚಾಲಕನ ಹುದ್ದೆಗೆ ನಿಯೋಜಿಸಲಾಗುತ್ತದೆ. ಇದಕ್ಕೆ 8ರಿಂದ 10 ವರ್ಷ ಬೇಕಾಗುತ್ತದೆ ಎಂದು ರೈಲು ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ. 

ನಿಗಮದ ಪ್ರಮಾಣೀಕರಣವನ್ನು ಪ್ರಶ್ನಿಸಲಾಗದು. ಯಾಕೆಂದರೆ, ಹಲವು ಹಂತಗಳಲ್ಲಿ ತಾಂತ್ರಿಕವಾಗಿ ಅಭ್ಯರ್ಥಿಗಳನ್ನು ಪರೀಕ್ಷಿಸಿ, ಪ್ರಮಾಣೀಕರಿಸಲಾಗಿರುತ್ತದೆ. ಅಲ್ಲದೆ, ತರಬೇತಿ ಪಡೆದವರೆಲ್ಲಾ ಈಗಾಗಲೇ ವಾರಾಂತ್ಯದ ದಿನಗಳಲ್ಲಿ ರೈಲು ಚಾಲನೆ ಮಾಡಿದ ಅನುಭವ ಹೊಂದಿದ್ದಾರೆ. ಕಡಿಮೆ ಜನ ಲಭ್ಯ ಇರುವುದರಿಂದ ಸೇವೆಯಲ್ಲಿ ವ್ಯತ್ಯಯವಾಗಬಹುದು. ಆದರೆ, ಸೇವೆ ಸ್ಥಗಿತಗೊಳ್ಳದು. 
-ಮಹೇಂದ್ರ ಜೈನ್‌, ಬಿಎಂಆರ್‌ಸಿಎಲ್‌ ಎಂಡಿ

ಸಭೆ 19ಕ್ಕೆ ಮುಂದೂಡಿಕೆ: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮುಷ್ಕರಕ್ಕೆ ಮುಂದಾಗಿರುವ ಬಿಎಂಆರ್‌ಸಿ ಸಿಬ್ಬಂದಿಯೊಂದಿಗೆ ಕೇಂದ್ರ ಕಾರ್ಮಿಕ ಆಯುಕ್ತರ ನೇತೃತ್ವದಲ್ಲಿ ಶುಕ್ರವಾರ ನಡೆದ ಸಂಧಾನ ಸಭೆ ಕೂಡ ವಿಫ‌ಲವಾಗಿದ್ದು, ಮಾರ್ಚ್‌ 19ಕ್ಕೆ ಮುಂದೂಡಲ್ಪಟ್ಟಿದೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಲಾಗಿದ್ದು, ಮನವೊಲಿಕೆಗೆ ಪ್ರಯತ್ನಿಸಲಾಗಿದೆ. ಇದಕ್ಕೆ ಪೂರಕ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ 19ಕ್ಕೆ ಮತ್ತೂಂದು ಸುತ್ತಿನ ಮಾತುಕತೆ ನಡೆಸಲಾಗುತ್ತಿದೆ. ಸಂಧಾನ ಸಫ‌ಲವಾಗುವ ನಿರೀಕ್ಷೆ ಇದೆ ಎಂದು ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ವಿಶ್ವಾಸ ವ್ಯಕ್ತಪಡಿಸಿದರು.

ಎಫ್ಐಆರ್‌, ವಜಾ ಎಚ್ಚರಿಕೆ: ಈ ಮಧ್ಯೆ ಮೆಟ್ರೋ ನಿಯಮದ ಪ್ರಕಾರ ನೌಕರರು “ನಾಗರಿಕ ಸೇವೆ’ ಅಡಿ ಬರುತ್ತಾರೆ. ಹಾಗಾಗಿ, ಮುಷ್ಕರ ನಡೆಸುವಂತಿಲ್ಲ. ಒಂದು ವೇಳೆ ಧಿಕ್ಕರಿಸಿ ಮುಷ್ಕರಕ್ಕೆ ಮುಂದಾಗುವವರ ವಿರುದ್ಧ ಎಫ್ಐಆರ್‌, ವಜಾಗೊಳಿಸುವುದು ಸೇರಿದಂತೆ ಹಲವು ಶಿಸ್ತು ಕ್ರಮ ಕೈಗೊಳ್ಳುವ ನಿಟ್ಟಿನಲ್ಲೂ ಬಿಎಂಆರ್‌ಸಿ ಚಿಂತನೆ ನಡೆಸಿದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next