Advertisement

ರಾಜ್ಯದಲ್ಲಿ ವಯಸ್ಕರ ಶಿಕ್ಷಣ ತಾತ್ಕಾಲಿಕ ಸ್ಥಗಿತ

10:44 AM Apr 27, 2020 | mahesh |

ಬೆಂಗಳೂರು: ಕೋವಿಡ್ ಹತ್ತಾರು ರೀತಿಯಲ್ಲಿ ಸಮಸ್ಯೆ ತಂದೊಡ್ಡಿದ್ದು, ವಯಸ್ಕರ ಶಿಕ್ಷಣ ವ್ಯವಸ್ಥೆಯ ಮೇಲೂ ಕರಿನೆರಳು ಚಾಚಿದೆ. ರಾಜ್ಯದಲ್ಲಿರುವ ಅನಕ್ಷರಸ್ಥರಿಗೆ ಹಾಗೂ ವಿವಿಧ ಗ್ರಾಮ ಪಂಚಾಯಿತಿಗಳ ಅನಕ್ಷರಸ್ಥ ಅಧ್ಯಕ್ಷ, ಸದಸ್ಯರಿಗೆ ಮೂಲ ಶಿಕ್ಷಣ ನೀಡಿ, ಅವರನ್ನು ಅಕ್ಷರಸ್ಥರನ್ನಾಗಿಸುವ ಸಾಕ್ಷರತಾ ಕಾರ್ಯಕ್ರಮ ಸದ್ಯ ಸ್ಥಗಿತಗೊಂಡಿದೆ. ಲೋಕಶಿಕ್ಷಕ ನಿರ್ದೇಶನಾಲಯದ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ, ಅದರಲ್ಲೂ ಉತ್ತರ ಕರ್ನಾಟಕ ಭಾಗ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ವಯಸ್ಕರ ಶಿಕ್ಷಣ ಮೂಲಕ ಸಾಕ್ಷರತಾ ಕಾರ್ಯಕ್ರಮ ವ್ಯಾಪಕವಾಗಿ ನಡೆಯುತ್ತಿತ್ತು. ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ನಿತ್ಯ ಬೆಳಗ್ಗೆ ಮತ್ತು ಸಂಜೆ ಹೀಗೆ ವಿವಿಧ ಅವಧಿಗಳಲ್ಲಿ ಮೂಲ ಶಿಕ್ಷಣ ಬೋಧನೆ 1.38 ಲಕ್ಷ ಅನಕ್ಷರಸ್ಥರಿಗಾಗಿ ನಡೆಯುತಿತ್ತು. ಕೋವಿಡ್ ದಿಂದಾಗಿ ವಯಸ್ಕರ ಶಿಕ್ಷಣ ಕಾರ್ಯಕ್ರಮ ಸಂಪೂರ್ಣವಾಗಿ ತಾತ್ಕಾಲಿವಾಗಿ ರದ್ದುಗೊಳಿಸಲಾಗಿದೆ ಎಂದು ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ಉದಯವಾಣಿಗೆ
ಮಾಹಿತಿ ನೀಡಿದರು.

Advertisement

ವಯಸ್ಕರ ಶಿಕ್ಷಣ ಕಾರ್ಯಕ್ರಮ: ಡಾ.ಡಿ.ಎಂ.ನಂಜುಂಡಪ್ಪ ವರದಿಯನ್ವಯ ಸಾಕ್ಷರತಾ ಕಾರ್ಯಕ್ರಮಗಳನ್ನು 19 ಜಿಲ್ಲೆಗಳಲ್ಲಿ ಹಿಂದುಳಿದ, ಅತಿ ಹಿಂದುಳಿದ ಹಾಗೂ ಅತ್ಯಂತ ಹಿಂದುಳಿದ 95
ತಾಲೂಕುಗಳ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುತ್ತಿದೆ. ಬಾಗಲಕೋಟೆ, ಬೆಳಗಾವಿ, ಚಿಕ್ಕೊಡಿ,  ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಗದಗ, ಹಾವೇರಿ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಮಧುಗಿರಿ, ವಿಜಯಪುರ, ಬಳ್ಳಾರಿ, ಬೀದರ್‌, ಕಲಬುರಗಿ, ರಾಯಚೂರು, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ 15 ರಿಂದ 50 ರ ವಯೋಮಿತಿಯ 138181 ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಕಾರ್ಯಕ್ರಮ ಜಾರಿಯಲ್ಲಿದ್ದು, ಇದಕ್ಕಾಗಿ 456 ಲಕ್ಷ ರೂ. ಮೀಸಲಿಡಲಾಗಿದೆ ಎಂದು ವಿವರ ನೀಡಿದರು.

ರಾಜ್ಯದ 20 ಜಿಲ್ಲೆಗಳ ನಗರ ಅಥವಾ ಕೊಳೆಗೇರಿಳಲ್ಲಿನ ಅನಕ್ಷರಸ್ಥರನ್ನು ಸಾಕ್ಷರರಾಗಿಸುವ ಕಾರ್ಯ ನಡೆಯುತ್ತಿದೆ. ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಅನಕ್ಷರಸ್ಥರನ್ನು ಸಾಕ್ಷರರಾಗಿಸಲು ಮತ್ತು ಆರ್ಥಿಕ ಸಾಕ್ಷರತೆ ಒದಗಿಸುವುದರಿಂದ ಅವರ ಜೀವನ ಮಟ್ಟ ಸುಧಾರಣೆ, ಮಹಿಳಾ ಸಬಲೀಕರಣಕ್ಕಾಗಿ 20 ಜಿಲ್ಲೆಗಳ ಗ್ರಾಮೀಣ ಪ್ರದೇಶದಲ್ಲಿ ಸಾಕ್ಷರತಾ ಕಾರ್ಯಕ್ರಮ
ನಡೆಯುತ್ತಿದೆ. ಸ್ವ ಸಹಾಯ ಗುಂಪುಗಳ ಮಹಿಳೆಯರನ್ನು ಸಾಕ್ಷರರನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮ ರದ್ದು
ಕೋವಿಡ್ ದಿಂದಾಗಿ ವಯಸ್ಕರ ಶಿಕ್ಷಣದ ಎಲ್ಲ ಕಾರ್ಯಕ್ರಮಗಳನ್ನು ಸರ್ಕಾರದ ಆದೇಶದಂತೆ  ತಾತ್ಕಾಲಿಕವಾಗಿ ರದ್ದು ಮಾಡಿದ್ದೇವೆ. ಗುಂಪು ಸೇರುವುದು ನಿಷೇಧಿಸಿರುವುದರಿಂದ ಕಲಿಕೆ ಮತ್ತು ಬೋಧನೆ ಕಷ್ಟವಾಗುತ್ತದೆ. ಹೀಗಾಗಿ ಎಲ್ಲ ಜಿಲ್ಲೆಗಳಿಗೂ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲು ಸೂಚನೆ ನೀಡಿದ್ದೇವೆ. ಸರ್ಕಾರದ ಮುಂದಿನ ಆದೇಶದಂತೆ ಕಾರ್ಯ ಪ್ರವೃತ್ತರಾಗಲಿದ್ದೇವೆ ಎಂದು ಕರ್ನಾಟಕ ಲೋಕ ಶಿಕ್ಷಣ ನಿರ್ದೇಶನಾಲಯದ ಉಪ ನಿರ್ದೇಶಕ ಕೆ.ಎನ್‌.ವಿಜಯ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next