ನವದೆಹಲಿ: ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಕ್ಕೆ ತಾತ್ಕಾಲಿಕ ತೆರೆಬಿದ್ದಿದೆ. ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರಸಾರ ಮಾಡುವುದು ಕಡ್ಡಾಯ ಮಾಡಿ ತಾನೇ ಹೊರಡಿಸಿದ್ದ ಆದೇಶವನ್ನು ಇದೀಗ ಸುಪ್ರೀಂ ಕೋರ್ಟ್ ಮಾರ್ಪಾಡು ಮಾಡಿದ್ದು, ರಾಷ್ಟ್ರಗೀತೆ ಹಾಡುವುದು ಕಡ್ಡಾಯವೇನೂ ಅಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲದೆ, ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು 12 ಮಂದಿ ಸದಸ್ಯರ ಅಂತರ್ ಸಚಿವಾಲಯ ಸಮಿತಿಗೆ ಒಪ್ಪಿಸುವ ಮೂಲಕ ನ್ಯಾಯಾಲಯವು, ಈ ವಿವಾದವನ್ನು ಬಗೆ ಹರಿಸುವ ಹೊಣೆಯನ್ನು ಸರ್ಕಾರದ ಹೆಗಲಿಗೇರಿಸಿದೆ.
ಸಿನಿಮಾ ಪ್ರದರ್ಶನಕ್ಕೆ ಮುನ್ನ ಎಲ್ಲ ಚಿತ್ರಮಂದಿರಗಳಲ್ಲೂ ಕಡ್ಡಾಯವಾಗಿ ರಾಷ್ಟ್ರಗೀತೆ ಪ್ರಸಾರ ಮಾಡಬೇಕು ಎಂದು 2016ರ ನ.30ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದಕ್ಕೆ ವಿವಿಧ ವಲಯಗಳಿಂದ ತೀವ್ರ ಆಕ್ಷೇಪವೂ ವ್ಯಕ್ತವಾಗಿತ್ತು. ಜತೆಗೆ, ಇದನ್ನು ಪ್ರಶ್ನಿಸಿ ಕೆಲವು ಅರ್ಜಿಗಳೂ ಸಲ್ಲಿಕೆಯಾಗಿದ್ದವು. ನಂತರ 2017ರ ಅಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್ ತನ್ನ ನಿಲುವು ಬದಲಿಸಿ, “ಜನರ ಮೇಲೆ ದೇಶಭಕ್ತಿಯನ್ನು ಹೇರುವುದು ಸರಿಯಲ್ಲ. ಒಬ್ಬ ವ್ಯಕ್ತಿ ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲಲಿಲ್ಲ ಎಂದ ತಕ್ಷಣ ಆತ ದೇಶಭಕ್ತನಲ್ಲ ಎಂದು ಹೇಳಲೂ ಸಾಧ್ಯವಿಲ್ಲ. ನಮ್ಮ ಸಮಾಜಕ್ಕೆ ನೈತಿಕ ಪೊಲೀಸ್‌ಗಿರಿ ಬೇಡ,’ ಎಂದಿತ್ತು.
ಬಳಿಕ, 12 ಮಂದಿ ಸದಸ್ಯರ ಸಮಿತಿ ರಚಿಸಿ ಈ ಕುರಿತು ವರದಿ ಸಲ್ಲಿಸುವ ಕೇಂದ್ರ ಸರ್ಕಾರದ ಪ್ರಸ್ತಾಪ ವನ್ನು ಕೋರ್ಟ್ ಒಪ್ಪಿತ್ತು. ಇದೀಗ 6 ತಿಂಗಳೊಳಗೆ ಸಮಿತಿಯು ವರದಿ ಸಲ್ಲಿಸಲಿ ಎಂದು ಕೋರ್ಟ್ ಹೇಳಿದೆ. ಅಲ್ಲಿಯವರೆಗೆ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಾಗಿರುವುದಿಲ್ಲ. ಪ್ರಸಾರ ಮಾಡುವುದು ಅವರವರ ಆಯ್ಕೆಗೆ ಬಿಟ್ಟಿದ್ದು. ರಾಷ್ಟ್ರಗೀತೆ ಹಾಕಿದಾಗ ಎಲ್ಲರೂ ಎದ್ದುನಿಲ್ಲಲಿ. ಆದರೆ, ದಿವ್ಯಾಂಗರಿಗೆ ಇದರಿಂದ ವಿನಾಯ್ತಿ ಮುಂದುವರಿಯುತ್ತದೆ ಎಂದು ಹೇಳಿದೆ.
ಸಮಿತಿಗೆ ಬಿ.ಆರ್.ಶರ್ಮಾ ನೇತೃತ್ವ: ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡುವುದಕ್ಕೆ ಸಂಬಂಧಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿರುವ ಅಂತರ್ ಸಚಿವಾಲಯ ಸಮಿತಿಯ ನೇತೃತ್ವವನ್ನು ಕೇಂದ್ರ ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿ ಬಿ.ಆರ್.ಶರ್ಮಾಗೆ ವಹಿಸಲಾಗಿದೆ. ಸಮಿತಿಯ ಮೊದಲ ಸಭೆ ಇದೇ 19ರಂದು ನಡೆಯಲಿದೆ. ಸಮಿತಿಯಲ್ಲಿ 11 ಸಚಿವಾಲಯಗಳು ಹಾಗೂ ಕೇಂದ್ರ ಸರ್ಕಾರದ ಇಲಾಖೆಗಳ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಇರಲಿದ್ದಾರೆ. ಮುಂದಿನ 6 ತಿಂಗಳೊಳಗಾಗಿ ಸಮಿತಿ ತನ್ನ ವರದಿ ನೀಡಲಿದೆ.