ಜಗಳೂರು: 88 ದಿನಗಳ ನಿರಂತರ ಹೋರಾಟಕ್ಕೆ ರಾಜ್ಯ ಸರ್ಕಾರ ಮೌಖೀಕವಾಗಿ ಸ್ಪಂದಿಸಿದ್ದು ಭದ್ರಾ ಮೇಲ್ದಂಡೆ ನೀರಾವರಿ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗುವುದು ಎಂದು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ತೋರಣಗಟ್ಟೆ ತಿಪ್ಪೇಸ್ವಾಮಿ ಹೇಳಿದ್ದಾರೆ.
ತಾಲೂಕಿನ ಕಲ್ಲೇದೇವರಪುರ ಗ್ರಾಮದ ಕಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿಗೆ ಸಮಗ್ರ ನೀರಾವರಿ ಯೋಜನೆ ಜಾರಿಗಾಗಿ 12 ವರ್ಷಗಳ ಕಾಲ ನಿರಂತರ ಹೋರಾಟ ಮಾಡಲಾಗಿದೆ. ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಎಸ್.ವಿ.ರಾಮಚಂದ್ರ ಅವರ ನೇತೃತ್ವದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಬೆಂಗಳೂರಿನ ಗೃಹ ಕಚೇರಿಯಲ್ಲಿ ನಿಯೋಗದಲ್ಲಿ ಭೇಟಿಯಾಗಿ ಚರ್ಚಿಸಿದಾಗ, 2.4 ಟಿ.ಎಂ.ಸಿ. ನೀರನ್ನು ಬೆಳಗಟ್ಟೆ ಮಾರ್ಗದಿಂದ ಸಂಗೇನಹಳ್ಳಿ ಕೆರೆಗೆ ಹಾಗೂ ಅಲ್ಲಿಂದ ತಾಲೂಕಿಗೆ ಹರಿಸಲು ಮುಖ್ಯಮಂತ್ರಿಗಳು ಮೌಖೀಕವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ತಾಂತ್ರಿಕ ಹಾಗೂ ಹಣಕಾಸು ಸಮಿತಿಯ ಒಪ್ಪಿಗೆ ಪಡೆದು ಕಾಮಗಾರಿ ಪ್ರಾರಂಭಿಸುವ ಸಂಪೂರ್ಣ ವಿಶ್ವಾಸವಿದ್ದು, ಸರಕಾರದ ಮೇಲೆ ಭರವಸೆಯನ್ನಿಟ್ಟು ಅನಿರ್ದಿಷ್ಟಾವಧಿ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದರು.
ಮುಸ್ಟೂರು ಓಂಕಾರ ಹುಚ್ಚನಾಗಲಿಂಗಸ್ವಾಮಿ ಮಠದ ರುದ್ರಮುನಿ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದರೆ ತಾಲೂಕಿಗೆ ಇಂತಹ ಬರದ ಪರಿಸ್ಥಿತಿ ಬರುತ್ತಿರಲಿಲ್ಲ. ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿಯ ನಿರಂತರ ಹೋರಾಟದಿಂದ ಇದೀಗ ಬೆಳಕು ಚೆಲ್ಲಿದಂತಾಗಿದೆ. ಆದರೆ ಹೋರಾಟಗಾರರು ಸದಾ ಎಚ್ಚರಿಕೆಯಿಂದಿರಬೇಕು. ಸರಕಾರದ ನಿರ್ಧಾರದಿಂದ ಮೈ ಮರೆಯದೆ ಅಧಿಕೃತ ಆದೇಶದವರೆಗೂ ಅಚಲ ನಿರ್ಧಾರದಿಂದ ಕಾರ್ಯ ನಿರ್ವಹಿಸಬೇಕು. ಸಮಿತಿ ತೆಗೆದುಕೊಳ್ಳುವ ಅಂತಿಮ ತೀರ್ಮಾನಕ್ಕೆ ಪ್ರತಿಯೊಬ್ಬರು ಸ್ಪಂದಿಸಿ ಕಾರ್ಯ ನಿರ್ವಹಿಸಬೇಕು ಎಂದರು.
ಸಮಿತಿ ಸದಸ್ಯ ಯಾದವರೆಡ್ಡಿ ಮಾತನಾಡಿ, ಸರ್ಕಾರದ ತೀರ್ಮಾನ ತಾಲೂಕಿನ ರೈತರಿಗೆ ಭರವಸೆ ಮೂಡಿಸಿದೆ. ಈ ತೀರ್ಮಾನದಲ್ಲಿ ಯಾವುದೇ ಬದಲಾವಣೆಯಿಲ್ಲ. ಒಂದೊಮ್ಮೆ ಸರ್ಕಾರ ತೀರ್ಮಾನ ಬದಲಾಯಿಸಿದಲ್ಲಿ ಅದರ ಪರಿಣಾಮವೇ ಬೇರೆಯಿರುತ್ತದೆ. ಮುಖ್ಯಮಂತ್ರಿಗಳ ಆದೇಶ ಬಹುಮುಖ್ಯವಾಗಿದ್ದು, ಬರಪೀಡಿತ ನಾಡಿಗೆ ಭದ್ರಾ ಹರಿಯುವ ವಿಶ್ವಾಸವಿದೆ. ಹೋರಾಟ ತಾತ್ಕಾಲಿಕವಾಗಿ ಸ್ಥಗಿತಗೊಂಡರೂ ತಿಂಗಳಿಗೊಮ್ಮೆ ಸಭೆ ನಡೆಯಲಿದೆ. ತಾಲೂಕಿನ ಪ್ರತಿಯೊಬ್ಬರು ಹೋರಾಟಕ್ಕೆ ಸ್ಪಂದಿಸಿದ್ದು, ಮಾಧ್ಯಮದ ಸಹಕಾರ ಬಹುಮುಖ್ಯವಾದ ಪಾತ್ರ ವಹಿಸಿದೆ ಎಂದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಸದಸ್ಯರಾದ ಆರ್.ಓಬಳೇಶ್, ಅನ್ವರ್ ಸಾಬ್, ಕಲ್ಲೇರುದ್ರೇಶ್, ಸಣ್ಣಸೂರಯ್ಯ, ಪ್ರಕಾಶ್ ರೆಡ್ಡಿ, ಚಿತ್ರದುರ್ಗ ಹೋರಾಟ ಸಮಿತಿ ಅಧ್ಯಕ್ಷ ವಾಲಿಬಾಲ್ ತಿಮ್ಮಾರೆಡ್ಡಿ, ಪಟ್ಟಣ ಪಂಚಾಯಿತಿ ಸದಸ್ಯ ಎಸ್.ಕೆ. ರಾಮರೆಡ್ಡಿ, ಎಪಿಎಂಸಿ ಉಪಾಧ್ಯಕ್ಷ ಗುರುಮೂರ್ತಿ, ಗ್ರಾ.ಪಂ ಮಾಜಿ ಅಧ್ಯಕ್ಷ ಕೆ.ಟಿ. ಬಡಯ್ಯ, ಉಪಾಧ್ಯಕ್ಷ ವೀರಸ್ವಾಮಿ, ಕಲ್ಲೇಶಪ್ಪ, ಹೋರಾಟಗಾರರಾದ ಮಹಾಲಿಂಗಪ್ಪ ಜೆ. ಅನಂತರಾಜ್, ಮಲೆಮಾಚಿಕೆರೆ ಸತೀಶ್, ಓಬಣ್ಣ,ಧನ್ಯಕುಮಾರ್, ಸತ್ಯಮೂರ್ತಿ, ಸಿದ್ದಮ್ಮನಹಳ್ಳಿ ಬಸವರಾಜ, ವ್ಯಾಸಗೊಂಡನಹಳ್ಳಿ ರಾಜಪ್ಪ ಇತರರು ಇದ್ದರು.