ಪುತ್ತೂರು : ಪುತ್ತೂರಿನಲ್ಲಿ ಆಟೋ ರಿಕ್ಷಾಗಳ ಸಂಖ್ಯೆ ಮಿತಿಯನ್ನು ದಾಟಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಆಟೋಗಳಿಗೆ ಪರವಾನಿಗೆ ನೀಡುವ ಪ್ರಕ್ರಿಯೆಯನ್ನು ಕೆಲ ಸಮಯಗಳ ಮಟ್ಟಿಗೆ ತಡೆ ಹಿಡಿಯುವ ಪ್ರಕ್ರಿಯೆ ಆರಂಭಿಸುವಂತೆ ಪುತ್ತೂರು ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ ಅವರು ಆರ್‌ಟಿಒಗೆ ಸೂಚಿಸಿದರು.
ಪ್ರಸ್ತುತ ಆಟೋ ರಿಕ್ಷಾಗಳ ಸಂಖ್ಯೆ ಏರಿಕೆಯಾಗಿರುವ ಪರಿಣಾಮ ಟ್ರಾಫಿಕ್ ಸಮಸ್ಯೆಯ ಜತೆಗೆ ಹಾಲಿ ಇರುವ ರಿಕ್ಷಾಗಳ ಆದಾಯ ಕಡಿಮೆಯಾಗುತ್ತಿದೆ. ಈ ಕುರಿತು ಹೊಸ ಪರ್ಮಿಟ್‌ಗಳನ್ನು ತಡೆ ಹಿಡಿಯುವಂತೆ ಕಳೆದ 4 ವರ್ಷಗಳಿಂದ ಮನವಿ ಮಾಡುತ್ತಿದ್ದು, ಯಾವುದೇ ಪ್ರಯೋಜನವಾಗಿಲ್ಲ ಎಂದು ಆಟೋ ಸಂಘಟನೆಗಳ ಮುಖಂಡರು ಸಭೆಯ ಗಮನಕ್ಕೆ ತಂದರು.
ನಗರದಲ್ಲಿದೆ 2 ಸಾವಿರ ಆಟೋ
ತಾಲೂಕಿನಲ್ಲಿ ಒಟ್ಟು ಸುಮಾರು 4,800 ರಿಕ್ಷಾಗಳಿದ್ದು, ಪುತ್ತೂರು ನಗರದಲ್ಲಿ 2000ಕ್ಕೂ ಅಧಿಕ ಆಟೋ ರಿಕ್ಷಾಗಳಿವೆ. ಜತೆಗೆ ಪ್ರತಿ ವಾರ ಹೊಸ ಆಟೋಗಳು ರಸ್ತೆಗಿಳಿಯುತ್ತಿವೆ ಎಂದು ಸಭೆಗೆ ತಿಳಿಸಲಾಯಿತು. ಹೀಗಾಗಿ ಆಟೋ ಪರ್ಮಿಟ್‌ಗಳನ್ನು ತಾತ್ಕಾಲಿಕವಾಗಿ ತಡೆಯುವಂತೆ ಎಸಿ ಸೂಚಿಸಿದರು.
Advertisement
ಅವರು ಶನಿವಾರ ಇಲ್ಲಿನ ಮಿನಿ ವಿಧಾನಸೌಧದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳು ಹಾಗೂ ಆಟೋ ರಿಕ್ಷಾ ಮಾಲಕ-ಚಾಲಕ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಸೂಚಿಸಿದರು.
Related Articles
Advertisement
ಉದ್ಯಮವನ್ನಾಗಿಸಿದ್ದಾರೆ
ಮುಂದಿನ ದಿನಗಳಲ್ಲಿ ಆಟೋ ರಿಕ್ಷಾ ಪರವಾನಿಗೆಯ ಶುಲ್ಕ ಏರಿಸಬೇಕು. ಜತೆಗೆ ಹೊಸ ಪರವಾನಿಗೆ ಪಡೆಯುವವರಿಗೆ ಪ್ರೋತ್ಸಾಹ ನೀಡಬಾರದು. ಒಬ್ಬ ವ್ಯಕ್ತಿಯೇ ಅಧಿಕ ಪರವಾನಿಗೆ ಪಡೆಯುವುದನ್ನು ತಡೆಯಬೇಕು. ಕೆಲವರು ಇದನ್ನೇ ಉದ್ಯಮವಾಗಿಸಿದ್ದಾರೆ ಎಂದು ಸಭೆಯಲ್ಲಿ ಆರೋಪ ವ್ಯಕ್ತವಾದಾಗ, ಅಂತಹ ವ್ಯಕ್ತಿಗಳ ಪಟ್ಟಿ ತಯಾರಿಸಿ ಸರಕಾರಕ್ಕೆ ವರದಿ ಸಲ್ಲಿಸೋಣ. ಆಗ ಇಲಾಖೆಯೇ ಒಂದು ಸುತ್ತೋಲೆಯನ್ನು ಹೊರಡಿಸುತ್ತದೆ ಎಂದು ಎಸಿಯವರು ತಿಳಿಸಿದರು.
ಅಂದಾಜುಪಟ್ಟಿ ಸಿದ್ಧಗೊಳಿಸಿ
ಪುತ್ತೂರು ಸರಕಾರಿ ಆಸ್ಪತ್ರೆ ಎದುರಿನ ಜಂಕ್ಷನ್‌ನಲ್ಲಿ ಪದೇ ಪದೇ ಅಪಘಾತವಾಗುತ್ತಿದ್ದು, ಅಲ್ಲಿ ವೃತ್ತ ನಿರ್ಮಿಸುವಂತೆ ಬೇಡಿಕೆ ವ್ಯಕ್ತವಾಯಿತು. ಬಸ್ ನಿಲ್ದಾಣ ಪ್ರದೇಶದಲ್ಲಿ ಪಾದಾಚಾರಿ ಮೇಲ್ಸೇತುವೆಯ ಕುರಿತು ಪ್ರಸ್ತಾವನೆ ಹಾಗೂ ಅಂದಾಜು ಪಟ್ಟಿ ಸಿದ್ಧಗೊಳಿಸಲು ಸಹಾಯಕ ಕಮಿಷನರ್ ಅವರು ನಗರಸಭೆಗೆ ತಿಳಿಸಿದರು.