Advertisement

ಜೂ. 1ರಿಂದ ದೇಗುಲ ದರ್ಶನ ; ಮಹತ್ವದ ತೀರ್ಮಾನ; ಸಾಮಾಜಿಕ ಅಂತರ, ಶುಚಿತ್ವ ಕಡ್ಡಾಯ

07:00 AM May 27, 2020 | Hari Prasad |

ಬೆಂಗಳೂರು: ಲಾಕ್‌ಡೌನ್‌ನಿಂದ ಬಾಗಿಲು ಹಾಕಿದ್ದ ರಾಜ್ಯದ ದೇವಾಲಯಗಳಲ್ಲಿ ಜೂನ್‌ 1ರಿಂದ ಪೂಜೆ, ಸೇವೆಗಳು, ಭಕ್ತರಿಗೆ ದೇವರ ದರ್ಶನ ಭಾಗ್ಯ ಸಿಗಲಿದೆ.

Advertisement

ಆದರೆ ಸಾಮಾಜಿಕ ಅಂತರ, ನೈರ್ಮಲ್ಯ ಕಾಪಾಡಿಕೊಳ್ಳಲು ಸೂಚಿಸಲಾಗಿದೆ.

ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಧರ್ಮಾದಾಯ ದತ್ತಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ‘ಉದಯವಾಣಿ’ಗೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಮತ್ತು ಇತರ ದೇವಾಲಯಗಳಲ್ಲಿ ಜೂ. 1ರಿಂದ ಪೂಜೆ, ಸೇವಾದಿಗಳಿಗೆ ಅನುಮತಿ ನೀಡಲು ತೀರ್ಮಾನಿಸಲಾಗಿದೆ.

ಹಾಗೆಯೇ ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲನೆ, ನೈರ್ಮಲ್ಯ, ಶುಚಿತ್ವ ಕಾಪಾಡಿಕೊಳ್ಳಬೇಕೆಂದು ಆದೇಶಿಸಲು ನಿರ್ಧರಿಸಲಾಗಿದೆ. ಅಗತ್ಯ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.

Advertisement

ಆಂಧ್ರಪ್ರದೇಶದ ತಿರುಮಲ ಕರ್ನಾಟಕ ಛತ್ರಕ್ಕೆ ಸೇರಿದ ಸ್ಥಳಗಳಲ್ಲಿ ನೂತನ ವಸತಿಗೃಹಗಳ ನಿರ್ಮಾಣಕ್ಕೆ 200 ಕೋ.ರೂ. ಅನುದಾನ ಮಂಜೂರು ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಈ ಮಧ್ಯೆ ರಾಜ್ಯ ದಲ್ಲಿ ಜೂ. 1ರಿಂದ ಹೊಟೇಲ್‌ಗ‌ಳೂ ಆರಂಭವಾಗುವ ಸಾಧ್ಯತೆ ಇದೆ. ಈ ಸಂಬಂಧ ಹೊಟೇಲ್‌ ಮಾಲಕರ ಸಂಘದ ಪ್ರತಿನಿಧಿಗಳು ಮುಖ್ಯಮಂತ್ರಿ ಜತೆ ಚರ್ಚಿಸಿದ್ದು, ಈ ಬಗ್ಗೆ ಆಶಾಭಾವ ವ್ಯಕ್ತಪಡಿಸಿದ್ದಾರೆ.

ಆನ್‌ಲೈನ್‌ ಸೇವೆಗೆ ಚಾಲನೆ
ರಾಜ್ಯದ ಮುಜರಾಯಿ ಇಲಾಖೆಯ 52 ಪ್ರಮುಖ ದೇವಾಲಯಗಳಲ್ಲಿ ಇ- ಕಾಣಿಕೆ ಮತ್ತು ಸೇವೆಗಳ ಆನ್‌ಲೈನ್‌ ಬುಕ್ಕಿಂಗ್‌ ಸೇವೆಯ ಆ್ಯಪ್‌ ಅನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಗಳವಾರ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು. ಈ ಮೂಲಕ ಜನರು ಇದ್ದಲ್ಲಿಂದಲೇ ಪೂಜೆಗಳನ್ನು ಬುಕ್‌ ಮಾಡಿಸಬಹುದಾಗಿದೆ.

ಎಲ್ಲೆಲ್ಲಿ ಆನ್‌ಲೈನ್‌ ಸೇವೆ?
ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕಾ, ಮಂದಾರ್ತಿ ದುರ್ಗಾ ಪರಮೇಶ್ವರಿ, ಪುತ್ತೂರಿನ ಮಹಾಲಿಂಗೇಶ್ವರ, ಪೊಳಲಿಯ ರಾಜರಾಜೇಶ್ವರೀ, ಮೈಸೂರಿನ ಚಾಮುಂಡೇಶ್ವರಿ, ನಂಜನಗೂಡಿನ ಶ್ರೀಕಂಠೇಶ್ವರ, ಕನಕಪುರ ಕಬ್ಟಾಳಮ್ಮ, ಯಡಿಯೂರು ಸಿದ್ದಲಿಂಗೇಶ್ವರ, ಬೇಲೂರಿನ ಚೆನ್ನಕೇಶವಸ್ವಾಮಿ, ಶ್ರೀರಂಗ ಪಟ್ಟಣದ ರಂಗನಾಥಸ್ವಾಮಿ, ಯಳಂದೂರಿನ ಬಿಳಿಗಿರಿ ರಂಗನಾಥಸ್ವಾಮಿ, ಸವದತ್ತಿಯ ರೇಣುಕಾ ಯಲ್ಲಮ್ಮ, ಶಿವಗಂಗೆಯ ಗಂಗಾಧರೇಶ್ವರ, ಗಂಜಾಂನ ನಿಮಿಷಾಂಬಾ, ಭಾಗಮಂಡಲದ ಭಗಂಡೇಶ್ವರ, ಮಡಿಕೇರಿಯ ಓಂಕಾರೇಶ್ವರ, ಮೈಲಾರ ಲಿಂಗೇಶ್ವರಸ್ವಾಮಿ, ಹಂಪಿಯ ವಿರೂಪಾಕ್ಷೇಶ್ವರ, ಘಾಟಿ ಸುಬ್ರಹ್ಮಣ್ಯ ದೇವಸ್ಥಾನ.

ಸಪ್ತಪದಿ ಯೋಜನೆಗೂ ಅವಕಾಶ
ಗರಿಷ್ಠ 50 ಮಂದಿ ಪಾಲ್ಗೊಳ್ಳುವಂತೆ ಮದುವೆಗಳಿಗೆ ಸರಕಾರ ಅವಕಾಶ ನೀಡಿದ್ದು, ಆ ಮಿತಿಯೊಳಗೆ ‘ಸಪ್ತಪದಿ’ ಯೋಜನೆಗೂ ಚಾಲನೆ ನೀಡಲು ಗಂಭೀರ ಚಿಂತನೆ ನಡೆದಿದೆ. ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ‘ಸಪ್ತಪದಿ’ ಈ ಬಗ್ಗೆ ಚರ್ಚೆಯಾಗಿದೆ.

ಒಂದೇ ದಿನ ಮುಹೂರ್ತವಿದ್ದರೆ ಬೇರೆ ಬೇರೆ ಸಮಯದಲ್ಲಿ ತಲಾ 25 ಅತಿಥಿಗಳಂತೆ 2 ಜೋಡಿ ಇಲ್ಲವೇ ತಲಾ 16 ಅತಿಥಿಗಳಂತೆ ಮೂರು ಜೋಡಿಗಳ ವಿವಾಹ ನಡೆಸುವ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next