ದೊಡ್ಡಬಳ್ಳಾಪುರ: ದೇವಸ್ಥಾನಗಳು ಮಾನಸಿಕ ವಾಗಿ ನೋಂದವರಿಗೆ ನೆಮ್ಮದಿ ನೀಡುವ ಆಶ್ರಯ ತಾಣಗಳಾಗಬೇಕೆಂದು ಬೆಂಗಳೂರಿನ ಬೇಲಿ ಮಠದ ಶಿವರುದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ನಾಗಸಂದ್ರ ಗ್ರಾಮದಲ್ಲಿ ಜೀರ್ಣೋ ದ್ಧಾರಗೊಳಿಸಲಾಗಿರುವ ಅಭಯ ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡುವಲ್ಲಿ ದೇವಾಲಯಗಳು ಜನರಿಗೆ ಭಯ, ಭಕ್ತಿಯನ್ನು ಕಲ್ಪಿಸುವ ಕೇಂದ್ರಗಳನ್ನಾಗಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ದೇಗುಲ ನ್ಯಾಯಾಲಯಗಳಾಗಿದ್ದವು: ಹಿಂದೆ ನಮ್ಮ ಹಿರಿಯರು ದೇವಾಲಯಗಳನ್ನು ಕೇವಲ ಭಕ್ತಿಯ ಕೇಂದ್ರಗಳಾಗಿ ಮಾತ್ರ ನೋಡುತ್ತಿರಲಿಲ್ಲ. ದೇವಾಲಯಗಳನ್ನು ಗ್ರಾಮಗಳ ನ್ಯಾಯಾಲಯ ದಂತೆಯೂ ಬಳಸಿಕೊಳ್ಳುತ್ತಿದ್ದರು ಎಂಬು ದನ್ನು ಪ್ರತಿಯೊಬ್ಬರೂ ಗಮನಿಸಬೇಕಾದ ಮಹತ್ವದ ಸಂಗತಿಯಾಗಿದೆ. ಆದರೆ, ಇಂದಿನ ಆಧುನಿಕ ಸಮಾ ಜದಲ್ಲಿ ಈ ನಡವಳಿಕೆ ಸಂಪೂರ್ಣ ಬದಲಾಗಿದೆ ಎಂದು ತಿಳಿಸಿದರು.
ಉಗ್ರಗಾಮಿ ಪ್ರವೃತ್ತಿ ಅಪಾಯಕಾರಿ: ಶಿವಗಂಗೆ ಯ ಮೇಲಣಗವಿ ಮಠದ ಮಲಯ ಶಾಂತ ಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಷ್ಟು ದಿನ ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಕೊಡು ತ್ತಿದ್ದರು. ಈಗ ತಮ್ಮ ಉದ್ದೇಶಗಳ ಈಡೇರಿಕೆಗಾಗಿ ಮನುಷ್ಯ ಮನುಷ್ಯರನ್ನೇ ಬಲಿಕೊಡುವ ಉಗ್ರ ಗಾಮಿ ಪ್ರವೃತ್ತಿ ಬೆಳೆಯುತ್ತಿದೆ ಎಂದು ತೀವ್ರ ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿದರು.
ಉಗ್ರಗಾಮಿಗಳ ಮಟ್ಟ ಹಾಕಿ: ಧರ್ಮ, ಸಂಸ್ಕೃತಿ ಯ ಹೆಸರಿನಲ್ಲಿ ನಡೆಯುತ್ತಿ ರುವ ಉಗ್ರಗಾಮಿಗಳ ಹೋರಾಟ ನಿಲ್ಲಲೇಬೇಕು. ಜಗತ್ತಿನಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಎಲ್ಲರೂ ಶಕ್ತಿಮೀರಿ ಶ್ರಮಿಸ ಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾಗರಿಕರು ಜಾಗೃತರಾಗಬೇಕಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್.ಸಿ.ದೇವರಾಜ್, ಕಾರ್ಯ ದರ್ಶಿ ಎಂ.ಬಸವರಾಜು, ಅರ್ಚಕ ಆನಂದ, ಸದಸ್ಯ ರಾದ ಎನ್.ಸಿ.ಬಸವರಾಜು, ಎಂ.ವೀರಭದ್ರಯ್ಯ, ಜಿ.ಎಸ್.ಮಲ್ಲಪ್ಪ, ನಾಗರತ್ನಮ್ಮ, ಲಲಿತಮ್ಮ, ಮುನಿ ಸ್ವಾಮಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಭರತನಾಟ್ಯ ಪ್ರದರ್ಶನ: ಇದೇ ಸಂದರ್ಭದಲ್ಲಿ ಬೆಂಗಳೂರಿನ ಆರಾಧನಾ ನೃತ್ಯ ಶಾಲೆಯ ನಾಗ ಭೂಷಣ್ ತಂಡದಿಂದ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮವೂ ನಡೆಯಿತು.