ವಿಜಯಪುರ: ದೇಶದಲ್ಲಿ ಕೋವಿಡ್ ಲಾಕ್‌ಡೌನ್ ಜಾರಿಯಾದ ಮೂರು ತಿಂಗಳ ಬಳಿಕ ಜಿಲ್ಲೆಯಲ್ಲಿ ಸೋಮವಾರದಿಂದ ಲಾಕ್‌ಡೌನ್ ತೆರವು ಮಾಡಿದ್ದರಿಂದ ಸ್ಥಗಿತಗೊಂಡಿದ್ದ ವಿವಿಧ ಚಟುವಟಿಕೆಗಳು ಮತ್ತೆ ಆರಂಭಗೊಂಡಿವೆ. ವಾಣಿಜ್ಯ ವಹಿವಾಟು ಪುನರಾರಂಭಗೊಂಡಿದ್ದು, ಅದರಲ್ಲೂ ಬೀದಿಬದಿ ವ್ಯಾಪಾರ ಭರ್ಜರಿಯಾಗಿಯೇ ಆರಂಭಗೊಂಡಿದೆ. ದೇವಸ್ಥಾನಗಳು, ಪ್ರಾರ್ಥನಾ ಮಂದಿರಗಳಲ್ಲಿ ದೇವರು ದರ್ಶನಕ್ಕೆ ಬಾಗಿಲು ತೆರೆದಿವೆ.
ಮಾಲ್, ವಾಣಿಜ್ಯ ಸಂಕಿರಣಗಳು ಮೂರು ತಿಂಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ತಮ್ಮ ವ್ಯಾಪಾರ ವಹಿವಾಟು ಆರಂಭಿಸಿವೆ. ಅದರಲ್ಲೂ ನಗರದ ವಾಣಿಜ್ಯ ಕೇಂದ್ರ ಎನಿಸಿರುವ ಮಹಾತ್ಮಾ ಗಾಂಧಿಧೀಜಿ ವೃತ್ತದ ಸುತ್ತಲೂ ಎಲ್ಲ ಚಟುವಟಿಕೆಗಳು ಮತ್ತೆ ಆರಂಭಗೊಂಡಿವೆ. ಆದರೆ, ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರೂ ವೃದ್ಧರು-ಮಕ್ಕಳಿಗೆ ಪ್ರವೇಶ ನಿರ್ಬಂಧ ಮುಂದುವರೆದಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮಾಸ್ಕ್ ಧರಿಸಿವುದು, ಸ್ಯಾನೀಟೈಸರ್‌ನಿಂದ ಕೈ ತೊಳೆಯುವಂಥ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದ್ದು, ಜತೆಗೆ ಎಲ್ಲೆಂದರಲ್ಲಿ ಉಗಿಯುವುದು, ಗುಟಕಾ ಹಾಗೂ ಧೂಮಪಾನ-ಮಧ್ಯಪಾನದಂಥ ಸೇವನೆಯನ್ನು ಕಡ್ಡಾಯವಾಗಿ ನಿಷೇಧಿಸಿದ್ದಾಗಿ ಎಂದು ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಬ್ಯಾನರ್-ಫಲಕಗಳ ಮೂಲಕ ಭಕ್ತರಿಗೆ ಮಾಹಿತಿ ನೀಡಲಾಗಿದೆ.
ಇನ್ನು ನಗರದ ಬಹುತೇಕ ಎಲ್ಲ ಹೊಟೇಲ್‌ಗಳಲ್ಲಿ ಕುಳಿತು ಉಪಹಾರ ಸೇವಿಸುವ ವ್ಯವಸ್ಥೆಯೊಂದಿಗೆ ವ್ಯಾಪಾರ ಆರಂಭಿಸಿವೆ. ದೊಡ್ಡ ಹೊಟೇಲ್ ಗಳಲ್ಲಿ ಒಂದು ಟೇಬಲ್‌ಗೆ 2-3 ಜನರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶ ನೀಡಿದ್ದು, ಮಾಸ್ಕ್ ಧರಿಸದವರಿಗೆ ಪ್ರವೇಶ ನಿರ್ಬಂಧಿ ಸುವ ಎಚ್ಚರಿಕೆ ನೀಡುವುದು ಸಾಮಾನ್ಯವಾಗಿ ಕಂಡು ಬರುತ್ತಿತ್ತು. ಕೆಲವು ಹೊಟೇಲ್ ಗಳ ಪ್ರವೇಶ ದ್ವಾರದಲ್ಲೇ ಸ್ಯಾನಿಟೈಸರ್ ವ್ಯವಸ್ಥೆ ಮಾಡಿದ್ದರೆ, ಮತ್ತೆ ಕೆಲವು ಹೊಟೇಲ್‌ಗಳಲ್ಲಿ ವಾಷ್‌ರೂಮ್‌ಗಳಲ್ಲಿ ಕೈ ತೊಳೆಯಲು ವ್ಯವಸ್ಥೆ ಕಲ್ಪಿಸಲಾಗಿತ್ತು.
ಸೋಮವಾರದಿಂದ ನಗರದ ದೇವತೆ ಶ್ರೀ ಸಿದ್ಧೇಶ್ವರ ದೇವಸ್ಥಾನ, ಯಲಗೂರು ಆಂಜನೇಯ ದೇವರು ಸೇರಿದಂತೆ ಬಹುತೇಕ ಎಲ್ಲ ದೇವಾಲಯಗಳು ಸೋಮವಾರ ನಸುಕಿನಲ್ಲೇ ಬಾಗಿಲು ತೆರೆದಿದ್ದು, ನಸುಕಿನಿಂದಲೇ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. ತೀರ್ಥ, ಪ್ರಸಾದ, ಕಾಯಿ-ಕರ್ಪೂರದಂಥ ಸೇವೆ ನಿರ್ಬಂಧಿ ಸಿದ್ದರೂ ಭಕ್ತರು ಸಾಲಾಗಿ ಬಂದು ಕೋವಿಡ್ ನಿಯಮ ಪಾಲನೆಯಂತೆ ದೇವರ ದರ್ಶನ ಪಡೆದು, ಪೂಜೆ, ಪ್ರಸಾದ ಸಲ್ಲಿಸಿದರು. ಸಾಮಾಜಿಕ ಅಂತರಕ್ಕಾಗಿ ಒಂದು ಬಾರಿಗೆ 25 ಜನರಿಗೆ ದೇವರ ದರ್ಶನಕ್ಕೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಬಹುತೇಕ ದೇವಸ್ಥನಗಳಲ್ಲಿ ಭಕ್ತರ ಆಗಮನ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನಗಳ ಪ್ರವೇಶ ದ್ವಾರದಲ್ಲೇ ದೇವರ ದರ್ಶನಕ್ಕೆ ಬರುವ ಎಲ್ಲ ಭಕ್ತರಿಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡುವುದು, ಕೈಗಳಿಗೆ ಸ್ಯಾನಿಟೈಸರ್ ಹಾಕುವುದು ಮಾತ್ರವಲ್ಲ ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿತ್ತು. ಸಾಮಾಜಿಕ ಅಂತರ ಕಡ್ಡಾಯ ಪಾಲನೆ ಸಿಬ್ಬಂದಿ ಭಕ್ತರಿಗೆ ಎಚ್ಚರಿಕೆ ನೀಡುತ್ತಿದ್ದರು.