Advertisement

ತಂದೆ ನೆನಪಿಗಾಗಿ ದೇವಾಲಯ ನಿರ್ಮಾಣ

03:53 PM Jun 20, 2022 | Team Udayavani |

ಯಲಬುರ್ಗಾ: ತಂದೆ-ತಾಯಿ ಪ್ರತಿಯೊಬ್ಬರ ಬಾಳಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಆಧುನಿಕ, ಯಾಂತ್ರಿಕ ಯುಗದಲ್ಲಿ ತಂದೆ-ತಾಯಿ ಹಿರಿಯರ ಮೇಲಿನ ಗೌರವ ಕಡಿಮೆಯಾಗುತ್ತಿದೆ. ಅಲ್ಲದೇ ಸಂಬಂಧಗಳ ಬೆಲೆ ಅರಿಯದೇ ಪೋಷಕರನ್ನು ವೃದ್ಧಾಶ್ರಮದಲ್ಲಿ ಬಿಡುತ್ತಿದ್ದಾರೆ. ಆದರೆ ತಾಲೂಕಿನ ಸಾಲಭಾವಿ ಗ್ರಾಮದಲ್ಲಿ ಈ ಮಾತುಗಳಿಗೆ ವಿರುದ್ಧವಾದ ಸನ್ನಿವೇಶವೊಂದು ಸೃಷ್ಟಿಯಾಗಿದೆ. ಐವರು ಪುತ್ರರು ತಮ್ಮ ತಂದೆ ನಿಧನರಾದ ಮೇಲೆ ಅವರ ನೆನಪಿಗಾಗಿ ದೇವಾಲಯ ಕಟ್ಟಿಸಿದ್ದು, ತಂದೆಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ.

Advertisement

ತಾಲೂಕಿನ ಸಾಲಭಾವಿ ಗ್ರಾಮದ ಮಾಲಿಪಾಟೀಲ ಕುಟುಂಬದ ಸಹೋದರರಾದ ದುರಗನಗೌಡ, ಶಂಕರಗೌಡ, ಶರಣಗೌಡ, ಶಿವನಗೌಡ, ಗ್ಯಾನನಗೌಡ ತಮ್ಮ ತಂದೆ ದಿ. ಹನುಮಗೌಡ ಪಾಟೀಲ ಅವರ ಮೂರ್ತಿ ಪ್ರತಿಷ್ಠಾಪಿಸಿ ನಿತ್ಯ ಪೂಜೆ ಮಾಡುತ್ತಿದ್ದಾರೆ. ಸಾಲಭಾವಿ ಗ್ರಾಮದ ಐತಿಹಾಸಿಕ ಶ್ರೀದುರ್ಗಾದೇವಿ ಪೂಜಾರಿಯಾಗಿದ್ದ ಹನುಮಗೌಡ ಅವರು ಬದುಕಿನುದ್ದಕ್ಕೂ ಇತರರಿಗೆ ಒಳಿತನ್ನೇ ಬಯಸಿದ್ದಾರೆ. ಅವರ ಒಳ್ಳೆಯತನದಿಂದಲೇ ನಮ್ಮ ಕುಟುಂಬಕ್ಕೆ ದೇವರು ಒಳೆಯದನ್ನು ಮಾಡುತ್ತಿದ್ದಾನೆ. ಹಾಗಾಗಿ ನಮ್ಮ ತಂದೆ ನಮಗೆ ಸದಾ ಸ್ಮರಣೀಯರು. ಅವರ ನೆನಪು ನಮ್ಮನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಹಾಗಾಗೀ ಮೂರ್ತಿ ಪ್ರತಿಷ್ಠಾಪಿಸಲು ನಿರ್ಧರಿದೇವು ಎನ್ನುತ್ತಾರೆ ಸಹೋದರರು. ಕೇವಲ ಮೂರ್ತಿ ಪ್ರತಿಷ್ಠಾಪನೆ ಅಷ್ಟೇ ಅಲ್ಲದೇ ದೇವಸ್ಥಾನವನ್ನು ಸಹ ನಿರ್ಮಾಣ ಮಾಡಿದ್ದಾರೆ.

12 ಲಕ್ಷ ರೂ ಖರ್ಚು: ಬಾಗಲಕೋಟೆ ಜಿಲ್ಲೆಯ ಕಲಾದಗಿ ಎಂಬಲ್ಲಿ ಮೂರ್ತಿ ತಯಾರು ಮಾಡಿದ್ದಾರೆ. ಮೂರ್ತಿ ಪ್ರತಿಷ್ಠಾಪಿಸಿದ ಪಾಟೀಲ ಕುಟುಂಬದವರ ಪಿತೃ ಪ್ರೇಮ ಇತರರಿಗೂ ಮಾದರಿಯಾಗಿದೆ.

ಧಾರ್ಮಿಕ ಕಾರ್ಯ: ದಿ. ಹನುಮಗೌಡ ಮಾಲಿಪಾಟೀಲ ಅವರು ಧಾರ್ಮಿಕ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದರು. ಗ್ರಾಮದ ದುರ್ಗಾದೇವಿಯ ಪ್ರಧಾನ ಅರ್ಚಕರಾಗಿದ್ದರು. ಪ್ರತಿವರ್ಷ ನಡೆಯುವ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದರು. ಜಾತ್ರೆಯ ಸಂದರ್ಭದಲ್ಲಿ ಇವರು ಐದು ದಿನಗಳ ಕಾಲ ಉಪವಾಸ ಮಾಡುತ್ತಿದ್ದರು. ಇವರ ದೈವಭಕ್ತಿಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆ ಭಾಗದಲ್ಲಿ ಯಾವುದೇ ಜಗಳಗಳಿದ್ದರೂ ಅವುಗಳನ್ನು ಯಾರಿಗೂ ಅನ್ಯಾಯವಾಗದಂತೆ ಇತ್ಯರ್ಥ ಮಾಡುತ್ತಿದ್ದರು.

ದಿ. ಹನುಮಗೌಡ ಮಾಲಿಪಾಟೀಲ ಅವರು ಪಾದರಕ್ಷೆ ಧರಿಸುತ್ತಿರಲಿಲ್ಲ, ಬರಿಗಾಲಿನಲ್ಲಿಯೇ ಪ್ರವಾಸ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಇವರು ಬಸ್‌, ಕಾರುಗಳಲ್ಲಿ ಪ್ರವಾಸ ಮಾಡುತ್ತಿರಲಿಲ್ಲ, ಬೈಕ್‌ನಲ್ಲಿಯೇ ಪ್ರಯಾಣ ಮಾಡುತ್ತಿದ್ದರು. ಒಮ್ಮೆ ಜಿಪಂ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಇವರು ಬೆಂಗಳೂರು, ಧಾರವಾಡ, ಮೈಸೂರು, ಮಸ್ಕಿ ವರೆಗೂ ಬೈಕ್‌ನಲ್ಲೇ ಹೋಗುತ್ತಿದ್ದರು ಇದೊಂದು ಇವರ ಜೀವನದಲ್ಲಿ ವೈಶಿಷ್ಟತೆಯಾಗಿದೆ.

Advertisement

ದಿ. ಹನುಮಗೌಡ ಮಾಲಿಪಾಟೀಲ ಅವರು ಜನರ ಪ್ರೀತಿಗಳಿಸಿದ್ದರು. ದೈವಶಕ್ತಿಯನ್ನು ಸಹ ಹೊಂದಿದ್ದರು. ಸದಾ ಜನಪರ ಕಾರ್ಯಗಳನ್ನು ಮಾಡುತ್ತಿದ್ದರು. ಅವರ ಅಗಲಿಕೆ ಬಹಳ ನೋವನ್ನುಂಟು ಮಾಡಿತ್ತು. ಬಾಲ್ಯದಿಂದಲೂ ಅವರ ಗೆಳೆತನವನ್ನು ಹೊಂದಿದ್ದೇನೆ. ಅವರು ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದರು. ನಿಜವಾಗಲೂ ದೇವಮಾನವರು ಆಗಿದ್ದಾರೆ. –ಶರಣಪ್ಪ ಉಪ್ಪಾರ, ದಿ. ಹನುಮಗೌಡ ಅವರು ಗೆಳೆಯ ವಜ್ರಬಂಡಿ

ಸಾಲಭಾವಿ ಗ್ರಾಮದ ದಿ. ಹನುಮಗೌಡ ಮಾಲಿಪಾಟೀಲ ಅವರು ದೇವರ ಪೂಜೆ ಮಾಡಿಕೊಂಡು ಜನರಿಗೆ ಸದಾ ಒಳ್ಳೆಯದನ್ನು ಬಯಸಿಸುತ್ತಿದ್ದವರು. ಅವರ ನೆನಪು ಸದಾ ಸ್ಮರಣೀಯವಾಗಿರಲಿ ಎಂದು ಮೂರ್ತಿ ಸ್ಥಾಪಿಸಿ ಪೂಜೆ ಮಾಡುವ ಕಾರ್ಯ ಶ್ಲಾಘನೀಯ. ಎಲ್ಲ ಸಮುದಾಯದ ಜನರ ಪ್ರೀತಿಗೆ ಪಾತ್ರರಾಗಿದ್ದರು. –ಬಾಲಚಂದ್ರ ಸಾಲಭಾವಿ, ಗುತ್ತಿಗೆದಾರರು, ಲಿಂಗನಬಂಡಿ

ಇಂದಿನ ಆಧುನಿಕ ಯುಗದಲ್ಲಿ ಗುರು-ಹಿರಿಯರನ್ನು ಗೌರವಿಸುವುದರ ಜೊತೆಗೆ ತಂದೆ-ತಾಯಿಯನ್ನು ಸ್ಮರಿಸಬೇಕು ಎಂಬ ಸಂದೇಶವನ್ನು ಸಾಲಭಾವಿಯ ಮಾಲಿಪಾಟೀಲ ಕುಟುಂಬ ಸಾರಿದೆ. ತಂದೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಪಿತೃ ಭಕ್ತಿ ಮೆರೆಯುತ್ತಿದ್ದಾರೆ. ಇತರರಿಗೂ ಮಾದರಿಯಾಗಿದ್ದಾರೆ. ದಿ. ಹನುಮಗೌಡ ಅವರು ಸದಾ ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. –ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ, ಶ್ರೀಧರ ಮುರಡಿ ಹಿರೇಮಠ ಯಲಬುರ್ಗಾ

-ಮಲ್ಲಪ್ಪ ಮಾಟರಂಗಿ

Advertisement

Udayavani is now on Telegram. Click here to join our channel and stay updated with the latest news.

Next