Advertisement

ಭಕ್ತರಿಗೆ ತೆರೆದುಕೊಂಡ ದೇಗುಲಗಳು

12:35 AM Jun 09, 2020 | Sriram |

ಉಡುಪಿ: ಲಾಕ್‌ಡೌನ್‌ನಿಂದಾಗಿ ಎರಡು ತಿಂಗಳಿಗೂ ಅಧಿಕ ಕಾಲ ಮುಚ್ಚಲಾಗಿದ್ದ ದೇವಸ್ಥಾನಗಳು ಸೋಮವಾರ ತೆರೆದುಕೊಂಡರೂ ಭಕ್ತರ ಸಂಖ್ಯೆ ಮಾತ್ರ ವಿರಳವಾಗಿತ್ತು.ಕೆಲವೇ ಸಂಖ್ಯೆಯ ಭಕ್ತರು ಮಾಸ್ಕ್ ಧರಿಸಿ ಒಳ ಪ್ರವೇಶಿಸಿದರು. ಥರ್ಮಲ್‌ ಸ್ಕ್ರೀನಿಂಗ್‌ ಪರೀಕ್ಷೆ, ಸ್ಯಾನಿಟೈಸರ್‌ ವ್ಯವಸ್ಥೆಗಳನ್ನು ದೇವಸ್ಥಾನ ಗಳ ಹೊರಭಾಗದಲ್ಲಿ ಕಲ್ಪಿಸಲಾಗಿತ್ತು. ಸರಕಾರ ತೀರ್ಥ ಬಳಕೆಗೆ ಅವಕಾಶ ಇಲ್ಲ ಎಂದು ಹೇಳಿದರೂ ಕೆಲವು ದೇವಸ್ಥಾನಗಳಲ್ಲಿ ತೀರ್ಥ ನೀಡಲಾಗುತ್ತಿತ್ತು.

Advertisement

ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಅಂಬಲಪಾಡಿಯ ಶ್ರೀ ಮಹಾಕಾಳಿ ದೇವಸ್ಥಾನ, ಕಡಿಯಾಳಿ, ಬೈಲೂರು, ಇಂದ್ರಾಣಿ, ಪುತ್ತೂರು, ಕನ್ನರ್ಪಾಡಿ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು. ವಿಶೇಷ ಪೂಜೆ ಗಳು ಇರಲಿಲ್ಲ. ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಅಂಬಲಪಾಡಿಯ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗುತ್ತಿತ್ತು. ದೇವಸ್ಥಾನದ ಸಿಬಂದಿ ಮುಖಗವಸು, ಕೈಗವಸು ಹಾಕಿಕೊಂಡು ಭಕ್ತರಿಗೆ ಥರ್ಮಲ್‌ ಸ್ಕ್ರೀನಿಂಗ್‌ ಮಾಡುತ್ತಿದ್ದರು. ಉಳಿದಂತೆ ಬೆಳಗ್ಗೆ ಹಾಗೂ ಸಂಜೆ ವೇಳೆ ಮಾತ್ರ ಪೂಜೆ ಸೇವೆಗಳು ನೆರವೇರಿದವು. ಯಾವುದೇ ವಿಶೇಷ ಸೇವೆ ಇರಲಿಲ್ಲ.

ಗಣಪತಿ ಹೋಮ
ಶ್ರೀ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನಗಳಲ್ಲಿ ಬೆಳಗ್ಗೆ ಎಂದಿನಂತೆ ಪೂಜೆ ನೆರವೇರಿತು. ಅನಂತರ ಗಣಪತಿ ಹೋಮ ನಡೆ ಯಿತು. ಭಕ್ತರಿಗೆ ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯವಾಗಿ ಮಾಡಲಾಗಿತ್ತು.

ದೇವಸ್ಥಾನಗಳಲ್ಲಿ ಜಾಗೃತಿ ಫ‌ಲಕ
ಎಲ್ಲ ದೇವಸ್ಥಾನಗಳಲ್ಲಿಯೂ ಜಾಗೃತಿ ಫ‌ಲಕ ಅಳವಡಿಸಲಾಗಿತ್ತು. ಕೈ ತೊಳೆದು ಕೊಂಡು ದೇಗುಲಕ್ಕೆ ಪ್ರವೇಶ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸಿ ಎಂಬ ಫ‌ಲಕಗಳು ಭಕ್ತರನ್ನು ಮತ್ತಷ್ಟು ಜಾಗೃತರನ್ನಾಗಿಸಿತು.ಬ್ರಹ್ಮಾವರದ ವಿವಿಧ ದೇಗುಲ, ಪಡುಬಿದ್ರಿ ಮಹಾಲಿಂಗೇಶ್ವರ, ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಕೋಟ ಅಮೃತೇಶ್ವರೀ ದೇಗುಲದಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ.

ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ, ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನ, ಕುಂಜೂರು ಶ್ರೀ ದುರ್ಗಾ ದೇವಸ್ಥಾನ, ಉಳಿಯಾರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಮಜೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಜಲಂಚಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಪಾಂಗಾಳ ಶ್ರೀ ಜನಾರ್ದನ ದೇವಸ್ಥಾನ, ಕೊಪ್ಪಲಂಗಡಿ ಶ್ರೀ ವಾಸುದೇವ ದೇವಸ್ಥಾನ, ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನವೂ ಸೇರಿದಂತೆ ಕಾಪು ತಾಲೂಕಿನ ಬಹುತೇಕ ದೇವಸ್ಥಾನಗಳು ಸೋಮವಾರ ಮುಂಜಾನೆಯಿಂದಲೇ ದೇವರ ದರ್ಶನ ಕ್ಕಾಗಿ ತೆರೆದುಕೊಂಡಿದ್ದು ಭಕ್ತರ ಸಂಖ್ಯೆ ವಿರಳವಾಗಿತ್ತು.

Advertisement

ಎರಡು ಮಾರಿಗುಡಿಗಳು ಓಪನ್‌
ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ಕಾಪು ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಯೂ ಸೋಮವಾರ ತೆರೆದಿತ್ತು.
ಕಾಪು ಪೇಟೆಯ ಗೌಡ ಸಾರಸ್ವತ ಸಮಾಜದ ಹತ್ತು ಸಮಸ್ತರ ಆಡಳಿತಕ್ಕೊಳಪಟ್ಟಿರುವ ಶ್ರೀ ಹಳೇ ಮಾರಿಗುಡಿ ದೇವಸ್ಥಾನ ಮತ್ತು ಶ್ರೀ ವೆಂಕಟರಮಣ ದೇವಸ್ಥಾನಗಳು ಜು. 15ರ ಬಳಿಕವಷ್ಟೇ ಸಾರ್ವಜನಿಕರಿಗಾಗಿ ತೆರೆದು ಕೊಳ್ಳಲಿವೆ.

ಯಾವುದೇ
ಸೇವಾದಿಗಳು ನಡೆದಿಲ್ಲ
ಕೋವಿಡ್-19ದಿಂದಾಗಿ ಎಲ್ಲ ಕ್ಷೇತ್ರಗಳಿಗೂ ನಷ್ಟ ಉಂಟಾಗಿದೆ. ದೇವರ ದರ್ಶನವೂ ನಿಲುಗಡೆ ಯಾಗಿತ್ತು. ಸೋಮವಾರ ದಿಂದ ಭಕ್ತರಿಗೆ ದೇವರ ದರ್ಶನ ಸೇವೆ ಆರಂಭಗೊಂಡಿದೆ. ಯಾವುದೇ ಸೇವಾದಿಗಳು ನಡೆದಿಲ್ಲ. ಗಣಪತಿ ಹೋಮ ನಡೆದಿದೆ.
-ಸಗ್ರಿ ವೇದವ್ಯಾಸ ಐತಾಳ್‌, ಮುಖ್ಯ ಅರ್ಚಕರು,
ಶ್ರೀ ಅನಂತೇಶ್ವರ ದೇವಸ್ಥಾನ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next