ಚಿಕ್ಕಮಗಳೂರು: ಲಾಕ್‌ಡೌನ್ ಬಳಿಕ ಬಾಗಿಲು ಮುಚ್ಚಿದ್ದ ದೇವಾಲಯಗಳು ಸೋಮವಾರ ಬಾಗಿಲು ತೆರೆದು ಭಕ್ತರಿಗೆ ದರ್ಶನ ನೀಡಿದವು. ರಾಜ್ಯ ಸರ್ಕಾರ ಮಂದಿರ, ಮಸೀದಿ ಚರ್ಚ್ ತೆರೆಯಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ಭಕ್ತರು ದೇವರ ದರ್ಶನ ಪಡೆದುಕೊಂಡರು. ದೇಶದಲ್ಲಿ ಕೋವಿಡ್ ತಡೆಗಟ್ಟುವ ಹಿನ್ನೆಲೆಯಲ್ಲಿ ಮಂದಿರ, ಮಸೀದಿ, ಚರ್ಚ್‌ಗಳು ಬಾಗಿಲು ಮುಚ್ಚಿಸಿದ್ದವು. ಸುಮಾರು 73 ದಿನಗಳ ಬಳಿಕ ಸರ್ಕಾರ ಮಂದಿರ, ಮಸೀದಿ, ಚರ್ಚ್ ತೆರೆಯಲು ಅವಕಾಶ ನೀಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ 880 ಮುಜರಾಯಿ ದೇವಾಲಯಗಳು ಸೋಮವಾರ ಬಾಗಿಲು ತೆರೆದು ಭಕ್ತರಿಗೆ ದರ್ಶನ ನೀಡಿದವು.
ಜಿಲ್ಲೆಯಲ್ಲಿರುವ 880 ಮುಜರಾಯಿ ದೇವಾಲಯಗಳಲ್ಲಿ 3 ಎ ದರ್ಜೆಯ ದೇವಾಲಯ ಗಳಾದ ಮೂಡಿಗೆರೆ ತಾಲೂಕು ಕಲಶೇಶ್ವರ ದೇವಾಲಯ, ಶೃಂಗೇರಿ ತಾಲೂಕು ಮಳೆದೇವರೆಂದೆ
ಹೆಸರಾಗಿರುವ ಋಷ್ಯಶೃಂಗ, ಮುಳ್ಳಯ್ಯನ ಗಿರಿ ಪ್ರದೇಶದಲ್ಲಿರುವ ದತ್ತಪೀಠ ಹಾಗೂ 8 ಬಿ ದರ್ಜೆಯ ದೇವಾಲಯಗಳೂ ಸೇರಿದಂತೆ 880 ಮುಜರಾಯಿ ಇಲಾಖೆ ಅಧಿಧೀನ ದೇವಾಲಯಗಳಲ್ಲಿ ಸೋಮವಾರ ಬೆಳಿಗ್ಗೆ ಅರ್ಚಕರು ಪೂಜೆ ಸಲ್ಲಿಸಿದ ನಂತರ ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು.
ಭಕ್ತರು ಮುಜರಾಯಿ ಇಲಾಖೆ ಮಾರ್ಗಸೂಚಿಯಂತೆ ಮಾಸ್ಕ್ ಧರಿಸಿ, ಸ್ಯಾನಿಟೆ„ಸರ್, ಥರ್ಮಲ್ ಸ್ಕ್ಯಾನಿಂಗ್ ಬಳಿಕ ಸಾಮಾಜಿಕ ಅಂತರ ಪಾಲನೆಯೊಂದಿಗೆ ದೇವರ ದರ್ಶನ ಪಡೆದರು. ದೇವಾಲಯದ ವತಿಯಿಂದಲೇ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು ಹಾಗೂ ದೇವಾಲಯಗಳ ಆವರಣದಲ್ಲಿ ಕೋವಿಡ್ ಸೋಂಕು ಸಂಬಂಧ ಜಾಗೃತಿ ಫಲಕಗಳನ್ನು ಅಳವಡಿಸಲಾಗಿತ್ತು.
ಇಲಾಖೆಯ ನಿರ್ದೇಶನದಂತೆ ಅರ್ಚಕರು ಮಂಗಳಾರತಿ ನೆರವೇರಿಸಿದರು. ಆದರೆ, ಭಕ್ತರು ಮಂಗಳಾರತಿ ಪಡೆಯುವುದನ್ನು ನಿಷೇ ಧಿಸಲಾಗಿತ್ತು. ಮತ್ತು ಗರ್ಭಗುಡಿಯಿಂದ ದೂರದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ದೇವರ ದರ್ಶನ ಪಡೆದುಕೊಳ್ಳಲು ಅವಕಾಶ ನೀಡಲಾಗಿತ್ತು. ಪೂಜೆಗೂ ಮುನ್ನಾ ದೇವಾಲಯ ಪ್ರಾಂಗಣ ಹಾಗೂ ಗರ್ಭಗುಡಿಯೊಳಗೆ ರಾಸಾಯನಿಕ ದ್ರಾವಣ ಸಿಂಪಡಿಸಿ ಸ್ವತ್ಛಗೊಳಿಸಲಾಗಿತ್ತು. ಮಸೀದಿಗಳಲ್ಲಿ ನಮಾಜ್‌ಗೆ ಅವಕಾಶ ಕಲ್ಪಿಸಿದ್ದು, ಜಿಲ್ಲೆಯ ಬಹುತೇಕ ಮಸೀದಿ ಆಡಳಿತ ಮಂಡಳಿ ಮುಸ್ಲಿಂ ಸಮುದಾಯದವರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದರು.
ಚರ್ಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿದರು. ಜಿಲ್ಲೆಯ ಚರ್ಚ್‌ಗಳ ಮುಖ್ಯಸ್ಥರು ಸೋಮವಾರ ಚರ್ಚ್‌ಗಳಲ್ಲಿ ಪ್ರಾರ್ಥನೆ ಆರಂಭಿಸಲಿಲ್ಲ, ಕ್ರೈಸ್ತ ಧರ್ಮಗುರುಗಳ ಆದೇಶದಂತೆ ಜೂ.13ರ ನಂತರ ಚರ್ಚ್‌ಗಳಲ್ಲಿ ಪ್ರಾರ್ಥನೆ ಆರಂಭಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಬಾಗಿಲು ತೆರೆದ ಶೃಂಗೇರಿ ಶಾರದಾ ಪೀಠ: ಜಿಲ್ಲೆಯ ಹೆಸರಾಂತ ಯಾತ್ರಾಸ್ಥಳ ಶೃಂಗೇರಿ ಶಾರದಾಂಭ ದೇವಾಲಯದಲ್ಲಿ ಸೋಮವಾರ ಬೆಳಿಗ್ಗೆ ಪೂಜೆ ಸಲ್ಲಿಸಿದ ನಂತರ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆದು ಪುನಿತರಾದರು.
ದತ್ತಾತ್ರೇಯನ ದರ್ಶನಕ್ಕೆ ಅವಕಾಶ: ಮುಳ್ಳಯ್ಯನಗಿರಿ ಹಸಿರು ತಪ್ಪಲಿನಲ್ಲಿರುವ ದತ್ತಪೀಠದಲ್ಲೂ ದತ್ತಾತ್ರೇಯನ ದರ್ಶನಕ್ಕೆ ಸೋಮವಾರದಿಂದ ಅವಕಾಶ ಕಲ್ಪಿಸಲಾಗಿದೆ. ಗುಹೆಯ ಒಳಭಾಗ ಹಾಗೂ ಹೊರಭಾಗ ಧರ್ಮಲ್ ಸ್ಕ್ಯಾನಿಂಗ್ ನಡೆಸಿ ಸ್ಯಾನಿಟೈಸರ್, ಮಾಸ್ಕ್ಧರಿಸಿದ ನಂತರವೇ ಗುಹೆ ಒಳಗೆ ಬಿಡಲಾಗುತ್ತಿತ್ತು. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ದತ್ತಾತ್ರೇಯನ ದರ್ಶನ ಪಡೆದುಕೊಂಡರು.