ಬೆಂಗಳೂರು: “ದೇವಾಲಯಗಳ ಹುಂಡಿ ಹಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ಕೊಡುವುದು ಕಡ್ಡಾಯವಲ್ಲ, ಅದು ದೇವಾಲಯಗಳ ಸ್ವಇಚ್ಛೆಗೆ ಬಿಟ್ಟಿದ್ದು’ ಎಂದು ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ಮಾರ್ಪಾಡುಗೊಳಿಸಿದ್ದನ್ನು ಮಾನ್ಯ ಮಾಡಿದ
ಹೈಕೋರ್ಟ್, ಶುಕ್ರವಾರ ಈ ಸಂಬಂಧದ ಅರ್ಜಿಯನ್ನು ಇತ್ಯರ್ಥಪಡಿಸಿತು.
ಮುಜರಾಯಿ ಇಲಾಖೆಯ ಆಯ್ದ 81 ದೇವಾಲಯಗಳ ಹುಂಡಿ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವರ್ಗಾಹಿಸಬೇಕೆಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಹೇಮಾ ನಾಯ್ಡು ಹಾಗೂ ವಿ.ಆರ್. ಸಂಪತ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಆರ್.ಬಿ. ಬೂದಿಹಾಳ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಸರ್ಕಾರದ ಹೇಳಿಕೆಯನ್ನು ದಾಖಲಿಸಿಕೊಂಡು ಅರ್ಜಿ ಇತ್ಯರ್ಥಗೊಳಿಸಿತು.
ವಿಚಾರಣೆ ವೇಳೆ, “ಈಗಾಗಲೇ ದೇವಾಲಯಗಳು ಪರಿಹಾರ ನಿಧಿಗೆ ಹಣ ನೀಡಿವೆ. ದಾನ ಮಾಡಿದ ಹಣವನ್ನು ವಾಪಸ್ ನೀಡಬೇಕು ಅನ್ನುವ ಅಪೇಕ್ಷೆ ಸಮಂಜಸವಲ್ಲ. ಧರ್ಮಕ್ಕಿಂತ ಮಾನವೀಯತೆ ದೊಡ್ಡದಲ್ಲವೇ ಎಂದು ಪ್ರಶ್ನಿಸಿದ ನ್ಯಾಯಪೀಠ, ಸರ್ಕಾರದ ಆದೇಶದಿಂದ ನಿಮಗೆ ತೊಂದರೆ ಆಗಿದ್ದರೆ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿ ಎಂದು ಅರ್ಜಿದಾರರಿಗೆ ಸೂಚಿಸಿತು.
ಅರ್ಜಿದಾರರ ಪರ ವಕೀಲ ಪವನ್‌ಚಂದ್ರ ಶೆಟ್ಟಿ ವಾದ ಮಂಡಿಸಿದ್ದರು. ಇತ್ತೀಚೆಗೆ ಕೊಡಗು ುತ್ತು ಕೇರಳದಲ್ಲಿ ಸಂಭವಿಸಿದ ನೆರೆ ಹಾನಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿ ಕ್ರೋಢೀಕರಣಕ್ಕೆ ರಾಜ್ಯ ಸರ್ಕಾರ ಆಗಸ್ಟ್ 21ರಂದು ಆದೇಶ ಹೊರಡಿಸಿದೆ. ಅದರಲ್ಲಿ ಮುಜರಾಯಿ ಇಲಾಖೆಯ 81 ದೇವಾಲಯಗಳು ತಮ್ಮ ಹುಂಡಿ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ವರ್ಗಾಯಿಸುವಂತೆ ಹೇಳಲಾಗಿತ್ತು. ಆದರಂತೆ 81 ದೇವಾಲಯಗಳ ಅಂದಾಜು 12.30 ಕೋಟಿ ರೂ. ಹಣ ಪರಿಹಾರ ನಿಧಿಗೆ ವರ್ಗಾಯಿಸಲಾಗಿತ್ತು. ಇದು ಕರ್ನಾಟಕ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಕಾಯ್ದೆ – 1997ರ ಉಲ್ಲಂಘನೆಯಾಗಿದೆ. ಆದ್ದರಿಂದ ಮುಜರಾಯಿ ಇಲಾಖೆಯ ಆಯುಕ್ತರು ಹೊರಡಿಸಿರುವ ಆದೇಶ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.