ಕುಣಿಗಲ್: ತಾಲೂಕಿನ ತಪೋಕ್ಷೇತ್ರ ಕಗ್ಗೆರೆ ತೋಂಟದ ಸಿದ್ಧಲಿಂಗೇಶ್ವರಸಾಮಿ ಪುಣ್ಯ ಕ್ಷೇತ್ರದಲ್ಲಿ ಕಾರ್ತೀಕದ ಪ್ರಯುಕ್ತ ನಡೆದ ದೀಪೋತ್ಸವದಲ್ಲಿ ಸಾವಿರಾರು ಭಕ್ತರು ದೀಪ ಹಚ್ಚಿ ಭಕ್ತಿ ಸಮರ್ಪಿಸಿದರು.
ದೇವಸ್ಥಾನದಿಂದ ಸಿದ್ಧಲಿಂಗೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ದೇವಸ್ಥಾನ ಮುಂಭಾಗದ ವೇದಿಕೆಗೆ ಕರೆತಂದು ಎಡೆಯೂರು ಬಾಳೆಹೊನ್ನೂರು ಶಾಖಾ ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಕ್ಷೇತ್ರದ ಬಾಲ ಮಂಜುನಾಥ ಸ್ವಾಮೀಜಿ, ಅಂಕನಹಳ್ಳಿ ಮಠದ ಶಿವರುದ್ರಶಿವಾಚಾರ್ಯ ಸ್ವಾಮೀಜಿ ದೀಪ ಬೆಳಗುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು.
ರಾಮಜನ್ಮ ಭೂಮಿ ದರ್ಶನ ಮಾಡಿ: ಹಂಗರಹಳ್ಳಿ ಮಠದ ಬಾಲ ಮಂಜುನಾಥ ಸ್ವಾಮೀಜಿ ಮಾತನಾಡಿ, ಕಾರ್ತೀಕ ಮಾಸದಲ್ಲಿ ಅಯೋಧ್ಯೆ ರಾಮ ಜನ್ಮಭೂಮಿ ನಮ್ಮದಾಗಿದ್ದು, ಹಿಂದುಗಳು ಜೀವನದಲ್ಲಿ ಒಮ್ಮೆಯಾದರೂ ರಾಮ ಜನ್ಮಭೂಮಿ ದರ್ಶನ ಮಾಡಬೇಕು. ಎಡೆಯೂರು ಸಿದ್ಧಲಿಂಗೇಶ್ಚರ ಕ್ಷೇತ್ರ ಹಾಗೂ ತಪೋ ಕ್ಷೇತ್ರ ಕಗ್ಗೆರೆ ಕೂಡ ವಿದೇಶದಲ್ಲಿ ಪುಣ್ಯ ಕ್ಷೇತ್ರ ಎಂದು ಹೆಸರಾಗಿದೆ.
ಮಠ ಕಟ್ಟಲು ನಾನು ಸಿದ್ಧಲಿಂಗೇಶ್ವರ ಸ್ವಾಮಿ ಬಳಿ ಪ್ರಸಾದ ಕೇಳಿದಾಗ, ಐದು ತುಂಬೆ ಪ್ರಸಾದ ನೀಡದರು. ಈಗ ನಾನು ರಾಜ್ಯದಲ್ಲೇ ಖ್ಯಾತಿ ಹೊಂದಿರುವ ಹಂಗರಹಳ್ಳಿ ಮಠ ಕಟ್ಟಿದ್ದೇನೆ. ಸಿದ್ಧಲಿಂಗಸ್ವಾಮಿ ಕ್ಷೇತ್ರ ಪವಾಡ ಕ್ಷೇತ್ರ ಎಂದು ತಿಳಿಸಿದರು. ಎಡೆಯೂರು ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ್, ಕಗ್ಗರೆ ದೇವಸ್ಥಾನ ಮೇಲ್ವಿಚಾರಕ ಹನುಮಂತಯ್ಯ, ಸಿಬ್ಬಂದಿ ರೇಣುಕಾ ಪ್ರಸಾದ್, ಶರಣ್, ಅರ್ಚಕರಾದ ವೈ.ಟಿ. ಸುರೇಶ್, ದಾಸೋಹ ಸಮಿತಿ ನಿರ್ದೇಶಕ ನಿಟ್ಟೂರು ಪ್ರಕಾಶ್ ಮತ್ತಿತರರು ಹಾಜರಿದ್ದರು.