Advertisement

ಇಂದ್ರನ ಕಾಮಧೇನು ಭುವಿಗಿಳಿದ ತಾಣ

08:53 PM Aug 02, 2019 | mahesh |

ಕೋಲಾರ ಸಮೀಪದ ಕಾಮಧೇನಹಳ್ಳಿ!
ಪುಟ್ಟ ಊರಾದರೂ, ಇದರ ಪುರಾಣ ಮಹಿಮೆ ಅಪಾರ. ಅದು ಜಮದಗ್ನಿ ಮಹರ್ಷಿ ವಿಶ್ವಶಾಂತಿಗಾಗಿ ತಪಸ್ಸು ಮಾಡುತ್ತಿದ್ದ ಸಂದರ್ಭ. ತಪಸ್ಸಿಗೆ ಯಾವುದೇ ಅಡಚಣೆ ಆಗದಂತೆ, ಸಕಲ ಅನುಕೂಲ ಕಲ್ಪಿಸಲು, ದೇವೇಂದ್ರನು ಬೇಡಿದ್ದನ್ನು ಕೊಡುವ ಕಾಮಧೇನುವನ್ನು ಋಷಿ ಮುನಿಯ ಕುಟೀರಕ್ಕೆ ನೀಡಿದ್ದನು.

Advertisement

ಅದೇ ವೇಳೆಗೆ, ಮಹಾರಾಜ ಕಾರ್ತವೀರಾರ್ಜುನ ಮಾರ್ಗ ಮಧ್ಯದಲ್ಲಿ ಮಹರ್ಷಿಯ ದರ್ಶನಕ್ಕೆ ಬಂದಾಗ, ಅವನಿಗೆ ರಾಜಾತಿಥ್ಯ ನೀಡಲಾಗುತ್ತದೆ. ಇಂಥ ವೈಭವೋಪೇತ ಆತಿಥ್ಯಕ್ಕೆ, ಬೇಡಿದ್ದನ್ನು ನೀಡುವ ಕಾಮಧೇನುವೇ ಕಾರಣ ಎಂಬ ಸತ್ಯ ರಾಜನಿಗೆ ಗೊತ್ತಾಗುತ್ತದೆ. “ಈ ಕಾಮಧೇನು ನನ್ನಲ್ಲಿದ್ದರೆ, ದೇಶ ಸುಭಿಕ್ಷವಾಗಿರುತ್ತದೆ. ಆದ್ದರಿಂದ ಕಾಮಧೇನುವನ್ನು ನನಗೆ ನೀಡಬೇಕು’ ಎಂದು ಕೇಳುತ್ತಾನೆ. ಆದರೆ, ಕಾಮಧೇನುವನ್ನು ಯಾರಿಗೂ ದಾನ ಮಾಡುವುದಿಲ್ಲವೆಂದು ಜಮದಗ್ನಿ ಮಹರ್ಷಿ ಖಡಾಖಂಡಿತವಾಗಿ ಹೇಳುತ್ತಾರೆ.

ಕೋಪಗೊಂಡ ಮಹಾರಾಜ, ರಾಜಧಾನಿಗೆ ಬರಿಗೈಯಲ್ಲಿ ಮರಳುತ್ತಾನೆ. ಮಹರ್ಷಿ ಇಲ್ಲದ ಸಮಯದಲ್ಲಿ ಕಾಮಧೇನುವನ್ನು ಕರೆ ತರಲು ಸೈನ್ಯವನ್ನು ಕಳುಹಿಸುತ್ತಾನೆ. ಇದರಿಂದ ಕೋಪಗೊಂಡ ಕಾಮಧೇನು, ತನ್ನ ಅಂಗಾಂಗಗಳಿಂದ ಅಕ್ಷೋಹಿಣಿ ಸೈನ್ಯವನ್ನು ಸೃಷ್ಟಿಸಿ, ರಾಜನ ಅಪಾರ ಸೈನ್ಯವನ್ನು ಅಲ್ಪ ಸಮಯದಲ್ಲೇ ನೆಲಸಮ ಮಾಡುತ್ತದೆ. ಇದರಿಂದ ಕಾರ್ತವೀರಾರ್ಜುನನು ಖನ್ನನಾಗಿ ಜಮದಗ್ನಿ ಮಹರ್ಷಿಯ ಬಳಿಗೆ ಬಂದು ಕ್ಷಮೆ ಯಾಚಿಸುತ್ತಾನೆ. ಕಾಮಧೇನುವನ್ನು ಪೂಜಿಸಿ ಕೃತಾರ್ಥನಾಗುತ್ತಾನೆ. ಹೀಗೆ ಪೂಜೆ ಮಾಡಿದ ಸ್ಥಳವೇ ಕಾಮಧೇನುಪುರವಾಗಿ, ಮುಂದೆ ಕಾಮಧೇನಹಳ್ಳಿಯಾಗಿ ಉಳಿದುಕೊಂಡಿದೆ.

ಗ್ರಾಮ ದೇವತೆ ಕಾಮಧೇನುವಿನ ಉದ್ಭವ ಮೂರ್ತಿಯನ್ನು ಗ್ರಾಮಸ್ಥರು ಹಲವಾರು ವರ್ಷಗಳಿಂದಲೂ, ಇಲ್ಲಿನ ಈಶ್ವರ ದೇಗುಲದ ಬಳಿಯೇ ಪೂಜಿಸುತ್ತಿದ್ದರು. ಆದರೆ, ಎರಡು ದಶಕಗಳ ಹಿಂದೆ ಗ್ರಾಮಸ್ಥರು ಕಾಮಧೇನುವಿನ ವಿಗ್ರಹವನ್ನು ಆಕರ್ಷಕವಾಗಿ ಕೆತ್ತಿಸಿ, ಪುಟ್ಟದಾದ ಗುಡಿಯಲ್ಲಿ ಪ್ರತಿಷ್ಠಾಪಿಸಿ, ಪೂಜಿಸುತ್ತಿದ್ದಾರೆ. ಪ್ರತಿ ಸೋಮವಾರ, ಹಬ್ಬ ಹರಿದಿನಗಳು, ಗ್ರಾಮದ ಜಾತ್ರೆ, ಉತ್ಸವ, “ದ್ಯಾವರ’ಗಳ ಸಂದರ್ಭದಲ್ಲಿ ನೇಮ ನಿಷ್ಠೆಯಿಂದ ಪೂಜೆ ಸಲ್ಲಿಸುತ್ತಾರೆ.

ಸಾಮರಸ್ಯದ ಊರು
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹರಡಿರುವ ಮರಸು ಅಥವಾ ಮುಸುಕು ಒಕ್ಕಲಿಗರ ಮೂಲ ಬೇರುಗಳಿರುವುದು ಕಾಮಧೇನಹಳ್ಳಿಯಲ್ಲಿಯೇ. ದಲಿತ ಮತ್ತು ಒಕ್ಕಲಿಗರ ಸೌಹಾರ್ದ ಬದುಕಿನ ಮಾದರಿ ಗ್ರಾಮವಾಗಿಯೂ ಕಾಮಧೇನಹಳ್ಳಿ ಗಮನ ಸೆಳೆಯುತ್ತದೆ. ದಲಿತ ಮತ್ತು ಒಕ್ಕಲಿಗರು ಈ ಗ್ರಾಮದಲ್ಲಿ ಪರಸ್ಪರ ಬಂಧುಗಳಂತೆ ಸಂಬೋಧಿಸಿಕೊಳ್ಳುವುದು ವಿಶೇಷ. ಗ್ರಾಮದಲ್ಲಿ ಯಾವುದೇ ಜಾತ್ರೆ, “ದ್ಯಾವರ’ ಪೂಜಾ ಕಾರ್ಯಕ್ರಮಗಳನ್ನು ಒಗ್ಗೂಡಿ ಆಚರಿಸುವುದು ಕಾಮಧೇನಹಳ್ಳಿಯ ಸಂಪ್ರದಾಯ.

Advertisement

ಪ್ರತಿ ಇಪ್ಪತ್ತು ವರ್ಷಕ್ಕೊಮ್ಮೆ “ದೊಡ್ಡ ದ್ಯಾವರ’ ಆಚರಿಸುವ ಸಂಪ್ರದಾಯವನ್ನು ಗ್ರಾಮಸ್ಥರು ಶ್ರದ್ಧಾ ಭಕ್ತಿಗಳಿಂದ ನೆರವೇರಿಸುತ್ತಾರೆ. 2020ಕ್ಕೆ ಇಪ್ಪತ್ತು ವರ್ಷಗಳ ದೊಡ್ಡ ದ್ಯಾವರ ಆಚರಿಸಲು ಕಾಮಧೇನಹಳ್ಳಿಯಲ್ಲಿ ಈಗಿನಿಂದಲೇ ಸಿದ್ಧತೆಗಳು ನಡೆಯುತ್ತಿವೆ.
– ಡಾ.ಕೆ.ಎಂ.ಜೆ. ಮೌನಿ, ಗ್ರಾಮದ ಮುಖಂಡ

ದರುಶನಕೆ ದಾರಿ…
ಕೋಲಾರ ನಗರದ ಮಣಿಘಟ್ಟ ರಸ್ತೆಯಲ್ಲಿ 4 ಕಿ.ಮೀ. ಸಾಗಿದರೆ, ಪುಟ್ಟ ಗ್ರಾಮ ಕಾಮಧೇನಹಳ್ಳಿ ಸಿಗುತ್ತದೆ. ಅಲ್ಲಿನ ಪುಟ್ಟ ಗುಡಿಯಲ್ಲಿ ಕಾಮಧೇನುವಿನ ಮೂರ್ತಿ ಕಾಣಬಹುದು.

– ಕೆ.ಎಸ್‌. ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next