ಲಕ್ನೋ: ಹಲವು ವರ್ಷಗಳಿಂದಲೂ ಎರಡು ಸಮುದಾಯಗಳ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿದ, ಭಾರತದ ಅತ್ಯಂತ ವಿವಾದಾತ್ಮಕ ಧಾರ್ಮಿಕ ಕಲಹವೆಂದೇ ಪರಿಗಣಿಸಲ್ಪಟ್ಟಿರುವ ಅಯೋಧ್ಯೆಯ ರಾಮಮಂದಿರ -ಬಾಬರಿ ಮಸೀದಿ ಸಂಘರ್ಷವು ಶಾಂತಿಯುತ ಪರಿಹಾರದತ್ತ ಮುಖ ಮಾಡುತ್ತಿರುವ ಲಕ್ಷಣ ಕಂಡುಬಂದಿದೆ. ವಿವಾದಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಸ್ವತಃ ಹೆಜ್ಜೆಯಿಟ್ಟಿರುವ ಶಿಯಾ ವಕ್ಫ್ ಮಂಡಳಿಯು, “ಅಯೋಧ್ಯೆಯಲ್ಲಿ ವೈಭವಯುತ ರಾಮ ಮಂದಿರ ನಿರ್ಮಾಣವಾಗಲಿ. ಲಕ್ನೋದಲ್ಲಿ ಮಸ್ಜಿದ್-ಇ-ಅಮನ್(ಶಾಂತಿಯ ಮಸೀದಿ) ನಿರ್ಮಿಸಿ’ ಎಂಬ ಕರಡು ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್ ಮುಂದಿಟ್ಟಿದೆ. ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಶಾಂತಿಯುತ ಸಂಧಾನದ ಮೂಲಕ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಶ್ರಮಿಸುತ್ತಿರುವುದರ ನಡುವೆಯೇ ಈ ಬೆಳವಣಿಗೆ ನಡೆದಿರುವುದು ವಿಶೇಷ.
ಸೋಮವಾರ ಈ ಕುರಿತು ಮಾಹಿತಿ ನೀಡಿರುವ ಶಿಯಾ ವಕ್ಫ್ ಮಂಡಳಿಯ ಮುಖ್ಯಸ್ಥ ವಾಸಿಮ್ ರಿಜ್ವಿ, “ಅಯೋಧ್ಯೆ ವಿವಾದವನ್ನು ಪರಿಹರಿಸಿಕೊಳ್ಳುವ ಕರಡು ಪ್ರಸ್ತಾಪವನ್ನು ಶನಿವಾರವೇ (ನ.19) ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದೇವೆ. ಎಲ್ಲರೊಂದಿಗೂ ಮಾತುಕತೆ ನಡೆಸಿದ ಬಳಿಕ, ಅಯೋಧ್ಯೆಯ ಬದಲು ಇಲ್ಲಿಂದ 132 ಕಿ.ಮೀ. ದೂರದಲ್ಲಿರುವ ಲಕ್ನೋದ ಹುಸೈನಾಬಾದ್‌ನಲ್ಲಿ ಮಸೀದಿ ನಿರ್ಮಿಸೋಣ ಎಂಬ ನಿಲುವಿಗೆ ನಾವು ಬಂದಿದ್ದೇವೆ. ಅದಕ್ಕಾಗಿ ಒಂದು ಎಕರೆ ಭೂಮಿಯನ್ನು ನೀಡುವಂತೆ ಸರಕಾರವನ್ನು ಕೋರುತ್ತೇವೆ,’ ಎಂದಿದ್ದಾರೆ.
ಕೆಲವರ ವಿರೋಧ: ಶಿಯಾ ಮಂಡಳಿಯ ಪ್ರಸ್ತಾಪವನ್ನು ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂ ಸಂಘಟನೆಗಳ ಹಲವು ನಾಯಕರು ಸ್ವಾಗತಿಸಿದ್ದಾರೆ. ಆದರೆ, ಬಹುತೇಕ ಮುಸ್ಲಿಮರು ಇದಕ್ಕೆ ಸಹಮತ ವ್ಯಕ್ತಪಡಿಸಿಲ್ಲ ಎಂದು ಹೇಳಲಾಗಿದೆ. ಬಿಜೆಪಿಯ ಒತ್ತಡಕ್ಕೆ ಮಣಿದು ಇಂತಹ ಪ್ರಸ್ತಾಪ ಸಲ್ಲಿಸಲಾಗುತ್ತಿದೆ ಎಂದು ಶಿಯಾ ನಾಯಕ ಮೌಲಾನಾ ಕಲೆºà ಜಾವೇದ್ ಹೇಳಿದ್ದಾರೆ. ಅಲ್ಲದೆ, ಶಿಯಾ ಮಂಡಳಿಯು ವಿವಾದಿತ ಜಾಗದ ಅರ್ಜಿದಾರನಲ್ಲ. ಆ ಸ್ಥಳದ ಮಾಲೀಕತ್ವ ತನ್ನದು ಎಂದು ಹೋರಾಡುತ್ತಾ ಬಂದಿರುವುದು ಸುನ್ನಿ ವಕ್ಫ್ ಬೋರ್ಡ್.
ಡಿ.5ರಂದು ವಿಚಾರಣೆ: ಅಯೋಧ್ಯೆಯ 2.7 ಎಕರೆ ಭೂಮಿಯ ವಿವಾದದ ಕುರಿತು ಅಂತಿಮ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಡಿ.5ರಂದು ಆರಂಭವಾಗಲಿದೆ.
ಈ ಹಿಂದೆ ಅಲಹಾಬಾದ್ ಹೈಕೋರ್ಟ್, ವಿವಾದಿತ ಸ್ಥಳವನ್ನು ಅರ್ಜಿದಾರರಾದ ರಾಮಲಲ್ಲಾ, ನಿರ್ಮೋಹಿ ಅಖಾಡ ಮತ್ತು ಸುನ್ನಿ ವಕ್ಫ್ ಮಂಡಳಿಗೆ ಹಂಚಿಕೆ ಮಾಡಿ ತೀರ್ಪು ನೀಡಿತ್ತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.
ರಾಮಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿ. ಮಸೀದಿಯನ್ನು ಲಕ್ನೋದ ಹುಸೈನಾಬಾದ್‌ನಲ್ಲಿ ನಿರ್ಮಿಸೋಣ ಎಂಬ ನಿಲುವಿಗೆ ನಾವು ಬಂದಿದ್ದೇವೆ. ಅದಕ್ಕಾಗಿ ಒಂದು ಎಕರೆ ಭೂಮಿಯನ್ನು ನೀಡುವಂತೆ ಸರಕಾರವನ್ನು ಕೋರುತ್ತೇವೆ.
– ವಾಸಿಮ್ ರಿಜ್ವಿ, ಶಿಯಾ ವಕ್ಫ್ ಮಂಡಳಿಯ ಮುಖ್ಯಸ್ಥ
ನಾವು ಎಲ್ಲ ಧಾರ್ಮಿಕ ನಾಯಕರಲ್ಲೂ ಮಾತುಕತೆ ನಡೆಸಿ ಶಾಂತಿಯುತ ಪರಿಹಾರಕ್ಕೆ ಯತ್ನಿಸುತ್ತೇವೆ. ಸುನ್ನಿ ಮಂಡಳಿ ಜೊತೆಯೂ ಮಾತಾಡಿ, ದೂರು ಕೈಬಿಡುವಂತೆ ಕೇಳಿಕೊಳ್ಳುತ್ತೇವೆ. 2018ರಿಂದಲೇ ಮಂದಿರ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳುತ್ತೇವೆ.
– ಮಹಾಂತ ನರೇಂದ್ರ ಗಿರಿ, ಅಖೀಲ ಭಾರತೀಯ ಅಖಾರಾ ಪರಿಷತ್