Advertisement

ದೇವಾಲಯ-ಹೋಟೆಲ್‌ ಪುನಾರಂಭ

03:14 PM Jun 09, 2020 | mahesh |

ದಾವಣಗೆರೆ: ಕೋವಿಡ್ ವೈರಸ್‌ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ 5.0 ನಡುವೆ ಸೋಮವಾರದಿಂದ ದೇವಸ್ಥಾನ, ಹೋಟೆಲ್‌, ರೆಸ್ಟೋರೆಂಟ್‌
ಪುನಾರಂಭಗೊಂಡವು. ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ, ಹಳೇಪೇಟೆಯ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ, ದೊಡ್ಡಪೇಟೆಯ ಐತಿಹಾಸಿಕ ವಿರಕ್ತ ಮಠ, ನಿಟುವಳ್ಳಿ ಗ್ರಾಮ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ, ಕೆ.ಬಿ. ಬಡಾವಣೆ, ವಿನೋಬ ನಗರ 2ನೇ ಮುಖ್ಯ ರಸ್ತೆಯಲ್ಲಿನ ಶ್ರೀ ಗಣೇಶ ದೇವಸ್ಥಾನ ಒಳಗೊಂಡಂತೆ ಅನೇಕ ದೇವಸ್ಥಾನಗಳು ಭಕ್ತರ ದರ್ಶನಕ್ಕೆ ಸಜ್ಜಾಗಿವೆ. ದುಗ್ಗಮ್ಮನ ದೇವಸ್ಥಾನದಲ್ಲಿ ಬೆಳಗ್ಗೆ ಪಂಚಾಮೃತಾಭಿಷೇಕ, ವಿಶೇಷ ಪೂಜೆ-ಪುನಸ್ಕಾರ ನೆರವೇರಿಸಲಾಯಿತು. ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ವಿಶೇಷ ಪೂಜೆ ಸಲ್ಲಿಸಿ, ಕೊರೊನಾ ನಿರ್ಮೂಲನೆಗೆ ಪ್ರಾರ್ಥಿಸಿದರು. ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಪತ್ನಿ ಡಾ| ಪ್ರಭಾ ಮಲ್ಲಿಕಾರ್ಜುನ್‌ ಒಳಗೊಂಡಂತೆ ಅನೇಕರು ದೇವಿಯ ದರ್ಶನ ಪಡೆದರು.

Advertisement

ಕೊರೊನಾ ವೈರಸ್‌ ವ್ಯಾಪಿಸುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಧರಿಸಿದವರಿಗೆ ಮಾತ್ರವೇ ದೇವಸ್ಥಾನದ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಮಾಸ್ಕ್ ಇಲ್ಲದವರಿಗೆ ಅವಕಾಶ
ನೀಡದೆ ವಾಪಸ್‌ ಕಳುಹಿಸಲಾಯಿತು. ದಾವಣಗೆರೆಯಲ್ಲಿ ಬಹು ದಿನಗಳ ನಂತರ ಹೋಟೆಲ್‌, ರೆಸ್ಟೋರೆಂಟ್‌ ಪುನಾರಂಭಗೊಂಡವು. ಶರಭೇಶ್ವರ ಊಟದ  ಹೋಟೆಲ್‌ ಒಳಗೊಂಡಂತೆ ಎಲ್ಲಾ ಕಡೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗಿತ್ತು. ಬಂದಂತಹ ಗ್ರಾಹಕರ ಟೆಂಪರೇಚರ್‌ ಚೆಕ್‌ ಮಾಡಿ, ಹೆಸರು, ವಿಳಾಸ, ಮೊಬೈಲ್‌ ನಂಬರ್‌ ಮಾಹಿತಿ ಬರೆದುಕೊಂಡ ನಂತರವೇ ಹೋಟೆಲ್‌ ಒಳಗೆ ಬಿಡಲಾಯಿತು. ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಶರಭೇಶ್ವರ ಹೋಟೆಲ್‌ನಲ್ಲಿ ಗಾಜಿನ ವ್ಯವಸ್ಥೆ ಮಾಡಲಾಗಿದೆ. ಗ್ರಾಹಕರ ಆರೋಗ್ಯ, ಸುರಕ್ಷತೆಯೇ ಮುಖ್ಯ. ಸಾಮಾಜಿಕ ಅಂತರ ಒಳಗೊಂಡಂತೆ ಎಲ್ಲಾ ಅಗತ್ಯ ಸುರಕ್ಷಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮಾಲೀಕ ಬಸವರಾಜಯ್ಯ ಮಾಹಿತಿ ನೀಡಿದರು.

ದೇವಿ ದರ್ಶನ ನಿಂತ ನಿದರ್ಶನ ಇರಲಿಲ್ಲ
ತಮ್ಮ ಅನುಭವದಲ್ಲೇ 76 ದಿನಗಳಷ್ಟು ದೀರ್ಘ‌ಕಾಲ ದೇವಿಯ ದರ್ಶನ ನಿಂತಿದ್ದ ಉದಾಹರಣೆಯೇ ಇರಲಿಲ್ಲ. ಇದೇ ಮೊದಲ ಬಾರಿಗೆ ದೇವಿಯ ದರ್ಶನಕ್ಕೆ ಅವಕಾಶ ಇರಲಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಅನಿವಾರ್ಯ. ಮುಂದೆ ಹೊಂದಿಕೊಂಡೇ ಹೋಗಬೇಕಾಗಿದೆ. ಎಲ್ಲರಿಗೂ ಒಳ್ಳೆಯದಾಗಲಿ. ಮಹಾಮಾರಿ ಕೋವಿಡ್ ಮುಕ್ತ ವಾತಾವರಣ ನಿರ್ಮಾಣವಾಗಲಿ ಎಂದು ಪ್ರಾರ್ಥಿಸಿ, ಪೂಜೆ ನೆರವೇರಿಸಲಾಯಿತು ಎಂದು ಅರ್ಚಕರಾದ ಜೀವನ್‌, ಚನ್ನೇಶ್‌, ವಿಶ್ವನಾಥ್‌ ಶಾಸ್ತ್ರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next