ತಾಂಬರಮ್:ಸಾರ್ವಜನಿಕ ಸ್ಥಳದಲ್ಲಿ ನಿರ್ಮಾಣಗೊಂಡ ದೇಗುಲ ತೆರವಿಗೆ ಯತ್ನಿಸಿದ ಜಿಲ್ಲಾಡಳಿತದ ವಿರುದ್ಧ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ವಿವಾದ ಹಸಿರಾಗಿರುವ ಬೆನ್ನಲ್ಲೇ ತಮಿಳುನಾಡಿನಲ್ಲೂ ಇದೇ ಬಗೆಯ ಘಟನೆ ನಡೆದಿರುವುದು ಹಿಂದು ಕಾರ್ಯಕರ್ತರಲ್ಲಿ ಆಕ್ರೋಶ ಸೃಷ್ಟಿಸಿದೆ.
ಮದ್ರಾಸ್ ಹೈಕೋರ್ಟ್ ನೀಡಿದ ಆದೇಶದ ಅನ್ವಯ ತಮಿಳುನಾಡಿನ ತಾಂಬರಮ್‌ನಲ್ಲಿ ರಾಮ ಮಂದಿರವೊಂದನ್ನು ನೆಲಸಮಗೊಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸೂಕ್ಷ್ಮ ಪರಿಸ್ಥಿತಿಯನ್ನು ನಿರ್ಮಿಸಿದೆ.
ಈ ವಿಡಿಯೋ ಶೇರ್ ಮಾಡಿರುವ ಇಂಡು ಮಕ್ಕಳ ಕಚ್ಚಿ ಎಂಬ ಹಿಂದುಪರ ಸಂಘಟನೆ ಆಡಳಿತಾರೂಢ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದೆ. ಹಿಂದು ಭಾವನೆಗಳನ್ನು ಸರಕಾರ ಕೆಣಕುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಸ್ಥಳೀಯ ಜಿಲ್ಲಾಡಳಿತ, ದೇಗುಲ ಮಾತ್ರವಲ್ಲ, ಅದಕ್ಕೆ ಹೊಂದಿಕೊAಡ ಗೋಡೆಗಳನ್ನು ನೆಲಸಮ ಮಾಡಲಾಗಿದೆ. ಆಲಮೂಲದ ಮೇಲೆ ನಿಯಮ ಉಲ್ಲಂಘಿಸಿ ಈ ದೇಗುಲ ನಿರ್ಮಾಣ ಮಾಡಲಾಗಿತ್ತು. ಮದ್ರಾಸ್ ಹೈಕೋರ್ಟ್ ಆದೇಶದ ಅನ್ವಯ ಈ ಕ್ರಮ ತೆಗೆದುಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದೆ.
ಘಟನೆ ಹಿನ್ನೆಲೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿರುವ ತಾಂಬರಮ್ ಪೊಲೀಸ್ ಆಯುಕ್ತ ಎನ್.ರವಿ, ಸರಕಾರ ಯಾವುದೇ ಧರ್ಮವನ್ನು ಗುರಿಯಾಗಿಸಿಕೊಂಡು ಕ್ರಮ ತೆಗೆದುಕೊಂಡಿಲ್ಲ. ದೇಗುಲದ ಜತೆಗೆ ಚರ್ಚ್ ಅನ್ನು ನೆಲಸಮಗೊಳಿಸಿದ್ದೇವೆ. ಜಲಮೂಲಗಳ ಮೇಲೆ ಕಾನೂನು ಉಲ್ಲಂಘಿಸಿ ಇವುಗಳನ್ನು ನಿರ್ಮಾಣ ಮಾಡಲಾಗಿತ್ತು. ನ್ಯಾಯಾಲಯದ ಆದೇಶದ ಅನ್ವಯ ಕ್ರಮ ತೆಗೆದುಕೊಂಡಿದ್ದೇವೆ. ಈ ವಿಚಾರ ಸಂಬಂಧ ಯಾವುದೇ ಸಂಘಟನೆ ಕೋಮು ಭಾವನೆ ಕೆಣಕುವ ಪ್ರಯತ್ನ ನಡೆಸಿದರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.