Advertisement
ಭಾರತದ ಹಲವಾರು ಪ್ರಾಕ್ತನ ದೇವಾಲಯಗಳು ಮೊದಲ ಭೇಟಿಯಲ್ಲಿ ಅರ್ಥವಾಗುವಂಥವಲ್ಲ. ಮೊದಲ ಭೇಟಿಯಲ್ಲಿ ಕಲೆಯ ಕಾರಣಕ್ಕೆ ಅವು ಅನನ್ಯವೆನ್ನಿಸಬಹುದು, ಅವುಗಳ ವಾಸ್ತುಶಿಲ್ಪ ಮತ್ತು ಶಿಲ್ಪಕೌಶಲ ನಮ್ಮನ್ನು ಸೆಳೆಯ ಬಹುದು, ಆ ದೇವಾಲಯದ ಪರಿಸರದಲ್ಲಿನ ಕಂಪನ ತರಂಗಗಳು ನಮ್ಮನ್ನು ಸೋಕಿ ಮನಸ್ಸಿಗೆ ಅವ್ಯಕ್ತವಾದ ಮುದ ವನ್ನೀಯಬಹುದು- ಆದರೆ ದೇವಾಲಯಗಳ ಮಹತ್ತು ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಅಲ್ಲಿ ಜ್ಯಾಮಿತಿಯಿದೆ, ಗಣಿತೀಯ ಪ್ರಕ್ರಿಯೆಗಳ ಆಧಾರದಲ್ಲಿ ಕಟ್ಟಿದ ಕಟ್ಟೋಣಕ್ಕೆ ಭೂಮಿಯ ಚಲನೆಯೊಡನೆ ಸಾಧ್ಯವಾಗುವ ಸ್ಪಂದನವಿದೆ, ಪ್ರಕೃತಿಯೊಂದಿಗೆ ಸಾಧ್ಯವಾಗುವ ಸಂವಾದವಿದೆ.
Related Articles
Advertisement
ದೇವಾಲಯದ ವಾಸ್ತುವಿನೊಂದಿಗೆ ಕಾಲವನ್ನು ತಳುಕು ಹಾಕಿದ ಭಾರತೀಯರ ಕೌಶಲಕ್ಕೆ ಎಣೆಯೇ ಇಲ್ಲ. ಭಾರ ತೀಯ ದೇವಾಲಯ ವಾಸ್ತುಶಿಲ್ಪವು ತನ್ನ ಕಾಲದ ಸಮಾಜದ ಕಲಾಪ್ರಜ್ಞೆ ಮತ್ತು ಬೌದ್ಧಿಕ ಉನ್ನತಿಯನ್ನು ಒಳಗೊಳ್ಳುತ್ತ ಬಹುವಿಸ್ತಾರವಾಗಿ ಬೆಳೆದುಬಂತು. ನಾಗರ, ದ್ರಾವಿಡ ಮತ್ತು ವೇಸರ ಶೈಲಿಗಳೆಂಬ ಮುಖ್ಯವಿಭಾಗದ ಜತೆಯಲ್ಲೇ ಆಯಾ ಕಾಲದ ರಾಜಸತ್ತೆಯ ಹೆಸರಿನಿಂದಲೂ ದೇವಾ ಲಯ ನಿರ್ಮಾಣ ಶೈಲಿಯನ್ನು ಗುರುತಿಸಲಾಗುತ್ತದೆ. ನಾಗ ರವು ಉತ್ತರದ ಶೈಲಿಯಾದರೆ ದ್ರಾವಿಡ ಶೈಲಿಯು ದಕ್ಷಿಣದ್ದು. ವೇಸರಶೈಲಿಯು ಇವೆರಡರ ಕೆಲವು ಅಂಶಗಳನ್ನು ಒಳ ಗೊಂಡಿರುವಂಥದು. ಇತಿಹಾಸದ ದೃಷ್ಟಿಗೆ ಅಸ್ಪಷ್ಟ ವಾದ ಕಾಲದಿಂದಲೂ ನಿರ್ಮಾಣಕುಶಲಿಗಳ ಪರಂಪರೆಯನ್ನು ಭಾರತಲ್ಲಿ ಕಾಣಬಹುದು. ವಿಶ್ವಕರ್ಮ (ದೇವತೆಗಳ ಸ್ಥಪತಿ, ದೇವಲೋಕವನ್ನು ನಿರ್ಮಿಸಿದಾತ), ಮಾಯಾಸುರ (ಮಯಮತದ ಕತೃì, ಮಹಾಭಾರತದಲ್ಲಿ ಪಾಂಡವರಿ ಗಾಗಿ ಸಭಾಮಂಟಪವನ್ನು ನಿರ್ಮಿಸಿಕೊಟ್ಟವನೀತ), ನಲ (ರಾಮಸೇತುವಿನ ನಿರ್ಮಾಣದ ಹಿಂದಿರುವ ಅಭಿ ಯಂತೃ) ಇತ್ಯಾದಿ ಪ್ರಾಗೈತಿಹಾಸಿಕ ಕಾಲದ ಸ್ಥಪತಿಗಳಿಂದ ಆರಂಭಿಸಿ ಇತಿಹಾಸವು ನೆನಪಿಟ್ಟುಕೊಂಡಿರುವ ಅಮರಶಿಲ್ಪಿ ಜಕಣಾಚಾರಿ ಮತ್ತು ಇವತ್ತಿಗೂ ನಮ್ಮ ನಡುವೆ ಇರುವ ಪಾರಂಪರಿಕ ಶಿಲ್ಪಿಗಳವರೆಗೆ ಭಾರತದ ಶಿಲ್ಪಿಪರಂಪರೆಯು ಬಹುವಿಸ್ತಾರವಾದ್ದು. ವಾಸ್ತುಶಿಲ್ಪ ಕ್ಷೇತ್ರದಲ್ಲಿ ರಚನೆ ಯಾಗಿರುವ ಗ್ರಂಥಗಳೂ ಅಸಂಖ್ಯ.
ಬೆಂಗಳೂರಿನ ಗವಿಗಂಗಾಧರೇಶ್ವರಗೆ ಸಂಕ್ರಾಂತಿ ದಿನ ಸೂರ್ಯ ಮಜ್ಜನ :
ಹಬ್ಬವೆಂಬುದು ನಂಬುಗೆ, ಶ್ರದ್ಧೆ ಮತ್ತು ಭಾವನೆಗಳ ಆಚರಣೆಯ ಕಾಲ ಮಾತ್ರವೇ ಅಲ್ಲದೆ ಮಾನವನ ಗಣಿತೀಯ ಕೌಶಲ, ವಾಸ್ತುಶಾಸ್ತ್ರ ಪರಿಣತಿಯ ಪ್ರದರ್ಶನ ಕಾಲವೂ ಹೌದೆಂಬುದಕ್ಕೆ ಬೆಂಗಳೂರಿನ ಗವಿಗಂಗಾಧ ರೇಶ್ವರ ದೇವಸ್ಥಾನ ಸಾಕ್ಷಿ. ಇಲ್ಲಿ ಮಕರ ಸಂಕ್ರಾಂತಿಯಂದು ಸೂರ್ಯಕಿರಣಗಳು ಮಂಟಪ ಭಾಗದಲ್ಲಿರುವ ನಂದಿಯ ಕೊಂಬುಗಳ ಮೂಲಕ ಹಾಯ್ದು ಗರ್ಭಗೃಹ ಪ್ರವೇಶಿಸಿ ಗಂಗಾಧರೇಶ್ವರನನ್ನು ಸೋಕುತ್ತವೆ. ಇದು ವಿಜಯನಗರದರಸರ ಕಾಲದ ನಿರ್ಮಾಣ.
ಪೂರ್ವಜರ ವಾಸ್ತು ವಿಜ್ಞಾನಕ್ಕೆ ಒಂದು ಶರಣು :
ಶೃಂಗೇರಿಯಲ್ಲೂ ಸೋಜಿಗ :
ಶೃಂಗೇರಿಯ ವಿದ್ಯಾಶಂಕರ ದೇಗುಲವಾದರೂ ಸೂರ್ಯಪರಿಚಲನೆಯನ್ನು ಕರಾರುವಾಕ್ಕಾಗಿ ಗಣಿಸಿ ಗುಣಿಸಿ ಕಟ್ಟಲ್ಪಟ್ಟ ಇನ್ನೊಂದು ದೇವಾಲಯ. ವಿದ್ಯಾಶಂಕರ ದೇಗುಲ ಮಂಟಪದಲ್ಲಿ 12 ಶಿಲಾಮಯ ಕಂಬಗಳಿವೆ ಮತ್ತು ಸುತ್ತಲೂ ವಿವಿಧ ದಿಕ್ಕುಗಳಿಗೆ ಬಾಗಿಲುಗಳಿವೆ. ಈ ಕಂಬಗಳು 12 ರಾಶಿಯ ಚಿಹ್ನೆಯಿಂದ ಚಿಹ್ನಿತವಾಗಿದ್ದು ಸೂರ್ಯನು ರಾಶಿಚಕ್ರದಲ್ಲಿ ಚಲಿಸಿದಂತೆಲ್ಲ ಸೂರ್ಯನ ಬೆಳಕು ಬಾಗಿಲಿನ ಮೂಲಕ ಹಾದು ಆಯಾ ರಾಶಿಗೆ ಸಂಬಂಧಿಸಿದ ಸ್ತಂಭದ ಮೇಲೆ ಬೀಳುತ್ತದೆ. ಇದು 14ನೇ ಶತಮಾನದ ದೇಗುಲ.
ಕೋನಾರ್ಕದಲ್ಲೂ ಕಿರಣಲೀಲೆ :
ಒಡಿಶಾದ ಕೋನಾರ್ಕ ದೇಗುಲವು ಸೂರ್ಯ ಮಜ್ಜನಕ್ಕೆ ಅತ್ಯುತ್ತಮ ಉದಾಹರಣೆ. ಕೋನ ಮತ್ತು ಅರ್ಕ (ಸೂರ್ಯ) ಎಂಬ ಪದಗಳು ಮಿಳಿತವಾಗಿ ಕೋನಾರ್ಕವಾಗಿದೆ. ಸೂರ್ಯ ಉದಯಿಸಿದ ಬಳಿಕ ಒಂದು ನಿರ್ದಿಷ್ಟ ಸಮಯದಲ್ಲಿ ವಿಗ್ರಹಕ್ಕೆ ಕಿರಣಾಭಿಷೇಕ ಆಗುತ್ತದೆ. ಸೂರ್ಯ ದೇವಾಲಯದ ಚಕ್ರಗಳು ಸೂರ್ಯನ ಬೆಳಕನ್ನು ಆಧರಿಸಿ ಸಮಯದ ಮಾಪನಕ್ಕೆ ಅನುವಾಗಬಲ್ಲ ರಚನೆಗಳಾಗಿವೆ.
ಪ್ರಾಚೀನರ ವಾಸ್ತು ವಿಸ್ಮಯ :
ಆಂಧ್ರ ಪ್ರದೇಶದ ಶ್ರೀಕಾಕುಳಮ್ ಜಿಲ್ಲೆಯ ಅರಸವಿಲ್ಲಿಯಲ್ಲಿರುವ ಸೂರ್ಯನಾರಾಯಣ ಸ್ವಾಮಿಯ ದೇಗುಲದಲ್ಲಿಯೂ ಸಂಕ್ರಾಂತಿಯಂದು ಸೂರ್ಯಕಿರಣಗಳು ಸ್ವಾಮಿಯನ್ನು ಸ್ಪರ್ಶಿಸುತ್ತವೆ. ಇದು 7ನೇ ಶತಮಾನದ ರಚನೆ. ತಮಿಳುನಾಡಿನ ಪಳೈಯೂರಿನಲ್ಲಿರುವ ಕಾಶಿವಿಶ್ವನಾಥನಿಗೂ ಸಂಕ್ರಾಂತಿಯಂದು ಸೂರ್ಯ ಮಜ್ಜನವಾಗುತ್ತದೆ.
ಸೂರ್ಯನ ಚಲನೆಗೂ ಚೆಂದದ ಗಣಿತವಿದೆ! :
ಖಗೋಳ ಶಾಸ್ತ್ರದ ಪ್ರಕಾರ ಇಪ್ಪತ್ತೇಳು ನಕ್ಷತ್ರಗಳು (ಪುಂಜಗಳು) ಸೂರ್ಯ ಮತ್ತು ಗ್ರಹಗಳ ಚಲನೆಯನ್ನು ಅರಿಯುವುದಕ್ಕೆ ಸ್ಥಿರವಾದ ಹಿನ್ನೆಲೆಯಾಗಿ ನಿಲ್ಲುತ್ತವೆ. ಈ ಇಪ್ಪತ್ತೇಳು ನಕ್ಷತ್ರಗಳನ್ನು ಹನ್ನೆರಡು ರಾಶಿಗಳಲ್ಲಿ ಸಮನಾಗಿ ಹಂಚಲಾಗಿದೆ. ಸೂರ್ಯನು ಒಂದೊಂದು ರಾಶಿಯಲ್ಲಿ ಒಂದು ತಿಂಗಳಿನಷ್ಟು ಕಾಲ ಸಂಚರಿಸುತ್ತ ಹನ್ನೆರಡು ರಾಶಿಗಳ ಒಂದು ಆವರ್ತವನ್ನು ಮುಗಿಸುವಾಗ ಒಂದು ವರ್ಷ ಮುಗಿದಿರುತ್ತದೆ. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಕ್ರಮಿಸುವ ಖಗೋಲ ವಿದ್ಯಮಾನವೇ ಸಂಕ್ರಾಂತಿ ಎನ್ನಿಸಿಕೊಳ್ಳುತ್ತದೆ. ಅಂದರೆ ಸಂಕ್ರಾಂತಿಯು ಪ್ರತೀ ತಿಂಗಳಿಗೂಮ್ಮೆ ಸಂಭವಿಸುತ್ತದೆ. ಆದರೆ ಮಕರಸಂಕ್ರಾಂತಿಯು ಉಳಿದೆಲ್ಲ ಸಂಕ್ರಾಂತಿಗಳಿಗಿಂತ ವಿಶೇಷವೆನ್ನಿಸಿಕೊಳ್ಳುವುದು ಅಂದಿನಿಂದ ಸೂರ್ಯನ ಉತ್ತರಮುಖೀಯಾದ ಚಲನೆಯು ಆರಂಭವಾಗುತ್ತದೆ ಎನ್ನುವ ಕಾರಣಕ್ಕಾಗಿ. (ನಿಜವೆಂದರೆ ನಾವಿರುವ ಕಾಲದಲ್ಲಿ ಸೂರ್ಯನ ಉತ್ತರಮುಖೀ ಚಲನೆ ಡಿಸೆಂಬರ್ 21ನೆಯ ದಿನಾಂಕದಂದೇ ಆರಂಭವಾಗುತ್ತದೆ. ಹಾಗಿದ್ದೂ ಸಂಕ್ರಾಂತಿಯನ್ನು ಪಾರಂಪರಿಕವಾಗಿ ಉತ್ತರಾಯಣದ ಆರಂಭವೆಂದು ಆಚರಿಸಲಾಗುತ್ತದೆ). ಇದುವರೆಗೆ ಓರೆಯಾಗಿ ಬೀಳುತ್ತಿದ್ದ ಸೂರ್ಯನ ಕಿರಣಗಳು ಇದೀಗ ನಿಧಾನವಾಗಿ ನೇರವಾಗುತ್ತ ಸಾಗಿ ತಾಪಮಾನವನ್ನು ಹೆಚ್ಚಿಸಿ ಬೇಸಗೆಯ ಆರಂಭಕ್ಕೆ ಮುನ್ನುಡಿ ಬರೆಯುತ್ತವೆ. ಚಳಿಗಾಲ ದೂರಸರಿಯುತ್ತದೆ. ಈ ಚಲನೆಯನ್ನು ಲೆಕ್ಕಾಚಾರ ಮಾಡಿ ಮಕರ ಸಂಕ್ರಮಣದಂದು ಸೂರ್ಯನ ಬೆಳಕು ಗರ್ಭಗುಡಿಯೊಳಗೆ ಬರುವಂತೆ ವಾಸ್ತುವಿನ್ಯಾಸ ಮಾಡಲಾಗುತ್ತದೆ.
– ನವೀನ ಗಂಗೋತ್ರಿ