ನವದೆಹಲಿ: ಇಡೀ ಜಗತ್ತು 2015ರಿಂದ 2022ರವರೆಗೆ ಸತತವಾಗಿ ತಾಪಮಾನ ಏರಿಕೆಗೆ ಸಾಕ್ಷಿಯಾಗಿತ್ತು. ವಿಶ್ವ ಹವಾಮಾನ ಸಂಸ್ಥೆಯ(ಡಬ್ಲ್ಯೂಎಂಒ) ಅಂದಾಜಿನ ಪ್ರಕಾರ 2026ರ ಒಳಗೆ ದಾಖಲೆಯ ಬಿಸಿ ತಾಪಮಾನ ವರ್ಷವನ್ನು ನಾವು ಕಾಣಲಿದ್ದೇವೆ.
ಮುಂದಿನ ಮೂರು ವರ್ಷಗಳಲ್ಲಿ ಜಗತ್ತು “ಅತ್ಯಂತ ಬಿಸಿ ವರ್ಷ’ವನ್ನು ಎದುರಿಸುವ ಸಾಧ್ಯತೆಗಳು ಶೇ.93ರಷ್ಟು ಇದೆ ಎಂದು ಡಬ್ಲ್ಯೂಎಂಒ ಅಂದಾಜಿದೆ. ಈ ಹಿಂದೆ 2016ರಲ್ಲಿ ಅತ್ಯಂತ ಹೆಚ್ಚು ತಾಪಮಾನವನ್ನು ಜಗತ್ತು ಅನುಭವಿಸಿತ್ತು.
ಕಳೆದ ಎಂಟು ವರ್ಷಗಳಲ್ಲಿ ತಾಪಮಾನ ಕನಿಷ್ಠ 1 ಡಿಗ್ರಿ ಸೆಲ್ಸಿಯಸ್ ನಷ್ಟು ಏರಿಕೆಯಾಗುತ್ತಾ ಬಂದಿದೆ. 2026ರ ವೇಳೆಗೆ ತಾಪಮಾನ ಕನಿಷ್ಠ 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಡಬ್ಲ್ಯೂಎಂಒ ವತಿಯಿಂದ 2020ರ ಸೆಪ್ಟೆಂಬರ್‌ನಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ “ಲಾ ನಿನಾ’ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. “ಲಾ ನಿನಾ’ ಅಂದರೆ ಸರಾಸರಿಗಿಂತ ತಂಪಾಗಿರುವ ಸಮುದ್ರ ಮೇಲ್ಮೆ„ ಆಗಿದೆ. “ಲಾ ನಿನಾ’ ಎಂದರೆ ಸ್ಪ್ಯಾನಿಶ್‌ನಲ್ಲಿ “ಚಿಕ್ಕ ಹುಡುಗಿ’ ಎಂಬ ಅರ್ಥವಿದೆ. ಇದೇ ರೀತಿ ಜಗತ್ತು 2023ರ ನಂತರ “ಎಲ್ ನಿನೊ’-ತಾಪಮಾನ ಹೆಚ್ಚಳವನ್ನು ಅನುಭವಿಸಲಿದೆ. “ಎಲ್ ನಿನೊ’ ಎಂದರೆ ಸ್ಪ್ಯಾನಿಶ್‌ನಲ್ಲಿ “ಚಿಕ್ಕ ಹುಡುಗ’ ಎಂಬ ಅರ್ಥವಿದೆ.
ಈಗಾಗಲೇ ಭಾರತದಲ್ಲಿ ಬೇಸಿಗೆ ಆರಂಭವಾಗಿರುವುದರಿಂದ ಬಿಸಿ ಗಾಳಿ ಅನುಭವವನ್ನು ನಾಗರಿಕರು ಅನುಭವಿಸುತ್ತಿದ್ದಾರೆ. ದೇಶದಲ್ಲಿ ಮುಂದಿನ ಮೂರು ತಿಂಗಳಲ್ಲಿ ತಾಪಮಾನ ತೀವ್ರಗತಿಯಲ್ಲಿ ಏರಿಕೆಯಾಗಲಿದೆ ಎಂದು ಡಬ್ಲ್ಯೂ ಎಂಒ ಅಂದಾಜಿಸಿದೆ.