ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಾಣುತ್ತಿದ್ದು, ಇದು ಮುಂಗಾರು ಮಳೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಮುಂಗಾರು ಅವಧಿಯಲ್ಲಿ ವಾಡಿಕೆಯಂತೆ ಹೆಚ್ಚಾಗಿ ಮೋಡಗಳು ಸೃಷ್ಟಿಯಾಗಿ ಉತ್ತಮ ಮಳೆ ಸುರಿಯುತ್ತದೆ. ಆದರೆ ಸದ್ಯ ಮೋಡಗಳು ಸೃಷ್ಟಿಯಾಗುತ್ತಿಲ್ಲ. ಮೋಡಗಳೆಲ್ಲಾ ಉತ್ತರ ಭಾರತದತ್ತ ಚಲಿಸುತ್ತಿದ್ದು, ಇದರ ಪರಿಣಾಮ ರಾಜ್ಯ ಕರಾವಳಿ ಭಾಗಕ್ಕೂ ತಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗರಿಷ್ಠ ಉಷ್ಣಾಂಶವು ವಾಡಿಕೆಗಿಂತ ಸುಮಾರು 2 ಡಿ.ಸೆ. ಹೆಚ್ಚುತ್ತಿದೆ.
ರಾಜ್ಯ ಕರಾವಳಿಯಲ್ಲಿ ಸಾಮಾನ್ಯವಾಗಿ ಸೆಪ್ಟಂಬರ್ ವೇಳೆಗೆ ಉತ್ತಮ ಮಳೆ ಸುರಿದು ವಾತಾವರಣ ತಂಪಿರುತ್ತದೆ. ಆದರೆ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಬಿರುಸಿನ ಮಳೆಯಾಗಿಲ್ಲ. ಇದರಿಂದ ಮಧ್ಯಾಹ್ನ ವೇಳೆ ಸೆಕೆ ಹೆಚ್ಚಾಗಿದೆ. ಇನ್ನೂ ಕೆಲವು ದಿನ ಇದೇ ವಾತಾವರಣ ಇರುವ ಸಾಧ್ಯತೆ ಇದೆ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು. ಉಷ್ಣಾಂಶ ಏರಿಕೆಯಾಗುತ್ತಿದ್ದರೆ ಅದರ ಪರಿಣಾಮ ಮುಂಗಾರು ಮಳೆಯ ಮೇಲೆ ಬೀರಲಿದ್ದು, ಕರಾವಳಿಯಲ್ಲಿ ಈಗಾಗಲೇ ದುರ್ಬಲಗೊಂಡಿರುವ ಮಳೆ ಮತ್ತಷ್ಟು ಕ್ಷೀಣಿಸುವ ಸಾಧ್ಯತೆ ಇದೆ.
ಕರಾವಳಿ, ಮಲೆನಾಡಿನಲ್ಲಿ ಮಳೆ ಕೊರತೆ:
ಸಾಮಾನ್ಯವಾಗಿ ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂಗಾರು ಉತ್ತಮವಾಗಿರುತ್ತದೆ. ಆದರೆ ಈ ಬಾರಿ ಹವಾಮಾನ ವೈಪರೀತ್ಯದ ಪರಿಣಾಮ ಎರಡೂ ವಿಭಾಗಗಳಲ್ಲಿ ಮಳೆ ಕೊರತೆ ಇದೆ. ಕರಾವಳಿಯ ದ.ಕ. ಜಿಲ್ಲೆಯಲ್ಲಿ ಶೇ. 26, ಉಡುಪಿಯಲ್ಲಿ ಶೇ. 15 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 5ರಷ್ಟು ಕೊರತೆ ಇದೆ. ಮಲೆನಾಡು ವಿಭಾಗದ ಶಿವಮೊಗ್ಗದಲ್ಲಿ ಶೇ. 13, ಹಾಸನದಲ್ಲಿ ಶೇ. 10, ಚಿಕ್ಕಮಗಳೂರಿನಲ್ಲಿ ಶೇ. 15, ಕೊಡಗು ಜಿಲೆಯಲ್ಲಿ ಶೇ. 21ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕರಾವಳಿಯಲ್ಲಿ ಶೇ. 13 ಮತ್ತು ಮಲೆನಾಡಿನಲ್ಲಿ ಶೇ. 15ರಷ್ಟು ಮಳೆ ಕೊರತೆ ಇದೆ.
ಕರಾವಳಿ ಸೇರಿದಂತೆ ರಾಜ್ಯದಲ್ಲಿ ಸದ್ಯ ಮಳೆ ಸೃಷ್ಟಿಸುವ ಮೋಡಗಳ ಚಲನೆ ಇಲ್ಲ. ಇದರಿಂದಾಗಿ ದಿನದಿಂದ ದಿನಕ್ಕೆ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಾಣುತ್ತಿದೆ. ಸದ್ಯದ ಹವಾಮಾನ ಮುನ್ಸೂಚನೆಯಂತೆ ಕೆಲವು ದಿನಗಳವರೆಗೆ ಉಷ್ಣಾಂಶ ಹೆಚ್ಚಾಗಿ ಸೆಕೆ ಹೀಗೇ ಇರುವ ಸಾಧ್ಯತೆ ಇದೆ. ಇದರಿಂದಾಗಿ ಮಳೆ ಮತ್ತಷ್ಟು ಕ್ಷೀಣಿಸಬಹುದು..
– ಸುನಿಲ್ ಗವಾಸ್ಕರ್, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ