Advertisement

ರಣ ಬಿಸಿಲಿಗೆ ಬಸವಳಿದ ಮಂಡ್ಯ ಜನ

07:15 PM Apr 03, 2021 | Team Udayavani |

ಮಂಡ್ಯ: ಬೇಸಿಗೆ ಬಂತೆಂದರೆ ಜನ ಬಿಸಿಲಿಗೆ ಹೆದರುವಂತಾಗಿದೆ. ಕಳೆದ ಒಂದು ವಾರದಿಂದ ರಣ ಬಿಸಿಲಿಗೆ ಜನ ಬಸವಳಿದಿದ್ದಾರೆ. ಮುಂದಿನ ಎರಡು ತಿಂಗಳು ಸುಮಾರು 40 ಡಿಗ್ರಿ ಸೆಲ್ಸಿಯಸ್‌ ದಾಖಲಾಗಲಿದೆ ಎಂದು ಅಂದಾಜಿಸಲಾಗಿದೆ.

Advertisement

ಕಳೆದ ಒಂದುವಾರದಿಂದ ಜಿಲ್ಲೆಯ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಮನೆಯಲ್ಲಿದ್ದರೆ ಬಿರು ಬೇಸಿಗೆಯ ಸೆಕೆಗೆ ಜನ ತತ್ತರಿಸಿದರೆ, ಹೊರ ಗಡೆ ಬಂದರೆ ಬಿಸಿಲಿನ ತಾಪದಿಂದ ಸುಸ್ತಾಗಿದ್ದಾರೆ.

40 ರಿಂದ 42 ಡಿಗ್ರಿವರೆಗೆ ಏರಿಕೆ ಸಾಧ್ಯತೆ: ಸಾಮಾನ್ಯವಾಗಿ 20ರಿಂದ 25ರಷ್ಟು ಉಷ್ಣಾಂಶ ದಾಖಲಾದರೂ ಹೆಚ್ಚು ಎನ್ನುವ ಪರಿಸ್ಥಿತಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ 36ರಿಂದ 37 ಡಿಗ್ರಿ ಸೆಲ್ಸಿಯಸ್‌ ದಾಖಲಾಗುತ್ತಿದೆ. ಏ.2ರ ಶುಕ್ರವಾರ ಏಕಾಏಕಿ 39 ಡಿಗ್ರಿಗೆ ಏರಿಕೆ ಕಂಡಿದೆ. ಇದರಿಂದ ಜನರು ಮನೆಯಿಂದ ಹೊರಗೆ ಬರಲು ಎದುರುವಂತಾಗಿದೆ. ಮುಂದಿನ ದಿನ ಗಳಲ್ಲಿ 40 ರಿಂದ 42 ಡಿಗ್ರಿವರೆಗೆ ಏರಿಕೆ ಯಾಗುವ ಸಾಧ್ಯತೆ ಇದೆ. ಕಳೆದ ಗುರುವಾರ  ದಿಂದ 37 ಡಿಗ್ರಿ ಸೆಲ್ಸಿಯಸ್‌ ಇತ್ತು. ಮುಂದಿನ ಏಪ್ರಿಲ್‌ 15ರವರೆಗೂ 39 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಈ ಹಿಂದೆ 2018ರಲ್ಲಿ ಸುಮಾರು 42 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು.

ಮನೆಯಿಂದ ಹೊರಗೆ ಬಾರದ ಜನ: ಬೆಳಗ್ಗೆ 11 ಗಂಟೆ ವರೆಗೂ ನಗರದಲ್ಲಿ ಬಿಸಿಲಿತ ತಾಪ ಕಡಿಮೆ ಇರುತ್ತದೆ. ನಂತರ ಬಿಸಿಲಿನ ತಾಪ ಏರುತ್ತಿದ್ದಂತೆ ಜನರು ಮನೆಯಿಂದ ಹೊರಗೆ ಬರುತ್ತಿಲ್ಲ. ಮನೆಯಲ್ಲಿಯೇ ಎಸಿ, ಫ್ಯಾನ್‌ ಮೊರೆ ಹೋಗುವ ಜನತೆ, ಅಗತ್ಯ ವಸ್ತುಗಳಿಗಾಗಿ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಹೊರಗೆ ಹೋಗುತ್ತಿದ್ದಾರೆ. ಮಧ್ಯಾಹ್ನದ ಸಮಯದಲ್ಲಿ ನಗರದ ವಾಣಿಜ್ಯ ಪ್ರಮುಖ ರಸ್ತೆಗಳು ಖಾಲಿಯಾಗಿ, ಬಿಕೋ ಎನ್ನುವ ವಾತಾವರಣ ನಿರ್ಮಾಣವಾಗಿದೆ.

ಬಿಸಿಲಿಗೆ ಮೈ, ಕೈ ಕಡಿತ: ಪ್ರಸ್ತುತ ಬಿಸಿಲಿನಲ್ಲಿ ಓಡಾಡಿದರೆ ಮೈ ಹಾಗೂ ಕೈ ಕಡಿತ ಹೆಚ್ಚಾಗುತ್ತಿದೆ. ಬಿಸಿಲಿನ ತಾಪಕ್ಕೆ ಬೆವರು ಹೆಚ್ಚಾಗುವುದರಿಂದ ಸಂಜೆ ವೇಳೆ ಆಗುತ್ತಿದ್ದಂತೆ ಮೈ ಹಾಗೂ ಕೈಗಳು ನವೆಯಿಂದ ಕಡಿತ ಶುರುವಾಗಲಿದೆ. ಇದರಿಂದ ಚರ್ಮ ರೋಗಗಳು ಕಂಡು ಬರುತ್ತಿವೆ. ಆದ್ದರಿಂದ ಚರ್ಮದ ತ್ವಚೆ ಹಾಗೂ ಆರೋಗ್ಯ ಕಾಪಾಡಲು ಮೈತುಂಬಾ ಕಾಟನ್‌ ಬಟ್ಟೆ ಹಾಗೂ ಚರ್ಮದ ತ್ವಚ ಕಾಪಾಡುವ ಕ್ರೀಮ್‌ಗಳಿಗೆ ಜನರು ಮೊರೆ ಹೋಗಿದ್ದಾರೆ.

Advertisement

ಚಳಿಗಾಲದಲ್ಲೂ ಸೆಕೆಯ ಅನುಭವ: ಜಿಲ್ಲೆಯಲ್ಲಿ 2020- 21ನೇ ಸಾಲಿನಲ್ಲಿ ಉತ್ತಮ ಮಳೆಯಾಗಿತ್ತು. ಜಿಲ್ಲೆಯ ಜೀವ ನಾಡಿಯಾಗಿದ್ದ ಕೆಆರ್‌ಎಸ್‌ ಜಲಾಶಯ ಸಂಪೂರ್ಣ ಭರ್ತಿ ಯಾಗಿತ್ತು. ಇದರಿಂದ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿ ದ್ದವು. ಡಿಸೆಂಬರ್‌ ಹಾಗೂ ಜನವರಿ ಮಾಹೆಯಲ್ಲಿ ಸ್ವಲ್ಪ ಮಟ್ಟಿಗೆ ಚಳಿಯ ವಾತಾವರಣ ಬಿಟ್ಟರೆ, ನಂತರ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ಬಿರು ಬೇಸಿಗೆಯೇ ಹೆಚ್ಚಾಗಿದೆ. ಚಳಿಯಲ್ಲಿಯೂ ಸೆಕೆಯ ಆರ್ಭಟ ಹೆಚ್ಚಾಗಿತ್ತು. ಇದು ಮುಂದಿನ ಬೇಸಿಗೆಯ ಮುನ್ಸೂಚನೆಯಾಗಿತ್ತು ಎಂದು ತಜ್ಞರು ಹೇಳುತ್ತಾರೆ.

ಕಲ್ಲಂಗಡಿ, ಜ್ಯೂಸ್‌, ಎಳನೀರಿಗೆ ಬೇಡಿಕೆ

ಬೇಸಿಗೆಯ ದಾಹ ನೀಗಿಸಿಕೊಳ್ಳಲು ಸಾರ್ವಜನಿಕರು ಹೆಚ್ಚಾಗಿ ಜ್ಯೂಸ್‌, ಎಳನೀರಿಗೆ ಮೊರೆ ಹೋಗುತ್ತಿದ್ದಾರೆ. ಮಧ್ಯಾಹ್ನವಾಗುತ್ತಲೇ ಬಿಸಿಲಿಗೆ ಬಳಲುವ ಜನತೆ ಕಲ್ಲಂಗಡಿ, ಜ್ಯೂಸ್‌, ಎಳನೀರು ಹಾಗೂ ನೀರಿನ ಬಾಟಲ್‌ ಮೊರೆ ಹೋಗುವ ಮೂಲಕ ದಾಹ ನೀಗಿಸಿಕೊಳ್ಳುತ್ತಿದ್ದಾರೆ. ಆದರೂ ಕೊರೊನಾ ಸಂದರ್ಭದಲ್ಲಿ ಜನರು ಮನೆಯಲ್ಲಿಯೇ ತಯಾರಿಸುವ ಜ್ಯೂಸ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇದರಿಂದ ಜ್ಯೂಸ್‌ ಅಂಗಡಿಗಳಿಗೆ ಹಾಗೂ ಎಳನೀರು ವರ್ತಕರಿಗೆ ಕೊಂಚ ಹಿನ್ನೆಡೆಯಾಗಿದೆ. ಮನೆಯಲ್ಲಿರುವ ಮಂದಿಗೆ ನಿಂಬೆಹಣ್ಣಿನ ಜ್ಯೂಸ್‌ ಸಹಕಾರಿಯಾಗಿದೆ. ಮಳೆ ಬಂದರೂ ಕಡಿಮೆಯಾಗದ ತಾಪಮಾನ ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯಲ್ಲಿ ದಾಖಲೆಯ ಮಳೆಯಾಗಿದೆ. ಜಿಲ್ಲೆಯ ಬಹುತೇಕ ಕೆರೆಕಟ್ಟೆಗಳು ತುಂಬಿದ್ದವು. ಆದರೂ ಬಿಸಿಲಿನ ತಾಪಮಾನ ಕಡಿಮೆಯಾಗಿಲ್ಲ. ಪ್ರಸ್ತುತ ಬೇಸಿಗೆಯ ಬಿಸಿಲಿನ ಝಳಕ್ಕೆ ಕೆರೆಕಟ್ಟೆಗಳಲ್ಲಿನ ನೀರು ಬತ್ತಿ ಹೋಗುತ್ತಿವೆ. ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next