Advertisement

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

11:09 PM Apr 28, 2024 | Team Udayavani |

ಬೆಂಗಳೂರು: ಬಿಸಿಲ ಬೇಗೆಗೆ ರಾಜ್ಯವು ಬೆಂದು ಬಳಲಿ ಹೋಗಿದ್ದು, ಅರ್ಧ ಕರ್ನಾಟಕಕ್ಕೆ ಹವಾಮಾನ ಇಲಾಖೆಯಿಂದ ಉಷ್ಣ ಅಲೆಯ ಮುನ್ನೆಚ್ಚರಿಕೆ ಕೊಡಲಾಗಿದೆ. ಬೆಂಗಳೂರಿನಲ್ಲಿ 2024ರಲ್ಲೇ ಅತ್ಯಧಿಕ 38.5 ಡಿ.ಸೆ. ಗರಿಷ್ಠ ದಾಖಲೆಯ ಉಷ್ಣಾಂಶ ವರದಿಯಾಗಿದೆ.

Advertisement

ಕರ್ನಾಟಕದ ಉತ್ತರ ಒಳನಾಡಿನ ಭಾಗವಾದ ಬೀದರ್‌, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮುಂದಿನ 5 ದಿನಗಳಿಗೆ ಉಷ್ಣ ಅಲೆ ಮುನ್ನೆಚ್ಚರಿಕೆ ಕೊಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಬೇಗೆಯ ಅನುಭವ ಹೆಚ್ಚಲಿದೆ.

ರಾಜ್ಯದಲ್ಲಿ ಮೇ ಮೊದಲ ವಾರದಲ್ಲಿ ಕಲಬುರಗಿ, ರಾಯಚೂರು, ವಿಜಯಪುರ, ಬಳ್ಳಾರಿ, ಕೊಪ್ಪಳ ಸಹಿತ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಮುಂದಿನ ವಾರದೊಳಗೆ 44ರಿಂದ 45ರ ಗಡಿ ದಾಟುವ ಸಾಧ್ಯತೆಗಳಿವೆ. ಸಾಕಷ್ಟು ನೀರು ಕುಡಿಯಬೇಕು, ಅಲ್ಕೋಹಾಲ್‌, ಚಹಾ, ಕಾಫಿ, ತಂಪು ಪಾನೀಯಗಳನ್ನು ಆದಷ್ಟು ತ್ಯಜಿಸುವುದು ಒಳಿತು ಎಂದು ಹವಾಮಾನ ಇಲಾಖೆ ಹೇಳಿದೆ.

ಯಾಕೆ ಅತಿಯಾದ ತಾಪಮಾನ?
ಎಲ್‌ನಿನೋ ಪ್ರಭಾವದಿಂದ ಈ ಬಾರಿ ಮಳೆ ಆಗದೆ ಉಷ್ಣಾಂಶ ಹೆಚ್ಚಾಗಿದೆ. ಇದರಿಂದ ಭೂಮಿ ಕಾದು ತಾಪಮಾನದಲ್ಲಿ ಹೆಚ್ಚುತ್ತದೆ. ಸದ್ಯ ರಾಜ್ಯದ ಕೆಲವು ಕಡೆ ಶೇ.10 ಮಾತ್ರ ತೇವಾಂಶ ಇದೆ. ಎಲ್‌ನಿನೋ ಶೂನ್ಯವಾದರೆ ಮಳೆಯಾಗುವ ಸಾಧ್ಯತೆಗಳಿವೆ. ಪ್ರಸ್ತುತ ಕರ್ನಾಟಕದ ವಾತಾವರಣ ಗಮನಿಸಿದರೆ ಜುಲೈ, ಆಗಸ್ಟ್‌, ಸೆಪ್ಟಂಬರ್‌ನಲ್ಲಿ ಉತ್ತಮ ಮಳೆಯಾಗಲಿದೆ.

ಬೆಂಗಳೂರಿನಲ್ಲಿ 38.5 ಡಿ.ಸೆ. ತಾಪಮಾನ
ಬೆಂಗಳೂರಿನಲ್ಲಿ ರವಿವಾರ 38.5 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿದ್ದು, ಇದು 2024ರಲ್ಲಿ ದಾಖಲಾದ ಅತ್ಯಧಿಕ ತಾಪಮಾನವಾಗಿದೆ. 2016ರ ಎ. 25ರಂದು ಬೆಂಗಳೂರಿನಲ್ಲಿ ದಾಖಲಾದ 39.2 ಡಿ.ಸೆ. ದಾಖಲೆಯ ತಾಪಮಾನವನ್ನೂ ಹಿಂದಿಕ್ಕುವ ಲಕ್ಷಣ ಗೋಚರಿಸಿದೆ. ಇನ್ನೆರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನವು 39 ಡಿ.ಸೆ.ಗೆ ಏರಿಕೆಯಾಗಬಹುದು ಎಂದು ಹವಾಮಾನ ತಜ್ಞ ಸಿ.ಎಸ್‌.ಪಾಟೀಲ್‌ ತಿಳಿಸಿದ್ದಾರೆ.

Advertisement

ರಾಜ್ಯದ ಎಲ್ಲೆಲ್ಲಿ ಎಷ್ಟೆಷ್ಟು ಉಷ್ಣಾಂಶ ?
ರಾಯಚೂರು 43, ಕಲಬುರಗಿ 42.9, ಗದಗ 40.2, ಗಂಗಾವತಿ 41.9, ಬಾಗಲಕೋಟೆ 42.3, ಧಾರವಾಡ 39.2, ಮಂಡ್ಯ 39.6, ಬೆಳಗಾವಿ 39.4 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಸಾಧಾರಣ ಬೇಸಗೆ ಅವಧಿಯಲ್ಲಿ ಸರಾಸರಿ ಗರಿಷ್ಠ ಮಿತಿಗಿಂತ 4 ಡಿ.ಸೆ. ಹೆಚ್ಚಿನ ತಾಪಮಾನ, ಅಂದರೆ 38.5 ಡಿ.ಸೆ. ಉಷ್ಣಾಂಶ ದಾಖಲಾಗಿದೆ.

ರಾಜ್ಯದ ವಿವಿಧೆಡೆ ತಾಪಮಾನವು ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ. ಎನ್‌ನಿನೋ ಪ್ರಭಾವದಿಂದ ಈ ಮಾದರಿಯ ವಾತಾವರಣ ಉಂಟಾಗಿದೆ. ಜನ ಸಾಮಾನ್ಯರು ತಾಪಮಾನದ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.
-ಸಿ.ಎಸ್‌.ಪಾಟೀಲ್‌, ಹವಾಮಾನ ತಜ್ಞ, ಭಾರತೀಯ ಹವಾಮಾನ ಇಲಾಖೆ

 

Advertisement

Udayavani is now on Telegram. Click here to join our channel and stay updated with the latest news.

Next