Advertisement

ತಾಪತ್ರಯಗಳೆಂದರೆ ಯಾವುವು?

03:34 PM Sep 08, 2018 | |

ತಾಪತ್ರಯ ಎಂಬ ಪದ ಹೇಳುವುದಕ್ಕೂ ಕೇಳುವುದಕ್ಕೂ ಸರಳವಾಗಿ ಕಂಡರೂ ಇದು ಮಾನವನು ವಿಧವಿಧವಾಗಿ ಅನುಭವಿಸುವ ಎಲ್ಲಾ ಬಗೆಯ ತೊಂದರೆಗಳ ನಿಜಾರ್ಥವನ್ನು ಸೂಚಿಸುವ ಶಬ್ದವಾಗಿದೆ. ಮಾನವನು ಅನುಭವಿಸುವ ದುಃಖಗಳಲ್ಲಿ ಬಹುಪಾಲು ಆಧ್ಯಾತ್ಮಿಕ ತಾಪವೇ ಆಗಿರುತ್ತದೆ. 

Advertisement

ಮಾತನಾಡುವಾಗ ಪ್ರತಿಯೊಬ್ಬರೂ ನನಗೆ ತಾಪತ್ರಯ ತಪ್ಪಿದ್ದಲ್ಲ, ತಾಪತ್ರಯಗಳಿಂದಾಗಿ ಸಾಕಾಗಿ ಹೋಗಿದೆ ಅನ್ನುತ್ತಾರೆ.  ಹೀಗೆ ಹಲವು ಕಡೆ ಈ ತಾಪತ್ರಯ ಎಂಬ ಶಬ್ದದ ಪ್ರಯೋಗವಾಗುತ್ತಲೇ ಇರುತ್ತದೆ. ಜನರು ತಮ್ಮ ಎಲ್ಲಬಗೆಯ ಸಮಸ್ಯೆ-ಸಂಕಟಗಳನ್ನೇ ಸೇರಿಸಿ ತಾಪತ್ರಯಗಳಿವೆ ಎಂಬ ಪದವನ್ನು ಉಪಯೋಗಿಸುತ್ತಾರೆ. ಹಾಗಾದರೆ ಆ ತಾಪತ್ರಯಗಳೆಂದರೇನು?  ತಾಪತ್ರಯಗಳಾವುವು?

ತಾಪ ಎಂದರೆ, ದುಃಖ, ನೋವು,  ಭಾದೆ ಅಥವಾ ಸಂಕಟ. ತ್ರಯ ಎಂದರೆ ಮೂರು. ಅಂದರೆ ಒಟ್ಟಾದ ಅರ್ಥ ಮೂರು ಬಗೆಯ ಸಂಕಟ ಅಥವಾ ದುಃಖ ಎಂದರ್ಥ. ಅಂದರೆ ಮನುಷ್ಯನಿಗೆ ಕೇವಲ ಮೂರು ಬಗೆಯ ಸಂಕಟಗಳು ಮಾತ್ರವೇ? ಸಾವಿರಾರು ಸಮಸ್ಯೆಗಳ ಸುಳಿಯಲ್ಲಿ ನಲುಗುತ್ತಿರುವವರನ್ನು ನಾವು ಕಣ್ಣಾರೆ ಕಂಡಿರುತ್ತೇವೆ; ಅನುಭವಿಸಿರುತ್ತೇವೆ. ಕೇವಲ ಮೂರು ಬಗೆಯ ನೋವು ಎಂಬಂತೆ ತಾಪತ್ರಯ ಎಂದು ಹೇಳಿದರೆ ಸರಿ ಎನಿಸುವುದಾದರೂ ಹೇಗೆ?

ಆದರೆ, ತಾಪತ್ರಯ ಎಂಬ ಪದದಲ್ಲಿ ಎಲ್ಲಾ ಬಗೆಯ ನೋವುಗಳೂ ಸೇರಿವೆ. ಅವನ್ನೇ ಒಟ್ಟಾಗಿಸಿ ನಾವು ದುಃಖಕ್ಕೆ ಒಳಗಾಗುವ ಅಂಶಗಳನ್ನು ಆಧರಿಸಿ ತಾಪತ್ರಯಗಳನ್ನು ಹೇಳಲಾಗಿದೆ. 1. ಆಧ್ಯಾತ್ಮಿಕ  2. ಆದಿಭೌತಿಕ ಮತ್ತು 3. ಆದಿದೈವಿಕ. ಈ ಮೂರು ಮುಖ್ಯ ತಾಪಗಳು. ಇವುಗಳಲ್ಲಿಯೇ ನಮ್ಮ ಎಲ್ಲಾ ಬಗೆಯ ನೋವುಗಳು ಅಡಕವಾಗಿವೆ. ತಾಪತ್ರಯ ಎಂಬ ಪದವನ್ನು ಎಲ್ಲರೂ ತೀರಾ ಸಹಜವಾಗಿ ಬಳಸುತ್ತಾರಾದರೂ ಅದರ ಒಳಾರ್ಥ ಹಲವರಿಗೆ ತಿಳಿದಿರುವುದಿಲ್ಲ.

1. ಆಧ್ಯಾತ್ಮಿಕ ತಾಪ
ಆಧ್ಯಾತ್ಮಿಕ ತಾಪವೆಂಬುದು ನೇರವಾಗಿ ನಮಗೇ ಸಂಬಂಧಪಟ್ಟಿದ್ದು. ನಮ್ಮಲ್ಲಿ ಅಡಗಿರುವ ಕಾಮ, ಕ್ರೋದ, ಲೋಭ, ಮದ, ಮೋಹ, ಮತ್ಸರ ಎಂಬ ಅರಿಷಡ್ವರ್ಗಗಳಿಂದ ಬರುವಂತಹದು. ನಮ್ಮಲ್ಲಿ ಕಾಮ ಅಥವಾ ಆಸೆಗಳು ಹೆಚ್ಚುತ್ತಾ ಹೋದಾಗ ಅವುಗಳು ಈಡೇರದ ಸ್ಥಿತಿಯನ್ನು ತಲುಪಿದಾಗ ನೋವನ್ನನುಭವಿಸುತ್ತೇವೆ. ಅತಿಯಾದ ಮೋಹದಿಂದಾಗಿ ಆ ವಸ್ತು ಅಥವಾ ವ್ಯಕ್ತಿಯನ್ನು ಕಳೆದುಕೊಂಡಾಗ ದುಃಖದಿಂದ ಬಳಲುತ್ತೇವೆ. ಮತ್ಸರವೆಂಬುದು ನಮ್ಮತನವನ್ನೇ ಕೊಲ್ಲುವಷ್ಟು ಅಪಾಯಕಾರಿ. ಬೇರೆಯವರ ಏಳಿಗೆಯನ್ನು ನೋಡುತ್ತ ಮತ್ಸರಕ್ಕೊಳಗಾಗಿ ವಿನಾಕಾರಣ ಚಿಂತಿತರಾಗುವುದೂ ಒಂದು ಬಗೆಯ ತಾಪವೇ ಆಗಿದೆ. ನಮ್ಮ ಮನಸ್ಸಿನ ಈ ಬಗೆಯ ದೌರ್ಬಲ್ಯದಿಂದಾಗಿಯೇ ಉಂಟಾಗುವ ಸಂಕಟಗಳು ಆಧ್ಯಾತ್ಮಿಕ ತಾಪಗಳಾಗಿವೆ.

Advertisement

2.  ಆದಿಭೌತಿಕ ತಾಪ
ಇದು ಭೌತಿಕವಾಗಿ ನಾವು ಅನುಭವಿಸುವ ತಾಪಗಳನ್ನು ಸೂಚಿಸುತ್ತದೆ. ಅಂದರೆ ಇತರ ಜೀವಿಗಳಿಂದ ನಮ್ಮ ದೇಹ ಮತ್ತು ಮನಸ್ಸಿಗೆ ಉಂಟಾಗುವ ನೋವುಗಳನ್ನು ಆದಿಭೌತಿಕ ತಾಪವೆನ್ನಲಾಗಿದೆ. ವಿಷಜಂತುಗಳಿಂದ ಕಡಿತಕ್ಕೊಳಗಾಗುವುದರಿಂದ ಅನುಭವಿಸುವ ತೊಂದರೆಗಳು. ಮಾನವ ನಿರ್ಮಿತ ತೊಂದರೆಗಳು, ಅಂದರೆ ವಾಹನ ಅಪಘಾತಗಳು, ದೈಹಿಕಹಿಂಸೆ ಮತ್ತು ಮಾನಸಿಕ ಹಿಂಸೆ, ಇನ್ನಿತರ ಆಕಸ್ಮಿಕ ಅವಗಡಗಳು ಆದಿಭೌತಿಕ ತಾಪಗಳಲ್ಲಿ ಸೇರಿವೆ.

3. ಆದಿದೈವಿಕ ತಾಪ 
ಪ್ರಕೃತಿಯಲ್ಲಿನ ವೈಪರೀತ್ಯದಿಂದಾಗಿ ಉಂಟಾಗುವ ತೊಂದರೆಗಳು ಆದಿದೈವಿಕ ತಾಪಗಳಾಗಿವೆ. ಸಿಡಿಲು, ಸುನಾಮಿ, ವಿಪರೀತ ಉಷ್ಣತೆ, ಬಿರುಗಾಳಿ, ಅತಿವೃಷ್ಟಿ-ಅನಾವೃಷ್ಟಿ, ಭೂಕಂಪ, ಜ್ವಾಲಾಮುಖೀ ಮೊದಲಾದ ಬಗೆಯ ಪ್ರಾಕೃತಿಕ ವಿಕೋಪಗಳಿಂದ ಮನುಷ್ಯ ತೊಂದರೆಗೆ ಈಡಾಗುತ್ತಾನೆ. ಬರಸಿಡಿಲು, ಅತಿವೃಷ್ಟಿಯಿಂದಾದ ಜಲಾವೃತ, ಸಮುದ್ರದ ಕೊರೆತದಿಂದಾಗುವ ಅಪಾಯಗಳಿಗೆ ತುತ್ತಾದವರನ್ನು ನಾವು ಕಂಡಿರುತ್ತೇವೆ. ಇವೆಲ್ಲವೂ ಆದಿದೈವಿಕ ತಾಪಗಳಾಗಿವೆ.
ತಾಪತ್ರಯ ಎಂಬ ಪದ ಹೇಳುವುದಕ್ಕೂ ಕೇಳುವುದಕ್ಕೂ ಸರಳವಾಗಿ ಕಂಡರೂ ಇದು ಮಾನವನು ವಿಧವಿಧವಾಗಿ ಅನುಭವಿಸುವ ಎಲ್ಲಾ ಬಗೆಯ ತೊಂದರೆಗಳ ನಿಜಾರ್ಥವನ್ನು ಸೂಚಿಸುವ ಶಬ್ದವಾಗಿದೆ. ಮಾನವನು ಅನುಭವಿಸುವ ದುಃಖಗಳಲ್ಲಿ ಬಹುಪಾಲು ಆಧ್ಯಾತ್ಮಿಕ ತಾಪವೇ ಆಗಿರುತ್ತದೆ. ನೂರರಲ್ಲಿ ತೊಂಬತ್ತು ಪಾಲು ಇದರದ್ದು. ಉಳಿದೆರಡು ತಾಪಗಳದ್ದು ಕೇವಲ ಹತ್ತರಷ್ಟು.

ತಾಪದ ನಿಯಂತ್ರಣ:ನೋವು-ನಲಿವಿಗೆ ಮೂಲ ಕಾರಣವೇ ಮನಸ್ಸು. ಮನಸ್ಸು ಅರಿಷಡ್ವರ್ಗಗಳ ಬಲೆಯಲ್ಲಿ ಸಿಲುಕದೆ ನಿಯಂತ್ರಿಸಲ್ಪಟ್ಟಾಗ ಆಧ್ಯಾತ್ಮಿಕ ತಾಪಗಳಿಂದ ದೂರವಿದ್ದು ನೆಮ್ಮದಿಯ ಜೀವನ ನಡೆಸಬಹುದು.

ವಿಷ್ಣು ಭಟ್ಟ ಹೊಸ್ಮನೆ

Advertisement

Udayavani is now on Telegram. Click here to join our channel and stay updated with the latest news.

Next