ಕನ್ನಡ ಚಿತ್ರರಂಗದಲ್ಲಿ ಏಳೆಂಟು ವರ್ಷಗಳಿಂದ ಸಾಹಿತಿ, ಸಂಗೀತ ಸಂಯೋಜಕರಾಗಿರುವ ಮಂಜುಕವಿ ಈಗ ನಿರ್ದೇಶಕನಾಗಿ ಭಡ್ತಿ ಪಡೆದಿದ್ದು, “ಟೆಂಪರ್’ ಚಿತ್ರದ ಮೂಲಕ ತೆರೆಗೆ ಬರುತ್ತಿದ್ದಾರೆ. ಕನ್ನಡ ಹಾಗೂ ತೆಲುಗು ಸೇರಿದಂತೆ 2 ಭಾಷೆಗಳಲ್ಲಿ ನಿರ್ಮಾಣವಾಗಿ, ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿತು. ಈ ಸಮಾರಂಭದಲ್ಲಿ ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ, ಧ್ರುವರಾಜ್, ಬಸವರಾಜ್ ಬಣಕಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ನಿರ್ದೇಶಕ ಮಂಜುಕವಿ ಮಾತನಾಡಿ, ಕುಟುಂಬ ಸಮೇತ ನೋಡಬಹುದಾದ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರ ಇದಾಗಿದ್ದು, ಮಾಸ್ ಸ್ಟೋರಿ ಜೊತೆಗೊಂದು ಪ್ರೇಮಕಥೆಯೂ ಇದೆ.
ಬೆಂಗಳೂರು, ಮಂಡ್ಯ, ಮೈಸೂರು, ನಂಜನಗೂಡು, ಶ್ರೀರಂಗಪಟ್ಟಣ, ಚಿಕ್ಕಮಗಳೂರು ಹಾಗೂ ಕುಂದಾಪುರ ಸುತ್ತಮುತ್ತ 50 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ನಾಯಕ ಚಿಕ್ಕ ಹುಡುಗನಾಗಿದ್ದಾಗಿಂದಲೂ ಸಣ್ಣ ವಿಷಯಕ್ಕೂ ತಕ್ಷಣ ಕೋಪಗೊಂಡು ಟೆಂಪರ್ ಆಗುತ್ತಾನೆ. ಊರ ಗೌಡನ ಅಟ್ಟಹಾಸವನ್ನು ಮುರಿದು ನಾಯಕ ಹೇಗೆ ತನ್ನ ಕುಟುಂಬ ಹಾಗೂ ತನ್ನ ಪ್ರೇಯಸಿಯನ್ನು ಕಾಪಾಡಿಕೊಳ್ಳುತ್ತಾನೆ ಎನ್ನುವುದೇ ಟೆಂಪರ್ ಚಿತ್ರದ ಎಳೆ ಎಂದರು.
ನಾಯಕ ಆರ್ಯನ್ ಸೂರ್ಯ, ನಾಯಕಿ ಕಾಶಿಮಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ವಿ. ವಿನೋದ್‌ಕುಮಾರ್ ಹಾಗೂ ಮೋಹನಬಾಬು ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.