ತೆಲಸಂಗ: ವೃತ್ತಿ ರಂಗಭೂಮಿ ಇಂದು ಸೋತು ಸುಣ್ಣವಾಗಿದ್ದು, ಅದೆಷ್ಟೋ ವೃತ್ತಿ ನಾಟಕ ಕಂಪನಿಗಳು ಬಾಗಿಲು ಮುಚ್ಚಿ ಕೇವಲ ಬೆರಳೆಣಿಕೆಯಷ್ಟೇ ಈಗ ಉಳಿದುಕೊಂಡಿವೆ. ವೃತ್ತಿರಂಗಭೂಮಿಗೆ ಕಾಯಕಲ್ಪ ಕೊಡುವುದು ಹೇಗೆಂದು ಚಿಂತಿಸಬೇಕಿದೆ ಎಂದು ಹವ್ಯಾಸಿ ಕಲಾವಿದ ಡಾ| ಬಿ.ಎಸ್.ಕಾಮನ್ ಹೇಳಿದರು.
ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ನಿಮಿತ್ತ ಹಮ್ಮಿಕೊಂಡ ನಾಟಕ ಪ್ರದರ್ಶನದಲ್ಲಿ ಡಾ| ಪಂ| ಪುಟ್ಟರಾಜ ಕವಿ ಗವಾಯಿಗಳ ರಂಗ
ಸಂಸ್ಥೆಯಿಂದ ವೃತ್ತಿ ರಂಗಭೂಮಿ ಕಲಾವಿದರನ್ನು ಸತ್ಕರಿಸಿ ಅವರು ಮಾತನಾಡಿ, ರಂಗಭೂಮಿಗೆ ಪುರಾತನ ಇತಿಹಾಸವಿದೆ. ಮೈಸೂರು ಕಂಠೀರವ ನರಸರಾಜರ (1638-59) ಅರಮನೆಯಲ್ಲಿ ಮನೋಹರವಾದ ನಾಟಕಶಾಲೆ ಇತ್ತೆಂದು ಆ ರಾಜರ ಚರಿತ್ರೆಯನ್ನು ರಚಿಸಿದ ಗೋವಿಂದ ವೈದ್ಯ ತನ್ನ ಕಾವ್ಯದಲ್ಲಿ ಹೇಳಿದ್ದಾನೆ.
ಗ್ರಾಮೀಣ ಪ್ರದೇಶದಲ್ಲಿ ವರ್ಷಕ್ಕೊಂದು ಸಾರಿ ಊರ ಗ್ರಾಮದೇವತೆಯ ಜಾತ್ರೆಯ ಸಂದರ್ಭದಲ್ಲಿ ಊರಿನ ಕಲಾವಿದರೆಲ್ಲ ಸೇರಿ ನಾಟಕ ಆಡುವ ಪರಂಪರೆ ಈಗಲೂ ಮುಂದುವರೆದಿದೆ.
ಇದನ್ನೇ ಜಾನಪದ ರಂಗಭೂಮಿ ಎಂದು ಕರೆದರೆ, ರಂಗಭೂಮಿಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡುವ ಅನೇಕ ಕಲಾವಿದರು, ಕಂಪನಿಗಳನ್ನು ಕಾಣುತ್ತೇವೆ. ಆದರೆ ಇಂದು ವೃತ್ತಿ ನಾಟಕ ಕಂಪನಿಗಳ ಮತ್ತು ಕಲಾವಿದರ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ಕಲಾವಿದರ ಕಲಾ ತಪಸ್ಸಿನ ಪರಿಣಾಮವಾಗಿ ರಂಗಭೂಮಿ ಕಾಲಕ್ಕೆ ತಕ್ಕಂತೆ ರೂಪಾಂತರದೊಂದಿಗೆ ಸಶಕ್ತವಾಗಿ ಮತ್ತಷ್ಟು ವಿನೂತನವಾಗಿ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ. ಟಿವಿ ಮಾಧ್ಯಮ, ಸಿನಿಮಾರಂಗದಿಂದ ರಂಗಭೂಮಿ ಕತೆ ಮುಗಿದೇ ಹೋಯಿತು ಎಂದು ಹಲವು ಮಂದಿ ವಾದ ಮಂಡಿಸಿದ್ದರು. ಆದರೆ ರಂಗಭೂಮಿ ನಿಂತ ನೀರಾಗಲೇ ಇಲ್ಲ. ಸಮೃದ್ಧವಾಗಿ ಹಬ್ಬುತ್ತಾ ಸಮಾಜ ಕಟ್ಟುತ್ತಲೇ ಹೊರಟಿದೆ. ಹೀಗಾಗಿ ರಂಗಭೂಮಿಯನ್ನು
ಉಳಿಸಿ ಬೆಳೆಸೋಣ ಎಂದು ಕರೆ ನೀಡಿದರು.
ವೃತ್ತಿ ರಂಗಭೂಮಿ ಕಲಾವಿದೆಯರಾದ ಸ್ವಪ್ನಾ ವಿಜಯಪೂರ, ಭವ್ಯಾ ಬುದ್ನಿ, ಗೀತಾ ಬಾದಾಮಿ ಇವರನ್ನು ಸತ್ಕರಿಸಲಾಯಿತು.
ಗ್ರಾಪಂ ಸದಸ್ಯ ಸಿದ್ದಲಿಂಗ ಮಾದರ, ರವಿ ಕವಟಗಿ, ಗಪೂರ ಮುಲ್ಲಾ, ಪುಟ್ಟು ವಳಸಂಗ, ಧರೆಪ್ಪಾ ಮಾಳಿ, ರಾಜು ಸಾಗರ, ಆನಂದ ಥೈಕಾರ, ರಾಜು ಹೊನಕಾಂಬಳೆ, ಸುನೀಲ ಉಂಡೋಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.