Advertisement

Telsang: ಶಾಲೆಗೆ ಕನ್ನಡ ಮಾತಾ ಫೌಂಡೇಶನ್‌ ಬಣ್ಣದ ಸೊಬಗು

05:54 PM Sep 21, 2023 | Team Udayavani |

ತೆಲಸಂಗ: ಸರ್ಕಾರಿ ಶಾಲೆಯ ಉಳಿವಿಗಾಗಿ ಶ್ರಮಿಸುತ್ತಿರುವ ಗೋಕಾಕದ ಕನ್ನಡ ಮಾತಾ ಫೌಂಡೇಶನ್‌ದ ಸಮಾಜ ಸೇವಕಿ ಪೂಜಾ ಕಾಂಬಳೆ ಸಮಾನ ಮನಸ್ಕರ ಸಹಾಯದೊಂದಿಗೆ ಗ್ರಾಮದ ಪ್ರಾಥಮಿಕ ಶಾಲೆಯೊಂದಕ್ಕೆ ಬಣ್ಣ ಹೊಸ ರೂಪವನ್ನೇ
ಕೊಟ್ಟಿದ್ದಾರೆ.

Advertisement

ಗ್ರಾಮದ ತೆಲಸಂಗ ಕ್ರಾಸ್‌ನಲ್ಲಿ ಇರುವ ಮಾಧವಾನಂದ ನಗರದ ಸರಕಾರಿ ಶಾಲೆ ಹಲವು ದಶಕಗಳಿಂದ ಸುಣ್ಣ ಬಣ್ಣ ಕಂಡಿರಲಿಲ್ಲ. ಕಳೆದ ಒಂದು ವಾರದಿಂದ ಗ್ರಾಮಕ್ಕೆ ಆಗಮಿಸಿರುವ ಪೂಜಾ ಕಾಂಬಳೆ ನೇತೃತ್ವದ ತಂಡ, ಶಾಲೆಗೆ ಬಣ್ಣ ಬಳೆಯುವ
ಮೂಲಕ ಶಾಲೆ ಕಂಗೊಳಿಸುವಂತೆ ಮಾಡಿದ್ದಾರೆ.

ವರ್ಷದಿಂದ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಈ ತಂಡದಲ್ಲಿ ಕಾಗವಾಡ ಹಾಗೂ ಅಥಣಿ ಯುವಕರು ಇದ್ದಾರೆ. ನಿತ್ಯ
ತಮ್ಮ ದುಡಿಮೆಯಲ್ಲಿನ ಅಲ್ಪ ಸ್ವಲ್ಪ ಹಣ ಉಳಿಸಿ ಸಾಮಾಜಿಕ ಸೇವೆಗೆ ಖರ್ಚು ಮಾಡುತ್ತಿದ್ದಾರೆ. ಕಾಗವಾಡದಲ್ಲಿ ಎರಡು ಶಾಲೆ, ಉಪ್ಪಾರವಾಡಿ, ತೆಲಸಂಗದಲ್ಲಿ ತಲಾ ಒಂದು ಶಾಲೆಯಂತೆ ಈವರೆಗೆ ಒಟ್ಟು 4ಶಾಲೆಗಳಿಗೆ ಬಣ್ಣ ಬಳಿದಿದ್ದಾರೆ. ಕೇವಲ ಬಣ್ಣ ಬಳಿಯುವುದು ಮಾತ್ರವಲ್ಲ. ಸರಕಾರಿ ಶಾಲೆಗಳ ಕಾಂಪೌಂಡ್‌, ಗೇಟ್‌ ಶಿಥಿಲಗೊಂಡಿದ್ದರೆ ರಿಪೇರಿ ಕೂಡ ಮಾಡುತ್ತಿದ್ದಾರೆ. ಉಪ್ಪಾರವಾಡಿ ಶಾಲೆಗೆ 1ಕಿ.ಮೀ ಪೈಪ್‌ ಲೈನ್‌ ಎಳೆದು ಕುಡಿಯುವ ನೀರೀನ ವ್ಯವಸ್ಥೆಯನ್ನೂ ಮಾಡಿದ್ದಾರೆ.

ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಈ ತಂಡಕ್ಕೆ ಶಾಲೆಯ ಶಿಕ್ಷಕರು ಬೆಳಗಿನ ಉಪಹಾರ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಿಸುತ್ತಾರೆ. ಮಿಕ್ಕಂತೆ ಮಧ್ಯಾಹ್ನ ಶಾಲೆಯ ಮಕ್ಕಳೊಂದಿಗೆ ಬಿಸಿಯೂಟ ಸೇವಿಸುವ ಈ ತಂಡದ ಸದಸ್ಯರು ಒಂದು ಪೈಸೆ
ಹಣ ಸಹ ಪಡೆಯದೇ ನಿಸ್ವಾರ್ಥದಿಂದ ಕೆಲಸ ಮಾಡುತ್ತಿರುವುದು ಸಾರ್ವಜನಿಕರ ಪ್ರಸಂಸೆಗೆ ಪಾತ್ರವಾಗಿರುವುದಲ್ಲದೇ ಗ್ರಾಮದ ಯುವಕರಿಗೆ ಪ್ರೇರಣೆಯೂ ಆಗಿದೆ.

ಈ ತಂಡದಲ್ಲಿ ಪೂಜಾ ಕಾಂಬಳೆ, ಹಣಮಂತ ನಾಯಕ್‌, ಶಿವರಾಜ್‌ ಕಾಂಬಳೆ, ಉಮೇಶ ಸೇಗುನಸಿ, ರಾಕೇಶ ಕಾಂಬಳೆ, ರಾಹುಲ ಕಾಂಬಳೆ, ಕೃಷ್ಣ ಕಾಂಬಳೆ, ಮಲ್ಲಿಕಾರ್ಜುನ ಕಾಂಬಳೆ, ಪ್ರಕಾಶ ಕೆಂಗಲಗುತ್ತಿ, ಗಣೇಶ ಕಳಸಿ, ರಾಕೇಶ್‌ ನಾಯಕ ಇದ್ದಾರೆ. ಮುಖ್ಯ ಶಿಕ್ಷಕ ಇಲಾಯ್‌ ಮುಜಾವರ ಹಾಗೂ ಶಿಕ್ಷಕರು, ಗ್ರಾಪಂ ಸದಸ್ಯ ರಾಮು ನಿಡೋಣಿ. ಆಸ್ಕರ ಮುಲ್ಲಾ. ರಾಜು ಹೋನಗೌಡ ಈ ತಂಡದ ಉಟೋಪಚಾರದ ಹೊಣೆ ಹೊತ್ತಿದ್ದಾರೆ.

Advertisement

ನಿತ್ಯ ಕಾಯಕ ಮಾಡಿಕೊಂಡೇ ಹೊಟ್ಟೆ ತುಂಬಿಸಿಕೊಳ್ಳುವ ಈ ತಂಡ ದುಡಿಮೆಯಲ್ಲಿನ ಹಣ ಉಳಿಸಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನಿಸ್ವಾರ್ಥ ಸೇವೆ ಮಾಡುತ್ತಿದೆ. ಸಾಮಾಜಿಕ ಕಳಕಳಿ ಇರುವವರು ಈ ತಂಡದ ಕಾರ್ಯಕ್ಕೆ ಕೈ ಜೋಡಿಸಲಿ ಎಂದು ಆಶಿಸುತ್ತೇವೆ. ಅವರ ಈ ಕಾರ್ಯಕ್ಕೆ ಜನರಿಂದ ಮತ್ತಷ್ಟು ಬೆಂಬಲ ಸಿಗಲಿ.
ರಾಮು ನಿಡೋಣಿ. ಗ್ರಾಪಂ ಸದಸ್ಯ, ತೆಲಸಂಗ.

ಶಾಲೆಗಳು ಸುಣ್ಣ ಬಣ್ಣ ಕಾಣದಿರುವುದು ಪಾಲಕರು ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸದಿರಲು ಎಂದು
ಕಾರಣವಾಗಿರಬಹುದು ಎನ್ನಿಸಿತು. ಬಿಡುವಿನ ಸಮಯದಲ್ಲಿ ಸಮಾಜ ಸೇವೆ ಮಾಡೋಣ ಅಂತ ಚರ್ಚಿಸಿದಾಗ ಎಲ್ಲರ ಸಮ್ಮತಿ ಬಂತು. ವರ್ಷದಿಂದ ಇಂತಹ ಕೆಲಸ ಮಾಡುತ್ತಿದ್ದೇವೆ. ಇದರಿಂದ ತುಂಬಾ ಸಂತೋಷವಾಗುತ್ತದೆ.
ಪೂಜಾ ಕಾಂಬಳೆ. ತಂಡದ ನಾಯಕಿ, ಕಾಗವಾಡ.

*ಜಗದೀಶ ಖೊಬ್ರಿ

Advertisement

Udayavani is now on Telegram. Click here to join our channel and stay updated with the latest news.

Next