ಕಾಬೂಲ್: “ರಬ್ಬರ್‌ನ ಚಾವಟಿಯಿಂದ ನನ್ನ ಕೈಗಳನ್ನು ಕಟ್ಟಿ, ನನ್ನನ್ನು ನೆಲದ ಮೇಲೆ ಉರುಳಿಸಿ, ರಕ್ತ ಸುರಿಯುವವರೆಗೂ ಹೊಡೆಯುತ್ತಿದ್ದರು. ನಾವು ಪ್ರತಿದಿನ ಇಂಥ ಚಿತ್ರಹಿಂಸೆ ಅನುಭವಿಸುತ್ತಿದ್ದೇವೆ. ನಮ್ಮ ಸಮುದಾಯವೊಂದು ಅಸ್ತಿತ್ವದಲ್ಲಿದೆ ಮತ್ತು ರಕ್ಷಿಸಲ್ಪಡಲು ಕಾಯುತ್ತಿದೆ ಎಂಬುದನ್ನು ದಯವಿಟ್ಟು ಈ ಜಗತ್ತಿಗೆ ತಿಳಿಸಿ…’
ಹೀಗೆಂದು ಹೇಳಿರುವುದು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಕಪಿಮುಷ್ಟಿಯಲ್ಲಿ ಸಿಲುಕಿ ಭೂಮಿಯಲ್ಲೇ ನರಕ ಕಾಣುತ್ತಿರುವುದು ತೃತೀಯ ಲಿಂಗಿ ಸಮುದಾಯದ ಯುವಕ ಬಿಲಾಲ್.
ತಾಲಿಬಾನ್ ಹಿಡಿತಕ್ಕೆ ಸಿಕ್ಕಿದ ಬಳಿಕ ಅಫ್ಘನ್‌ನಲ್ಲಿನ ಎಲ್‌ಜಿಬಿಟಿಕ್ಯೂ ಸಮುದಾಯವನ್ನು ತಾಲಿಬಾನಿಗರು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬ ವಿಷಯವನ್ನು ಸಲಿಂಗಿ ಬಿಲಾಲ್ ಬಾಯಿಬಿಟ್ಟಿದ್ದಾರೆ.
“ನಾವು ಒಂದಿಷ್ಟು ಗೆಳೆಯರು ಒಂದೇ ಮನೆಯಲ್ಲಿ ವಾಸವಿದ್ದೆವು. ಒಂದು ದಿನ ಏಕಾಏಕಿ ಮಧ್ಯರಾತ್ರಿ ಶಸ್ತ್ರಸಜ್ಜಿತ ತಾಲಿಬಾನಿಗರು ಮನೆಗೆ ನುಗ್ಗಿದರು. ನನ್ನನ್ನು ಮತ್ತು ನನ್ನ ಗೆಳೆಯನನ್ನು ಸೆರೆಹಿಡಿದರು. ಉಳಿದವರು ಹಿಂಬಾಗಿಲ ಮೂಲಕ ಓಡಿ ತಪ್ಪಿಸಿಕೊಂಡರು. ನಮ್ಮಿಬ್ಬರನ್ನು ಒಂದು ಬಾತ್‌ರೂಂನಲ್ಲಿ ಕೂಡಿಹಾಕಿದ ಉಗ್ರರು, ಮಾರನೇ ದಿನದಿಂದ ಚಿತ್ರಹಿಂಸೆ ನೀಡಲಾರಂಭಿಸಿದರು. ಪವರ್ ಕೇಬಲ್‌ನಲ್ಲಿ ಪ್ರತಿದಿನ ನಮಗೆ ಹೊಡೆದು, ನಮ್ಮ ಮೇಲೆ ಮಂಜುಗಡ್ಡೆಯ ನೀರನ್ನು ಸುರಿದು, ವಿದ್ಯುತ್ ಪ್ರವಹಿಸುತ್ತಿದ್ದರು. ನನ್ನ ಮೈಮೇಲಿರುವ ಸುಟ್ಟ ಗಾಯಗಳೆಲ್ಲ ಅದರಿಂದಲೇ ಆಗಿರುವಂಥದ್ದು’ ಎನ್ನುತ್ತಾರೆ ಬಿಲಾಲ್.
ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದಿದ್ದೇನೆ. ತೃತೀಯ ಲಿಂಗಿಗಳ ಪಟ್ಟಿ ತಯಾರಿಸಿ, ಒಬ್ಬೊಬ್ಬರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಉಗ್ರರ ಹಿಟ್‌ಲಿಸ್ಟ್‌ನಲ್ಲಿ ನಾನೂ ಇದ್ದೇನೆ ಎಂದೂ ಬಿಲಾಲ್ ಕಳವಳ ವ್ಯಕ್ತಪಡಿಸುತ್ತಾರೆ.
ಈಗ ಅಫ್ಘನ್‌ನಲ್ಲಿ ಮಹಿಳೆಯರು ಉದ್ಯೋಗಕ್ಕೆ ತೆರಳುವಂತಿಲ್ಲ, 7ರಿಂದ 12ನೇ ತರಗತಿ ವಿದ್ಯಾರ್ಥಿನಿಯರು ಶಾಲೆಗೆ ಹೋಗುವಂತಿಲ್ಲ, 87 ಲಕ್ಷದಷ್ಟು ಜನ ಹಸಿವಿನಿಂದ ಬಳಲುತ್ತಿದ್ದಾರೆ, ಮನೆ ಮನೆಗೆ ನುಗ್ಗಿ ಹೋರಾಟಗಾರರನ್ನು ಬಂಧಿಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.