ಚಿತ್ತಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸರ್ಕಾರದ ಸಾಧನೆಗಳನ್ನು ತಾಲೂಕಿನ 132 ಬೂತ್‌ಗಳಿಗೆ ಹೋಗಿ ತಿಳಿಸಿ,ಯಡಿಯೂರಪ್ಪ ಅವರ 150 ಮಿಷನ್‌ನಲ್ಲಿ ಚಿತ್ತಾಪುರ ನಂಬರ್ ಒನ್ ಆಗುವಂತೆ ಮಾಡೋಣ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಬಿರೆದಾರ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಸ್ತಾರಕರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬೂತ್ ಮಟ್ಟದ ಸಮಿತಿ ಸದಸ್ಯರ ಜೊತೆ ಎರಡು ತಾಲೂಕಿನ ಮುಖಂಡರು ಜೊತೆಗೂಡಿ ಪ್ರತಿಯೊಂದು ಮನೆ ಮನೆಗೂ ತೆರಳಿ ಬಿಜೆಪಿ ಸರ್ಕಾರದ ಸಾಧನೆ ಹಾಗೂ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಹೇಳಿ, ಮನೆಯ ಗೋಡೆಗೆ ಬಿಜೆಪಿ ವಿಸ್ತಾರಕರ ಚೀಟಿ ಅಂಟಿಸಬೇಕು ಎಂದರು.
ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರಿ ಬಹುಮತ ಸಿಗಲು ವಿಸ್ತಾರಕರೆ ಕಾರಣ. ಆದ್ದರಿಂದ ನಮ್ಮಲ್ಲೂ ವಿಸ್ತರಿಕಾ ಕಾರ್ಯಕ್ರಮ ಮಾಡಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗುವಂತೆ ಮಾಡಬೇಕು ಎಂದು ಹೇಳಿದರು. ಸಂಸದ ಭಗವಂತ ಖೂಬಾ ನೇತೃತ್ವದ ವಿಸ್ತಾರಕರ ತಂಡ 15 ದಿನಗಳ ಕಾಲ ಚಿತ್ತಾಪುರದಲ್ಲೆ ವಾಸ್ತವ್ಯ ಮಾಡಲಿದೆ ಎಂದರು.
ಬೇಟಿ ಬಚಾವ್ ಭೇಟಿ ಪಡಾವೋ ರಾಜ್ಯ ಸಂಚಾಲಕ ಸುಭಾಸ ರಾಠೊಡ್ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ದುರಾಡಳಿತದ ಬಗ್ಗೆ , ಶಿಕ್ಷಣ, ಶಾಲೆ ಹಾಗೂ ಆರೋಗ್ಯ ವ್ಯವಸ್ಥೆ ಬಗ್ಗೆ ತಿಳಿ ಹೇಳಬೇಕು ಎಂದರು. ಮಾಜಿ ಶಾಸಕ ವಾಲ್ಮೀಕಿ ನಾಯಕ ಮಾತನಾಡಿ, ಬಿಜೆಪಿ ಸಂಘಟನೆಗೆ ಕಾರ್ಯಕರ್ತರು ಹಾಗೂ ವಿಸ್ತಾರಕರು ಹೆಚ್ಚಿನ ಒತ್ತು ಕೊಡಬೇಕು ಎಂದು ಹೇಳಿದರು.
ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ಚವ್ಹಾಣ, ಜಿಪಂ ಸದಸ್ಯ ಅಶೋಕ ಸಗರ್, ಗ್ರಾಮೀಣ ಅಧ್ಯಕ್ಷ ಶರಣು ಸಲಗರ್, ರಾಣೋಜಿ ದೊಡ್ಡಮನಿ, ರಾಜಕುಮಾರ ಕೋಟೆ, ಪ್ರಭು ಕಾಳನೂರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ದಿವ್ಯಾ ಹಾಗರಗಿ, ಪ್ರಧಾನ ಕಾರ್ಯದರ್ಶಿ ಇಂದ್ರಮ್ಮ ವಿ. ರೆಡ್ಡಿ, ತಾಲೂಕಾಧ್ಯಕ್ಷೆ ಅಕ್ಕಮಹಾದೇವಿ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೂರ್, ಕಾರ್ಯದರ್ಶಿ ನಾಗರಾಜ ಹೂಗಾರ, ವಕ್ತಾರ ಮಹೇಶ ಬೆಟಗೇರಿ ಹಾಗೂ ಮತ್ತಿತರರಿದ್ದರು.