Advertisement

ಕಣ್ಣಿನ ಡಾರ್ಕ್‌ ಸರ್ಕಲ್‌ಗೆ ಹೇಳಿ ಗುಡ್‌ ಬಾಯ್‌

10:31 PM Jan 20, 2020 | mahesh |

ಮಾನವ ದೇಹದಲ್ಲಿ ಅತೀ ಸೂಕ್ಷ್ಮ ಮತ್ತು ಅತ್ಯಾಕರ್ಷಕವೆಂದು ಕರೆಯಲ್ಪಡುವ ಕಣ್ಣು ನೊಡುಗರ ಆಕರ್ಷಣೆಗೂ ಪಾತ್ರವಾಗಿದೆ. ಕವಿಗಳು ಸಾಹಿತಿಗಳಿಗೆ ಹೇಳ ತೀರದಷ್ಟು ಬರೆಯಲೂ ಸ್ಫೂರ್ತಿಯಾದ ಇದೇ ಕಣ್ಣಿನ ಕೆಳಗೆ ಕಪ್ಪು ಕಲೆ ಬಿದ್ದರೆ ಮುಖಸುಕ್ಕು ಗಟ್ಟಿದಂತೆ ಕಾಣುತ್ತದೆ. ಸಾಮಾನ್ಯವಾಗಿ ಕೆಲಸದೊತ್ತಡ, ಸರಿಯಾಗಿ ನಿದ್ದೆ ಬರದಿರುವಿಕೆ, ಅಧಿಕ ತಂತ್ರಜ್ಞಾನದ ಬಳಕೆ ಕಣ್ಣ ಸುತ್ತಲಿನ ಡಾರ್ಕ್‌ ಸರ್ಕಲ್‌ಗೆ ಕಾರಣವಾಗಿದ್ದು, ಅಂದದ ಮುಖದ ಚಂದ ಕೆಡಿಸುತ್ತಲೇ ಇರುತ್ತದೆ. ಒಮ್ಮೆ ಈ ಕಪ್ಪು ಕಲೆ ಕಂಡಿತೆಂದರೆ ಯಾವುದೊ ಕಾಯಿಲೆಗೆ ತುತ್ತಾಂದತೆ ಕಾಣುವ ಮುಖವು ಹಲವು ಪ್ರಶ್ನೆಗಳ ಸುರಿಮಳೆ, ಒಂದಿಷ್ಟು ಸಲಹೆ ಬುದ್ಧಿ ಮಾತು ಕೇಳಿ ಬರುತ್ತದೆ. ಆದರೆ ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ ಡಾರ್ಕ್‌ ಸರ್ಕಲ್‌ ನಿವಾರಣೆಗೆ ಸರಳ ಮಾರ್ಗೋಪಾಯವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

Advertisement

ಬಾದಾಮಿ ಎಣ್ಣೆ
ಬಾದಾಮಿ ಎಣ್ಣೆಯೂ ಹಲವಾರು ನೈಸರ್ಗಿಕ ಗುಣಗಳನ್ನು ಹೊಂದಿದ್ದು ಮುಖದ ಮೇಲೆ ಮತ್ತು ಕಣ್ಣಿನ ಸುತ್ತ ಕಂಡು ಬಂದ ಡಾರ್ಕ್‌ ಸರ್ಕಲ್‌ ನಿವಾರಣೆಗೆ ದಿನಪ್ರತಿ ಮಸಾಜ್‌ ಮಾಡಿಕೊಳ್ಳಬೇಕು. ಫೇಶಿಯಲ್‌ ಮಾದರಿಯಲ್ಲಿ ಈ ಎಣ್ಣೆ ಲೇಪಿಸುವುದರಿಂದ ಡಾರ್ಕ್‌ ಸರ್ಕಲ್‌ ನಿವಾರಣೆ ಮಾಡಬಹುದಾಗಿದೆ.

ಸೌತೆ ಕಾಯಿ
ಸಾಮಾನ್ಯವಾಗಿ ಬ್ಯೂಟಿ ಪಾರ್ಲರ್‌ನಲ್ಲಿಯೂ ಹೆಚ್ಚಿದ ಸೌತೆಕಾಯಿಯನ್ನು ಕಣ್ಣಾಲೆಗೆ ಇಟ್ಟು ಫೇಶಿಯಲ್‌ ಮಾಡುತ್ತಾರೆ. ಇದು ಕಣ್ಣಿಗೆ ತಂಪು ಅನುಭವ ಮಾತ್ರ ನೀಡದೇ ಡಾರ್ಕ್‌ ಸರ್ಕಲ್‌ ನಿವಾರಣೆಗೆ ಬಹಳ ಉಪಯುಕ್ತವಾಗಿದೆ. ಇದರ ರಸವನ್ನು ಪ್ರತಿದಿನ ರಾತ್ರಿ ಕಣ್ಣಿನ ಸುತ್ತ ಹಚ್ಚಿ ಅರ್ಧ ಗಂಟೆ ಬಳಿಕ ತೊಳೆಯಬೇಕು. ಈ ರೀತಿ ವಾರಕ್ಕೆ ನಾಲ್ಕು ಬಾರಿ ಮಾಡುವುದರಿಂದ ಡಾರ್ಕ್‌ ಸರ್ಕಲ್‌ ನಿವಾರಿಸಬಹುದು.

ಆಲೂ ಚಮತ್ಕಾರ
ಆಲೂಗಡ್ಡೆಯನ್ನು ನುಣ್ಣಗೆ ಪೇಸ್ಟ್‌ ಮಾಡಿ ಅದನ್ನು ಮುಖದ ಸುತ್ತ ಕಣ್ಣಿನ ಸುತ್ತಲು ವೃತ್ತಾಕಾರ ಮಾದರಿಯಲ್ಲಿ ಲೇಪಿಸಿಕೊಳ್ಳಬೇಕು. ಜತೆಗೆ ಅದಕ್ಕೆ ಅಲೋವೆರಾ ರಸವನ್ನು ಸೇರಿಸಬಹುದು. ಈ ರೀತಿ ಪೆಸ್ಟ್‌ ಅನ್ನು 20ರಿಂದ 30 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ಮುಖದ ಅಂದ ಹೆಚ್ಚುವುದರೊಂದಿಗೆ ಡಾರ್ಕ್‌ ಸರ್ಕಲ್‌ ನಿವಾರಣೆಯಾಗುತ್ತದೆ.

ಪುದಿನಾ
ಚರ್ಮದ ಆರೈಕೆಗೆ ಸೊಪ್ಪುಗಳು ಪ್ರಧಾನ ಪಾತ್ರ ವಹಿಸುತ್ತವೆ. ಇದರಲ್ಲಿರುವ ನೈಸರ್ಗಿಕ ಗುಣದಿಂದ ಮುಖದ ಮೊಡವೆಯನ್ನು ಮರೆಮಾಡಲೂ ಸಾಧ್ಯವಿದ್ದು, ಅದರಂತೆ ಡಾರ್ಕ್‌ ಸರ್ಕಲ್‌ ಅನ್ನು ಕೂಡಾ ನಿವಾರಿಸಬಹುದು. ಪುದಿನ ಸೊಪ್ಪಿಗೆ ನಿಂಬೆ ರಸ ಮತ್ತು ಚಿಟಿಕೆ ಉಪ್ಪನ್ನು ಬೆರೆಸಿ ಕಣ್ಣಿನ ಸುತ್ತ ವಾರಕ್ಕೆ 3 ಬಾರಿ ಲೇಪಿಸುವುದರಿಂದ ಸಮಸ್ಯೆ ನಿವಾರಿಸಬಹುದು.

Advertisement

ಹಾಲಿನ ಪೋಷಣೆ
ಹಾಲಿನಲ್ಲಿ ಕ್ಯಾಲ್ಸಿಯಂ ಹೇರಳವಾ ಗಿದ್ದು, ದೇಹದ ಆರೋಗ್ಯದಲ್ಲಿ ಇದು ಅಧಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಹಾಲನ್ನು ಕಣ್ಣಿನ ಸುತ್ತ ಲೇಪಿಸಿ ಉಗುರು ಬೆಚ್ಚನೆ ನೀರಿನಲ್ಲಿ ತೊಳೆಯಬೇಕು. ಎಲ್ಲದಕ್ಕಿಂತಲೂ ಮುಖ್ಯವಾಗಿ ರಾತ್ರಿ ನಿದ್ದೆಗೆಡುವುದನ್ನು ಕಡಿಮೆ ಮಾಡಿ ಉತ್ತಮ ನಿದ್ದೆಗೆ ನಿಮ್ಮ ಪ್ರಥಮ ಆದ್ಯತೆ ನೀಡಬೇಕು. ಮಲಗುವ ಮುನ್ನ ಕನಿಷ್ಠ 15 ನಿಮಿಷವಾದರೂ ಸಾಮಾಜಿಕ ಮಾಧ್ಯಮದಿಂದ ದೂರವಿದ್ದು, ಸ್ವಲ್ಪ ಧ್ಯಾನಿಸಿ ಮಲಗುವುದು ಆರೋಗ್ಯ ದೃಷ್ಟಿಯಲ್ಲಿ ಒಂದು ಉತ್ತಮ ಸಲಹೆ ಎನ್ನಬಹುದು.

– ರಾಧಿಕಾ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next