Advertisement

ಜಲಮೂಲಗಳ ಸ್ಥಿತಿಗತಿ ತಕ್ಷಣ ತಿಳಿಸಿ: ದಿನಕರ

03:25 PM May 29, 2019 | Team Udayavani |

ಕುಮಟಾ: ತಾಲೂಕಿನಲ್ಲಿ ಜಲಮೂಲಗಳ ಕೊರತೆಯಾಗಿದೆ. ಕುಡಿಯುವ ನೀರಿನ ತುರ್ತು ಪರಿಹಾರದ ಜೊತೆಗೆ ಶಾಲೆಗಳಲ್ಲಿ ಬಿಸಿಯೂಟ ವ್ಯವಸ್ಥೆಗೂ ಉತ್ತಮ ನೀರಿನ ಸಮಸ್ಯೆ ಆಗದಂತೆ ಕಟ್ಟೆಚ್ಚರ ವಹಿಸಬೇಕು. ಕೆರೆಕಟ್ಟೆ, ಖಾಸಗಿ ಜಲಮೂಲಗಳ ಸ್ಥಿತಿಗತಿ ತಕ್ಷಣ ವರದಿ ಮಾಡಿ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.

Advertisement

ಅವರು ತಾ.ಪಂ ಸಭಾಭವನದಲ್ಲಿ ಮಂಗಳವಾರ ಬರ ಪರಿಹಾರ ಹಾಗೂ ನೆರೆ ಮುಂಜಾಗ್ರತೆ ಕುರಿತು ಪೂರ್ವಭಾವಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿ.ಪಂ ಗ್ರಾಮೀಣ ನೀರು ಪೂರೈಕೆ ವಿಭಾಗದ ಇಂಜಿನಿಯರ್‌ ರಾಘವೇಂದ್ರ ವಿಷಯ ಪ್ರಸ್ತಾಪಿಸಿ, ತಾಲೂಕಿನಲ್ಲಿ ಟ್ಯಾಂಕರ್‌ ಮೂಲಕ ಏ.9 ರಿಂದ ಕುಡಿಯುವ ನೀರು ಪೂರೈಕೆ ಆರಂಭಿಸಲಾಗಿದೆ. ಇದುವರೆಗೆ 102.7 ಲಕ್ಷ ಲೀಟರ್‌ ನೀರು ವಿತರಿಸ ಲಾಗಿದ್ದು, ತಾಲೂಕಿನ 14 ಪಂಚಾಯಿತಿಯ 20 ಗ್ರಾಮಗಳ 76 ಮಜರೆಗಳಿಗೆ 21 ಟ್ಯಾಂಕರ್‌ ಮೂಲಕ ಪ್ರತಿನಿತ್ಯ 2.7 ಲಕ್ಷ ಲೀ. ನೀರು ಕೊಡಲಾಗುತ್ತಿದೆ. ಟ್ಯಾಂಕರ್‌ ಗುತ್ತಿಗೆದಾರರಿಗೆ 14,77,835 ರೂ. ಸಂದಾಯ ಮಾಡಲಾಗಿದೆ. ಗಂಗಾವಳಿ ನೀರು ಪೂರ್ಣ ಬತ್ತಿದೆ ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ.ಕೆ. ಮಾತನಾಡಿ, ಅಘನಾಶಿನಿ ನದಿಯಲ್ಲಿ ಮರಾಕಲ್ ನೀರು ಬತ್ತುವ ಹಂತದಲ್ಲಿದೆ. ಪಟ್ಟಣದಲ್ಲಿ 5 ಟ್ಯಾಂಕರ್‌ ಮೂಲಕ ನೀರು ಹಂಚಲಾಗುತ್ತಿದೆ. ನೀರಿನ ಮೂಲಗಳ ಸಮಸ್ಯೆಯಾಗಿದೆ ಎಂದರು. ಮರಾಕಲ್ ಒಡ್ಡನ್ನು ಎರಡು ಅಡಿ ಎತ್ತರಿಸುವ ಪ್ರಸ್ತಾಪ ಮಂಡಿಸಿದರು.

ಪ್ರತಿಕ್ರಿಯಿಸಿದ ಶಾಸಕರು, ಪೈರಗದ್ದೆಯಲ್ಲಿ ಬೋರ್‌ ಕೊರೆಯಲು ಪರಿಶೀಲಿಸಿ, ಖಾಸಗಿ ಕೆರೆಗಳನ್ನು ಹುಡುಕಿ ಎಂದರಲ್ಲದೇ ಮರಾಕಲ್ ಭಾಗದಲ್ಲಿ ಮುಂದಿನ ವರ್ಷ ಮಾರ್ಚ್‌ ತಿಂಗಳಿಂದಲೇ ನಾಲ್ಕು ತಾಸು ಮಾತ್ರ ತ್ರಿಫೇಸ್‌ ಕೊಡುವ ಕ್ರಮ ಜಾರಿಯಾಗಬೇಕು. ಮರಾಕಲ್ ಒಡ್ಡನ್ನು ಎರಡು ಅಡಿ ಎತ್ತರಿಸುವುದು ತಾಂತ್ರಿಕವಾಗಿ ಸಾಧುವಲ್ಲ ಎಂದರು.

ಶಾಲೆಗಳಲ್ಲಿ ಬಿಸಿಯೂಟಕ್ಕೆ ನೀರಿನ ಕೊರತೆ ಸಂಬಂಧಿಸಿ ಬಿಇಒ ಕಚೇರಿಗೆ ಅಕ್ಷರ ದಾಸೋಹದಿಂದ 3 ಬಾರಿ ಪತ್ರ ಬರೆದರೂ ಉತ್ತರವಿಲ್ಲ ಎಂದು ತಾಪಂ ಇಓ ಸಿ.ಟಿ. ನಾಯ್ಕ ತಿಳಿಸಿದರು.

Advertisement

ನಾಳೆಯಿಂದ ಶಾಲೆ ಆರಂಭವಾಗುತ್ತಿದೆ. ಬಿಆರ್‌ಪಿ, ಸಿಆರ್‌ಪಿಗಳಿಂದ ಸ್ಪಷ್ಟ ಮಾಹಿತಿ ಪಡೆಯಬೇಕಾಗಿತ್ತು. ಬಿಸಿಯೂಟಕ್ಕೆ ಉತ್ತಮ ನೀರಿನ ಪೂರೈಕೆಯಾಗಬೇಕು. ಇದು ಗಂಭೀರ ವಿಷಯ ಎಂದು ಶಾಸಕರು ತಿಳಿಸಿದರು.

ಬಳಿಕ ನೆರೆ ಮುಂಜಾಗ್ರತಾ ಕ್ರಮದ ಕುರಿತು ನಡೆದ ಚರ್ಚೆಯಲ್ಲಿ ಮುಖ್ಯವಾಗಿ ಚತುಷ್ಪಥ ಕಾಮಗಾರಿಯಿಂದ ಮಳೆಯ ನೀರಿನ ಹರಿವಿಗೆ ಅಲ್ಲಲ್ಲಿ ಸಮಸ್ಯೆಯಾಗಲಿದೆ. ಈಗಾಗಲೇ ದುಂಡಕುಳಿ ಬಳಿ ಹೆದ್ದಾರಿ ಕಾಮಗಾರಿಗಾಗಿ ಕಡಿದ ಗುಡ್ಡ ಕುಸಿದು ಹಲವಾರು ವಿದ್ಯುತ್‌ ಕಂಬಗಳು ಬಿದ್ದು ಹಾನಿಯಾಗಿದೆ. ಇದೇರೀತಿ ದಿವಗಿ ಬಳಿ ಹೈಟೆನ್ಷನ್‌ ವಿದ್ಯುತ್‌ ಲೈನ್‌ ಕಂಬವೂ ಅಪಾಯದಲ್ಲಿದೆ. ತಂಡ್ರಕುಳಿಯಲ್ಲೂ ಗುಡ್ಡ ಕುಸಿತದ ಭೀತಿ ಇದೆ. ಚತುಷ್ಪಥ ಕಾಮಗಾರಿಗಾಗಿ ಹೆಗಡೆ-ತಾರಿಬಾಗಿಲ ನಡುವೆ ಚತುಷ್ಪಥ ಕಾಮಗಾರಿ ಮಾಡಿದ್ದರೆ ಇಷ್ಟೆಲ್ಲ ಸಮಸ್ಯೆಗಳೇ ಇರುತ್ತಿರಲಿಲ್ಲ, ಮಾದನಗೇರಿ-ಉಳುವರೆ‌ ಬಳಿಯೂ ಸೇತುವೆ ಮಾಡಿದ್ದರೆ ಹೆಚ್ಚು ವೈಜ್ಞಾನಿಕವಾಗಿರುತ್ತಿತ್ತು. ಹೆದ್ದಾರಿ ಸಂಚಾರದ ಅಂತರವೂ ಬಹಳ ಕಡಿಮೆಯಾಗುತ್ತಿತ್ತು. ಅಪಘಾತಗಳು ಕಡಿಮೆಯಾಗುತ್ತಿತ್ತು. ಈಗ ಏನೂ ಮಾಡುವಂತಿಲ್ಲ. ಸದ್ಯ ಚತುಷ್ಪಥ ಕಾಮಗಾರಿ ಸಮಸ್ಯೆಗಳ ಬಗ್ಗೆ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆಯವರಿಗೆ ಪತ್ರ ಬರೆದಿದ್ದೇನೆ ಎಂದರು.

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ನಾಥ ನಾಯ್ಕ, ತಹಶೀಲ್ದಾರ್‌ ಪ್ರಮೀಳಾ ದೇಶಪಾಂಡೆ, ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next