Advertisement

ನಮೋ ಸಾಧನೆ ಎಲ್ಲರಿಗೂ ತಿಳಿಸಿ

04:47 PM Oct 10, 2018 | Team Udayavani |

ದಾವಣಗೆರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿಸ್ವಾರ್ಥ ಆಡಳಿತದ ಮೂಲಕ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪರಿಚಯಿಸುವ ಕೆಲಸ ಪಕ್ಷದ ಎಲ್ಲಾ ಕಾರ್ಯಕರ್ತರು ಮಾಡಬೇಕಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಹೇಳಿದರು.

Advertisement

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಫಸಲ್‌ ಬಿಮಾ, ಉಚಿತ ಸಿಲಿಂಡರ್‌, ಮುದ್ರಾ, ಜನಧನ್‌ ಸೇರಿದಂತೆ 40ಕ್ಕೂ ಹೆಚ್ಚು 50 ಜನಪರ ಯೋಜನೆಗಳನ್ನು ಪ್ರಧಾನಿ ಮೋದಿಯವರು ಅನುಷ್ಠಾನಕ್ಕೆ ತಂದಿದ್ದಾರೆ. ಅವುಗಳ ಬಗ್ಗೆ ಬಹುತೇಕ ಜನರಿಗೆ ತಿಳಿದೇ ಇಲ್ಲ. ಹಾಗಾಗಿ ಮೋದಿ ಅವರ ಸಾಧನೆ ಕುರಿತ ಕೈಪಿಡಿಯೊಂದಿಗೆ ಎಲ್ಲಾ ಜನಸಾಮಾನ್ಯರಿಗೂ ಪರಿಚಯಿಸುವ ಕೆಲಸವನ್ನು ಒಗ್ಗಟ್ಟಿನಿಂದ ಮಾಡಬೇಕು ಎಂದರು.

ದೇಶದಲ್ಲಿ 1,000, 500 ರೂ. ಮುಖಬೆಲೆ ಕರೆನ್ಸಿ ಬ್ಯಾನ್‌ ಮಾಡಿ ಭ್ರಷ್ಟ ಕುಳಗಳಿಗೆ ಕಡಿವಾಣ ಹಾಕಿದ್ದಾರೆ. ವಿದ್ಯಾರ್ಥಿಗಳಿಗಾಗಿ ಮುದ್ರಾ ಯೋಜನೆ ಜಾರಿಗೆ ತಂದು 10ರಿಂದ 25 ಲಕ್ಷದವರೆಗೆ ಯಾವುದೇ ಶ್ಯೂರಿಟಿ ಇಲ್ಲದೆ ಶೈಕ್ಷಣಿಕ ಸಾಲ ಸಿಗುವಂತೆ ಮಾಡಿದ್ದಾರೆ. ಜನ್‌ಧನ್‌ ಮೂಲಕ ಎಲ್ಲರಿಗೂ ಬ್ಯಾಂಕ್‌ ಖಾತೆ ಹೊಂದುವಂತಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇವಲ 2 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರಿಗಿಂತ ಶ್ರೀಮಂತ ಮುಖ್ಯಮಂತ್ರಿ ಆಗಿದ್ದವರು. ನಿಸ್ವಾರ್ಥ ರಾಜಕಾರಣಿ ಬಗ್ಗೆ ಕಾಂಗ್ರೆಸ್‌, ಜಿಡಿಎಸ್‌ ನವರು ಇಲ್ಲಸಲ್ಲದ ಆರೋಪ ಮಾಡುತ್ತಾ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು. 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸೋಲಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಅವರ ತಂದೆ ಎಚ್‌.ಡಿ. ದೇವೇಗೌಡರೇ ಕಾರಣ ಎಂಬುದು ಗೊತ್ತಿದ್ದರೂ ಸುಮ್ಮನೆ ನಾಟಕದ ರಾಜಕಾರಣ ಮಾಡುತ್ತಿದ್ದಾರೆ. ನಿರ್ದಿಷ್ಟ ತತ್ವ, ಸಿದ್ಧಾಂತ, ಅಭಿವೃದ್ಧಿ ಇವ್ಯಾವುದರ ಬಗ್ಗೆ ಚಿಂತಿಸದೇ ಕೇವಲ ಅಧಿಕಾರಕ್ಕಾಗಿ ಹುನ್ನಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು. 

Advertisement

ಲೋಕಸಭಾ ಚುನಾವಣೆಗೆ ಕೇವಲ 5 ತಿಂಗಳು ಬಾಕಿ ಇದೆ. ಲೋಕಸಭೆ ನಂತರ ಪಾಲಿಕೆ ಚುನಾವಣೆ ನಡೆಯಬಹುದು. ಹಾಗಾಗಿ ನಾಳೆಯೇ ಲೋಕಸಭೆ ಚುನಾವಣೆ ಎಂದುಕೊಂಡು ಪಕ್ಷದ ಕಾರ್ಯಕರ್ತರು ಪ್ರತಿ ಬೂತ್‌ ಮಟ್ಟದಲ್ಲೂ, ಮನೆ ಮನೆಗೂ ಭೇಟಿ ನೀಡಿ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿಸಬೇಕು. ತಮ್ಮಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಕಾರ್ಯಕರ್ತರು ಕೆಲಸ ಮಾಡಬೇಕು ಎಂದರು.

ಮುಖಂಡ ಎಚ್‌.ಎಸ್‌. ನಾಗರಾಜ್‌ ಮಾತನಾಡಿ, ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6ರಲ್ಲಿ ಬಿಜೆಪಿ ಬಹುಮತ ಹೊಂದಿದೆ ಎಂಬುದಾಗಿ ಭಾವಿಸಿದರೆ ಅಪಾಯ ತಪ್ಪಿದ್ದಲ್ಲ. ಬಲಿಷ್ಠ ಅಂದುಕೊಂಡವರನ್ನೂ ಕೂಡ ಮತದಾರರು ಮನೆಗೆ ಕಳಿಸಿದ್ದಾರೆ. ಹಾಗಾಗಿ ಮೈ ಮರೆಯದೇ ಪಕ್ಷದ ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಜಯಕ್ಕಾಗಿ ಹಗಲಿರುಳು ಶ್ರಮಿಸಬೇಕು ಎಂದರು. 

ಡಿ.ಎಸ್‌. ಶಿವಶಂಕರ್‌ ಮಾತನಾಡಿ, ಭ್ರಷ್ಟಾಚಾರ, ಭಯೋತ್ಪಾದನೆ, ಕಪ್ಪುಹಣ ದಂಧೆಕೋರರಿಗೆ ಕಡಿವಾಣ ಹಾಕಲು ಮೋದಿಯವರು ರೂಪಿಸಿದ ತಂತ್ರ ಯಶಸ್ವಿಯಾಗಿದೆ. ನೋಟ್‌ಬ್ಯಾನ್‌ನಿಂದಾಗಿ ಸಾವಿರಾರು ಕೋಟಿ ಹಣ ವಾಪಸ್‌ ಬಂದಿದೆ. ಉದ್ಯಮಿಗಳಾದ ವಿಜಯ್‌ಮಲ್ಯ, ನೀರವ್‌ ಮೋದಿಗೆ ಸಾಲ ಕೊಟ್ಟಿದ್ದು ಕಾಂಗ್ರೆಸ್‌ ನೇತೃತ್ವದ ಸರ್ಕಾರವೇ ಹೊರತು ಬಿಜೆಪಿಯದ್ದಲ್ಲ. ಬ್ಯಾಂಕ್‌ನಲ್ಲಿ ಸಾಲಮಾಡಿ ಕಣ್ತಪ್ಪಿಸಿಕೊಳ್ಳುವವರನ್ನು ಸರ್ಕಾರ ಮಟ್ಟ ಹಾಕದೇ ಬಿಟ್ಟಿಲ್ಲ ಎಂದು ಹೇಳಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್‌ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜನಹಳ್ಳಿ ಶಿವಕುಮಾರ್‌, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶ್ರೀನಿವಾಸ್‌, ಎಚ್‌.ಎನ್‌. ಶಿವಕುಮಾರ್‌, ಎಲ್‌.ಡಿ. ಗೋಣೆಪ್ಪ, ಮುಖಂಡರಾದ ಬಿ.ಎಂ. ಸತೀಶ್‌, ಎಚ್‌. ಎಂ. ರುದ್ರಮುನಿ ಸ್ವಾಮಿ, ಪ್ರಭಾ ಕಲಬುರ್ಗಿ, ಇತರರು ಸಭೆಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next