ಕೊಪ್ಪಳ: ಕಾಂಗ್ರೆಸ್‌ನಲ್ಲಿ ಪ್ರಧಾನಿ ಅಭ್ಯರ್ಥಿ ಹೆಸರು ಯಾರು ಹೇಳಿ ನೋಡೋಣ. ನಿಮ್ಮಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ಲ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕಾಂಗ್ರೆಸ್‌ಗೆ ಲೇವಡಿ ಮಾಡಿದರು.
ಕೊಪ್ಪಳದಲ್ಲಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಅಭ್ಯರ್ಥಿ ಡಾ. ಬಸವರಾಜ ಪರ ಪ್ರಚಾರ ನಡೆಸಿ ಮಾತನಾಡಿ, ಕಾಂಗ್ರೆಸ್‌ಗೆ ಪ್ರಾಮಾಣಿಕತೆ ಇದ್ದರೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಬೇಕು. ಚುನಾವಣೆಯಲ್ಲಿ ಕಾಂಗ್ರೆಸ್ ಹಣ, ತೋಳ್ಬಲ, ಮದ್ಯ, ಅಧಿಕಾರ ನಡೆಯಲ್ಲ. ಕಳೆದ 10 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ರಾಮವಿಲ್ಲದೇ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ವಿದೇಶಗಳನ್ನು ಸುತ್ತುತ್ತಿದ್ದಾರೆ. ಮೋದಿ ಅವರ ಕಾರ್ಯ ವೈಖರಿ ನೋಡಿ, ಜನರು ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಬೇಕು ಎಂದರು.
ದೇಶದಲ್ಲಿ ಶ್ರೀರಾಮ ನವಮಿ ನಡೆದಿದೆ. ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ 5೦೦ ವರ್ಷಗಳ ಹೋರಾಟ, ತ್ಯಾಗ ಬಲಿದಾನ ನಡೆದಿವೆ. ಆ ಹೋರಾಟದ ಫಲವೇ ಅಯೋಧ್ಯೆಯಲ್ಲಿ ಶ್ರೀರಾಮನ ಪೂಜೆಯು ನಡೆದಿದೆ. ರಾಮ ಮಂದಿರಕ್ಕಾಗಿ ಹೋರಾಡಿದ ಎಲ್ಲ ಭಕ್ತರಿಗೂ ನಮಿಸುವೆ ಎಂದರು.
ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮೋದಿ ಅವರ ಸಾಧನೆ ತಿಳಿಸಬೇಕು. ಕಾಂಗ್ರೆಸ್‌ನತ್ತ ಮುಖ ಮಾಡುವ ಜನರನ್ನು ಬಿಜೆಪಿ ಕಡೆ ಕರೆ ತರಬೇಕು. ದೇಶದಲ್ಲಿ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಒಂದಾಗಿದ್ದಾರೆ. ಎಲ್ಲೆಡೆಯೂ ಮೋದಿ ಪರ ಘೋಷಣೆ ಮೊಳಗುತ್ತಿವೆ. ಕೊಪ್ಪಳದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಗೆದ್ದರೆ ಕ್ಷೇತ್ರದ ಅಭಿವೃದ್ಧಿಯಾಗಲಿದೆ.
ಕೊಪ್ಪಳ ಮಾದರಿ ಜಿಲ್ಲೆಯನ್ನಾಗಿಸಲು ನಾನು ಶ್ರಮಿಸುವೆ. ನನಗೆ ಶಿಕಾರಿಪುರದಲ್ಲಿ ಸ್ವಾಗತ ಕೋರಿದಂತೆ ಇಲ್ಲಿಯೂ ಅದ್ಧೂರಿ ಸ್ವಾಗತ ಕೋರಿದ್ದೀರಿ. ಬಿಜೆಪಿ ಅಭ್ಯರ್ಥಿ2 ಲಕ್ಷ ಮತಗಳ ಅಂತರದಿಂದ ಗೆಲುವು ಕಾಣಲಿದ್ದಾರೆ. ಈ ಲೋಕಸಭಾ ಚುನಾವಣಾ ಮುಗಿಯುವ ವರೆಗೂ ಮನೆ ಮನೆಗೂ ಹೋಗಿ ಪ್ರಚಾರ ಮಾಡಿ, ಆಗ 5 ವರ್ಷ ಜನರು ನೆಮ್ಮದಿಯಿಂದಇರಲು ಸಾಧ್ಯವಿದೆ ಎಂದರು.