Advertisement

ಮೌಲ್ಯಗಳ ಸುಳಿವೇ ಇಲ್ಲದ ಧಾರಾವಾಹಿಗಳು

06:00 AM Dec 17, 2017 | |

ಮಹಿಳೆಯರು ದೇಶಕ್ಕಾಗಿ ತಮ್ಮ ಜೀವವನ್ನೇ ಒತ್ತೆ ಇಟ್ಟು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯುಗದಲ್ಲಿ ಇನ್ನೂ ಅವರನ್ನು ಕೈಲಾಗದವಳಂತೆ, ತ್ಯಾಗದ ಹೆಸರಿನಲ್ಲಿ ಹಿಂಸೆ ಅನುಭವಿಸುವ ಅಬಲೆಯಂತೆ ತೋರಿಸುವ ಧಾರಾವಾಹಿಗಳ ನಿರ್ದೇಶಕರು ಎಚ್ಚೆತ್ತುಕೊಳ್ಳಬೇಕಾಗಿದೆ.

Advertisement

ಹಿಂದಿನ ಕಾಲದಲ್ಲಿ ಸಂಜೆಯಾದರೆ ಮನೆ ಮಂದಿಯೆಲ್ಲ ಕುಳಿತು ದೇವರ ಭಜನೆಗಳನ್ನು ಹಾಡುವ ಸಂಪ್ರದಾಯವಿತ್ತು. ಅದು ಕೇವಲ ಸಂಪ್ರದಾಯವಷ್ಟೆ ಅಲ್ಲದೆ ವೈಜ್ಞಾನಿಕವಾಗಿ ಮಾನಸಿಕ ಆರೋಗ್ಯಕ್ಕೂ ಒಳಿತೆನ್ನುತ್ತಾರೆ. ಸಂಧ್ಯಾಕಾಲದಲ್ಲಿ ದೇವರ ಸ್ಮರಣೆಯನ್ನು ಮಾಡುವುದರಿಂದ ಮನಸ್ಸಿನಲ್ಲಿ ಧನಾತ್ಮಕ ಅಂಶ ಹುಟ್ಟುತ್ತದೆ ಎಂಬ ನಂಬಿಕೆ ಇದೆ. ಕೆಲ ಸಮಯ ದೇವರ ಧ್ಯಾನ ಮಾಡುವುದರಿಂದ ಇಡೀ ದಿನದ ಆಯಾಸ, ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಮನೆಯ ಹಿರಿಯರು ಈ ಆಚರಣೆಗಳನ್ನು ಪಾಲಿಸುವುದರಿಂದ ಮಕ್ಕಳಲ್ಲಿ ಕೂಡ ಈ ಬಗೆಯ ಸಂಸ್ಕಾರಗಳು ರೂಢಿಯಾಗುತ್ತವೆ. ಆದರೆ ಈಗ ಮುಂಜಾನೆ ಆರು ಗಂಟೆಯಿಂದ ಆರಂಭವಾಗುವ ಧಾರಾವಾಹಿಗಳು ಭಜನೆಯ ಸಮಯವನ್ನು ಕಬಳಿಸಿವೆ. 

ಈ ಧಾರಾವಾಹಿಗಳಾದರೋ ಕೇವಲ ಋಣಾತ್ಮಕ ದೃಶ್ಯಗಳನ್ನು ತೋರಿಸಿ, ಸಾವು ನೋವುಗಳನ್ನು ವೈಭವೀಕರಿಸಿ ಅತಿರೇಕವೆನ್ನುವಂತೆ ಬಿಂಬಿಸುತ್ತಿವೆ. ದೃಶ್ಯ ಮಾಧ್ಯಮಗಳ ಆದ್ಯ ಉದ್ದೇಶ ಜನರ ಮನೋರಂಜನೆಯಷ್ಟೇ ಅಲ್ಲದೆ ಉತ್ತಮವಾದ ಮತ್ತು ಆರೋಗ್ಯಕರ ಸಮಾಜವನ್ನು ಸೃಷ್ಟಿಸುವುದೂ ಆಗಿರಬೇಕು. 

ಇಂದು ನೂರಾರು ಚಾನೆಲುಗಳಿವೆ ಮತ್ತು ಅವುಗಳಲ್ಲಿ ನಿರಂತರವಾಗಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುತ್ತವೆ. ಚಾನೆಲುಗಳ ನಡುವೆ ತೀವ್ರ ಪೈಪೋಟಿ ಇರುವುದು ಸಹಜ. ಆದರೆ ಈ ಪೈಪೋಟಿಯು ಉತ್ತಮ ಮೌಲ್ಯಗಳುಳ್ಳ ಕಾರ್ಯಕ್ರಮಗಳ ಪ್ರಸಾರದಲ್ಲಿ ಬಳಕೆಯಾಗದೆ, ಕೇವಲ ಟಿಆರ್‌ಪಿಯನ್ನು ಗಳಿಸುವ ಸಲುವಾಗಿ ನಡೆಸುವ ರೇಸಿನ ಭಾಗವಾಗಿದೆ. ಸಮಾಜದ ಆರೋಗ್ಯಕ್ಕೆ ಕಂಟಕವಾಗಬಲ್ಲ ಅಂಶಗಳನ್ನು ಅನಗತ್ಯವಾಗಿ ವೈಭವೀಕರಿಸಿ ಹತ್ತು ಹಲವಾರು ಸಂಚಿಕೆಗಳಲ್ಲಿ ಎಳೆಯಲಾಗುತ್ತದೆ. ಅವುಗಳನ್ನು ವೀಕ್ಷಿಸುವ ಹಿರಿಯರಷ್ಟೇ ಅಲ್ಲದೆ ಚಿಕ್ಕಮಕ್ಕಳ ಮೇಲೂ ಪರಿಣಾಮವಾಗುತ್ತದೆ. ಇತ್ತೀಚೆಗಷ್ಟೇ ಪತ್ರಿಕೆಯೊಂದರಲ್ಲಿ ವರದಿಯಾದಂತೆ 7 ವರ್ಷದ ಮಗು ಧಾರಾವಾಹಿಯ ದೃಶ್ಯವನ್ನು ಅನುಕರಣೆ ಮಾಡಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದೆ. ಇಂತಹ ಅತಿರೇಕದ ದೃಶ್ಯಗಳನ್ನು ತೋರಿಸುವುದರಿಂದ ಮಕ್ಕಳ ಮುಗ್ಧ ಮನಸ್ಸಿನ ಮೇಲೆ ವ್ಯತಿರಿಕ್ತವಾದ ಪರಿಣಾಮವಾಗುತ್ತದೆ ಎನ್ನುವುದು ಸತ್ಯ.

ಮಾಧ್ಯಮಗಳು ಜನರಲ್ಲಿ ಅವಶ್ಯಕ ಮೌಲ್ಯಗಳನ್ನು ಬೆಳೆಸುವ ಕಾರ್ಯಕ್ರಮಗಳನ್ನು ಮಾಡಬೇಕೇ ವಿನಃ ಮೌಡ್ಯಗಳನ್ನು, ಹಿಂಸೆಯನ್ನು, ದ್ವೇಷಾದಿ ನಕಾರಾತ್ಮಕ ಭಾವನೆಗಳನ್ನು ಹುಟ್ಟುವಂತೆ ಮಾಡುವುದು ಸಮಂಜಸವಲ್ಲ. ಇನ್ನು ಈಗಿನ ಧಾರಾವಾಹಿಗಳಲ್ಲಂತೂ ಉತ್ತಮ ಮೌಲ್ಯಗಳು ಹುಡುಕಿದರೂ ಕಾಣಸಿಗುವುದಿಲ್ಲ. ಧಾರಾವಾಹಿಗಳು ವೀಕ್ಷಕರ ಚಿಂತೆಗಳನ್ನು ಮರೆಸಿ ಸ್ವಲ್ಪಮಟ್ಟಿನ ಮನೋರಂಜನೆಯನ್ನು ಒದಗಿಸುವುದರೊಂದಿಗೆ ಕೆಲವಷ್ಟಾದರೂ ಮೌಲ್ಯಗಳನ್ನು ತುಂಬುವಂತಿರಬೇಕು. ಆದ್ದರಿಂದ ನಾವು ನೋಡುವ ಕಾರ್ಯಕ್ರಮಗಳು ಸಮಾಜಕ್ಕೆ ಏನನ್ನು ತಿಳಿಸ ಬಯಸುತ್ತಿವೆ ಎಂಬುದನ್ನು ಅರಿತು ಆಯ್ಕೆಮಾಡುವುದು ಒಳ್ಳೆಯದು. ಇದು ವ್ಯಕ್ತಿಗತ ವಿಚಾರವಾಗಿದ್ದರೂ ಸಮಾಜದ ಸ್ವಾಸ್ಥ್ಯಕ್ಕೂ ಸಂಬಂಧಿಸಿದೆ. ಆರೋಗ್ಯಕರವಾದ ಮನರಂಜನೆಯನ್ನಷ್ಟೇ ಆಯ್ಕೆ ಮಾಡುವುದು ಸೂಕ್ತವಾದುದು. 

Advertisement

ಸಮಾಜದಲ್ಲಿ ನಡೆಯುವ ಹಿಂಸೆ, ಅನೈತಿಕ ಸಂಬಂಧಗಳು ಇವುಗಳನ್ನೇ ಕತೆಯನ್ನಾಗಿಸಿಕೊಂಡು ಅವುಗಳಿಂದಾಗುವ ಅನಾಹುತಗಳನ್ನು ತಿಳಿಸುವುದು ಧಾರಾವಾಹಿಗಳ ಉದ್ದೇಶ ಎಂಬ ಸಮರ್ಥನೆ ಸರಿ. ಆದರೆ ಅವುಗಳು ಸಮಾಜದಲ್ಲಿ ಹೇಗೆ ಸ್ವೀಕೃತವಾಗುತ್ತಿವೆ ಎಂಬುದನ್ನು ಅರಿಯುವುದು ಕೂಡ ಮುಖ್ಯ. ನೈಜ ಜೀವನಕ್ಕೆ ಸಂಬಂಧವಿಲ್ಲದ, ಅಸಾಧ್ಯವೆಂಬಂತಹ ದೃಶ್ಯಗಳನ್ನು ತೋರಿಸಿ ಜನರಲ್ಲಿ ತಪ್ಪು ತಿಳುವಳಿಕೆಯನ್ನು ತುಂಬುವುದು ಸರಿಯಲ್ಲ. ಈ ಹಿಂದೆ ಕೂಡ ಜೀವನದಲ್ಲಿ ಎದುರಿಸುವ ಸಾಮಾನ್ಯ ಸಮಸ್ಯೆಗಳನ್ನು ಕಥೆಯನ್ನಾಗಿಸಿದ ಧಾರಾವಾಹಿಗಳು ಬಂದಿವೆ. ಆದರೆ ಅವುಗಳಿಗೂ ಇಂದಿನವುಗಳಿಗೂ ಇರುವ ವ್ಯತ್ಯಾಸವೆಂದರೆ ಇಂದು ಈ ಸಮಸ್ಯೆಗಳನ್ನು ವಿಪರೀತ ವೈಭವೀಕರಿಸುವ ದೃಶ್ಯಗಳನ್ನು ತೋರಿಸಲಾಗುತ್ತದೆ. ಯಾವುದೇ ಕಾರ್ಯಕ್ರಮ ಎಷ್ಟು ಸಮಯ ಜನರ ಮನಸ್ಸಿನಲ್ಲಿ ಉಳಿದಿದೆ ಎನ್ನುವುದು ಅದರ ಯಶಸ್ಸನ್ನು ನಿರ್ಧರಿಸುತ್ತದೆಯೇ ಹೊರತು ಎಷ್ಟು ಸಾವಿರ ಕಂತುಗಳಲ್ಲಿ ನಡೆದಿದೆ ಎನ್ನುವ ಮಾನದಂಡದಿಂದಲ್ಲ. 

ಕೇವಲ ಟಿಆರ್‌ಪಿಗೋಸ್ಕರ ಅನಗತ್ಯವಾಗಿ ಒಂದು ಕಂತಿಡೀ ಕಣ್ಣೀರನ್ನೇ ತೋರಿಸುವುದರಿಂದ ವೀಕ್ಷಕರನ್ನು ಖುಷಿಪಡಿಸಲು ಸಾಧ್ಯವಿಲ್ಲ. ಕಾರ್ಯಕ್ರಮಗಳ ಕೆಲವು ಭಾಗಗಳಾದರೂ ನಮ್ಮ ನಾಡಿನ ಸಂಸ್ಕೃತಿ, ಆಚಾರ ವಿಚಾರಗಳನ್ನು ಬಿಂಬಿಸುವ ಕಾರ್ಯಕ್ರಮಗಳಿಗೆ ಮೀಸಲಾಗಿಡುವುದು ಇಂದಿನ ಕಾಲದಲ್ಲಿ ಅತ್ಯಂತ ಅವಶ್ಯಕವಾಗಿದೆ. ಕೆಲವು ಚಾನೆಲ್ಲುಗಳಲ್ಲಿ ಕನಿಷ್ಟ ಪಕ್ಷ ಅರ್ಧ ತಾಸಿನ ವಾರ್ತೆ ಹಾಕುವಷ್ಟು ಟೈಮ್‌ ಸ್ಲಾಟ್‌ ಇಲ್ಲದಂತೆ ಧಾರವಾಹಿಗಳು ತುಂಬಿವೆ. ಸಾಂಪ್ರದಾಯಿಕ ನೃತ್ಯಗಳು, ದೇಗುಲಗಳ ದರ್ಶನಗಳು, ಮಕ್ಕಳ ದಿನಾಚರಣೆ, ಶಿಕ್ಷಕರ ದಿನಾಚರಣೆ, ಸ್ವಾತಂತ್ರÂ ದಿನಾಚರಣೆ ಇನ್ನಿತರ ರಾಷ್ಟ್ರೀಯ ಮತ್ತು ನಾಡಹಬ್ಬಗಳ ಕುರಿತಾದ ಕಾರ್ಯಕ್ರಮಗಳು ಎÇÉಾ ಚಾನೆಲ್ಲುಗಳ ಶೆಡ್ನೂಲಿನ ಚಿಕ್ಕ ಭಾಗವಾದರೂ ಆಗಬೇಕಿದೆ.
ಇನ್ನೊಂದು ದೃಷ್ಟಿಯಿಂದ ನೋಡಿದರೆ ವೀಕ್ಷಕನೂ ಇದಕ್ಕೆ ಕಾರಣ ಎನ್ನಬಹುದಾಗಿದೆ. ಏಕೆಂದರೆ ಯಾವುದಾದರೂ ಐತಿಹಾಸಿಕ ಅಥವಾ ಪೌರಾಣಿಕ ಕಥೆಗಳನ್ನು ಧಾರಾವಾಹಿ ರೂಪಕ್ಕೆ ತಂದಾಗ ಅವುಗಳನ್ನು ವೀಕ್ಷಿಸುವವರ ಸಂಖ್ಯೆ ಬಹಳ ಕಡಿಮೆ. ಅವುಗಳು ನಿರೀಕ್ಷಿತ ಟಿಆರ್‌ಪಿ ಪಡೆಯಲು ವಿಫ‌ಲವಾದ ಅನೇಕ ಉದಾಹರಣೆಗಳಿವೆ. ಎಳೆಯರು ಬಿಡಿ ಹಳಬರು ಕೂಡ ಅವುಗಳನ್ನು ನೋಡಲಿಚ್ಛಿಸದ ಕಾಲ ಇದು. 

ಈಗ ಹಬ್ಬಗಳ ಸಂದರ್ಭಗಳಲ್ಲಿ ಹಾಕುವ ಪೌರಾಣಿಕ ಸಿನೆಮಾಗಳನ್ನು ನೋಡುವವರಿಗಿಂತ ಧಾರಾವಾಹಿ ನಟನಟಿಯರ ಹಬ್ಬದ ಆಚರಣೆಯ ಕಾರ್ಯಕ್ರಮವನ್ನು ನೋಡುವವರೇ ಅಧಿಕವಾಗಿ¨ªಾರೆ. ಸಸ್ಪೆನ್ಸ್‌ ಸೃಷ್ಟಿಸುವ ಭರದಲ್ಲಿ ಎಂದಿಗೂ ಬಗೆಹರಿಯದ ಸಮಸ್ಯೆಗಳನ್ನು ತೋರಿಸುತ್ತಾ ಬರುವ ಕಥೆಗಳು ಮನೋರಂಜನೆ ಕೊಡುವುದಿಲ್ಲ. ಮಹಿಳೆಯರು ದೇಶಕ್ಕಾಗಿ ತಮ್ಮ ಜೀವವನ್ನೆ ಒತ್ತೆ ಇಟ್ಟು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯುಗದಲ್ಲಿ ಇನ್ನೂ ಅವರನ್ನು ಕೈಲಾಗದವಳಂತೆ ತ್ಯಾಗದ ಹೆಸರಿನಲ್ಲಿ ಹಿಂಸೆ ಅನುಭವಿಸುವ ಅಬಲೆಯಂತೆ ತೋರಿಸುವ ಧಾರಾವಾಹಿಗಳ ನಿರ್ದೇಶಕರು ಎಚ್ಚೆತ್ತುಕೊಳ್ಳಬೇಕಾಗಿದೆ. ಈ ಮಾದರಿಯ ಧಾರಾವಾಹಿಗಳನ್ನು ನೋಡುವಾಗ ಜುಗುಪ್ಸೆ ಹುಟ್ಟುತ್ತದೆ.
 
ದೇಶಪ್ರೇಮವನ್ನು ಬೆಳೆಸುವ, ದೇಶಭಕ್ತಿಯನ್ನು ಪ್ರಚೋದಿಸುವ ಧಾರಾವಾಹಿಗಳು ಯಾವಾಗ ಸ್ಥಾನ ಪಡೆಯುತ್ತವೆಯೋ ಗೊತ್ತಿಲ್ಲ. ವೀಕ್ಷಕರ ಮನೋಭಾವ ಬದಲಾಗಬೇಕಿದೆ ಹಾಗೂ ಜನರನ್ನು ಆಕರ್ಷಿಸುವ ಆರೋಗ್ಯಕರವಾದ ಕಾರ್ಯಕ್ರಮಗಳ ನಿರ್ಮಾಣದ ಅವಶ್ಯಕತೆಯಿದೆ. ಅಷ್ಟೇ ಅಲ್ಲದೆ ಧಾರಾವಾಹಿಗಳಿಗೆ ಕಂತುಗಳ ಮಿತಿ ವಿಧಿಸುವುದು ವಿಹಿತ. ನಿಯಮಿತ ಸಮಯದಲ್ಲಿ ಅವರ ಉದ್ದೇಶಿತ ಕತೆ ಜನರನ್ನು ತಲುಪಲು ಸಹಾಯಕವಾಗುತ್ತದೆ. ಇಲ್ಲದಿದ್ದರೆ ಒಂದು ಮೌಲ್ಯವನ್ನಿಟ್ಟುಕೊಂಡು ಆರಂಭವಾದ ಕಥೆ ಮುಗಿಯುವಾಗ ಎಲ್ಲಿಯೋ ಹೋಗಿ ತಲುಪಿ ಮೂಲ ಮೌಲ್ಯ ಮಾಯವಾಗಿರುತ್ತವೆ. ಮೌಲ್ಯಾಧಾರಿತ ಮನರಂಜನೆಯಿಂದ ಮಾಧ್ಯಮ ಮತ್ತು ಸಮಾಜದ ಸ್ವಾಸ್ಥ್ಯ ಸಾಧ್ಯ. 

– ಪ್ರಭಾ ಭಟ್‌, ಆತ್ರಾಡಿ 

Advertisement

Udayavani is now on Telegram. Click here to join our channel and stay updated with the latest news.

Next