ಉಡುಪಿ: ವಿದ್ಯಾರ್ಥಿಗಳು ಬದುಕಿಗೊಂದು ಸ್ಪಷ್ಟ ಗುರಿ, ದೂರ ದೃಷ್ಟಿಯನ್ನಿಟ್ಟುಕೊಂಡು ಅದರತ್ತ ಸಾಗುವ ನಿರ್ಧಾರ ತೆಗೆದುಕೊಂಡರೆ ಮಾದಕ ವ್ಯಸನದಂಥ ಆಕರ್ಷಣೆಗಳಿಗೆ ಒಳಗಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ, ಎಂಜಿಎಂ ಕಾಲೇಜು, ಮಹಾತ್ಮಾಗಾಂಧಿ ಸ್ಮಾರಕ ನಿಧಿ ಎಂಜಿಎಂ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಎಂಜಿಎಂ ಕಾಲೇಜಿನಲ್ಲಿ ಜರಗಿದ ವಿಶ್ವ ಮಾದಕ ವಸ್ತು ವಿರೋಧಿ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ಮಾರುಕಟ್ಟೆ ಅಥವಾ ಸರಕು ಸಂಸ್ಕೃತಿ ಯುವಜನರನ್ನು ಕೇವಲ ಗ್ರಾಹಕರನ್ನಾಗಿ ನೋಡುತ್ತಿದೆ. ಮಾದಕ ವಸ್ತುಗಳ ಮಾರಾಟ ದಂಧೆಗೆ ವಿದ್ಯಾರ್ಥಿಗಳೇ ಸುಲಭದ ಗ್ರಾಹಕರು. ಕ್ಷಣಿಕ ಸುಖಕ್ಕಾಗಿ ಒಮ್ಮೆ ಅದರತ್ತ ವಾಲಿದರೆ ಅನಂತರ ಬದುಕು ಕೈಮೀರಿ ಹೋಗುವ ಅಪಾಯವಿದೆ. ಬದುಕಿನ ನಿರ್ಣಾಯಕ ಘಟ್ಟವಾದ ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯ ಜತೆಗೆ ಸಮಾಜಮುಖೀ ಚಿಂತನೆ ಕೂಡ ಬೆಳೆಸಿಕೊಳ್ಳಬೇಕು. ಒಳ್ಳೆಯ ವ್ಯಕ್ತಿಯಾಗಿ ಸಮಾಜಕ್ಕೆ ಒಳಿತನ್ನು ಮಾಡಬೇಕೆ ಅಥವಾ ದುಶ್ಚಟಗಳಿಗೆ ಬಲಿಯಾಗಿ ಸಮಾಜಕ್ಕೆ ಭಾರವಾಗಿ ಬದುಕಬೇಕೆ ಎಂದು ಯೋಚಿಸಿ ಕಾರ್ಯೋನ್ಮುಖರಾಗಬೇಕು. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತ ಇರಬಹುದಾದ ಮಾದಕ ವ್ಯಸನಿಗಳನ್ನು ಆ ಚಟದಿಂದ ಹೊರಕ್ಕೆ ತರುವ ಕಾರ್ಯ ವನ್ನೂ ಮಾಡಬೇಕು ಎಂದು ವಿದ್ಯಾಕುಮಾರಿ ಹೇಳಿದರು.
ಬುದ್ಧಿ ಬೆಳವಣಿಗೆ ಸ್ಥಗಿತ
ಸಂಪನ್ಮೂಲ ವ್ಯಕ್ತಿಯಾಗಿದ್ದ ಮಣಿ ಪಾಲ ಕೆಎಂಸಿಯ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ, ಮನೋವೈದ್ಯ ಡಾ| ರವೀಂದ್ರ ಮನೋಳಿ ಅವರು ಮಾತನಾಡಿ ’15ರಿಂದ 25 ವರ್ಷ ವಯಸ್ಸಿನಲ್ಲಿ ನಮ್ಮ ಮೆದುಳು ವಿಕಸನಗೊಳ್ಳುವ ಅವಧಿ. ಈ ಅವಧಿಯಲ್ಲಿ ಮಾದಕ ವಸ್ತುವಿನಿಂದ ಮೆದುಳಿಗೆ ಪರಿಣಾಮ ಉಂಟಾದರೆ ನೆನಪಿನ ಶಕ್ತಿ, ಇತರ ಕೌಶಲ ಸೇರಿದಂತೆ ಬುದ್ಧಿ ಬೆಳವಣಿಗೆ ಸ್ಥಗಿತಗೊಳ್ಳಲಿದೆ’ ಎಂದು ಹೇಳಿದರು.
ಎಂಜಿಎಂ ಕಾಲೇಜು ಪ್ರಾಂಶುಪಾಲ ಡಾ| ಎಂ.ಜಿ.ವಿಜಯ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ ಉಪಸ್ಥಿತರಿದ್ದರು. ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ರೋಹಿಣಿ ಕೆ. ಸ್ವಾಗತಿಸಿದರು. ಪೂರ್ಣಿಮಾ ಮತ್ತು ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರ್ವಹಿಸಿದರು.
ನಗರದ ಬೋರ್ಡ್ ಹೈಸ್ಕೂಲ್ನಿಂದ ಎಂಜಿಎಂ ಕಾಲೇಜುವರೆಗೆ ನಡೆದ ಜಾಗೃತಿ ಜಾಥಾವನ್ನು ಎಸ್‌ಪಿ ನಿಶಾ ಜೇಮ್ಸ್ ಉದ್ಘಾಟಿಸಿದರು.
ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.