Advertisement

ಕಳ್ಳಕಿವಿ ಹಿಂಡಲು ಸಿಬಿಐ

11:22 AM Aug 20, 2019 | Team Udayavani |

ಬೆಂಗಳೂರು: ರಾಜ್ಯ ರಾಜಕೀಯ ದಲ್ಲಿ ತಲ್ಲಣ ಉಂಟು ಮಾಡಿರುವ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐಗೆ ವಹಿಸಲು ನಿರ್ಧರಿಸಿದೆ. ಈ ಕುರಿತು ಸೋಮವಾರ ಅಧಿಕೃತ ಆದೇಶ ಹೊರ ಬೀಳ ಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಈ ನಿರ್ಧಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.

Advertisement

ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರಕಾರದ ಅವಧಿಯಲ್ಲಿ ವಿಪಕ್ಷಗಳ ನಾಯ ಕರು, ಕಾಂಗ್ರೆಸ್‌ ನಾಯಕರು, ಸರಕಾರದ ವಿರುದ್ಧ ಬಂಡಾಯ ಸಾರಿದ್ದ ಶಾಸಕರು, ವಿಪಕ್ಷ ನಾಯಕರ ಆಪ್ತರು, ಪೊಲೀಸರು, ಸರಕಾರದ ಅಧಿಕಾರಿಗಳು ಹಾಗೂ ಪತ್ರ ಕರ್ತರು ಸಹಿತ ಮುನ್ನೂರಕ್ಕೂ ಹೆಚ್ಚು ಜನರ ದೂರವಾಣಿಗಳನ್ನು ಹಿರಿಯ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಪ್ರಕರಣದ ಬಗ್ಗೆ ಆಡಳಿತ ಪಕ್ಷ ಬಿಜೆಪಿ ಶಾಸಕರು ಉನ್ನತ ಮಟ್ಟದ ತನಿಖೆಯಾಗ ಬೇಕು ಎಂದು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರು. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್‌, ಎಚ್‌.ಕೆ. ಪಾಟೀಲ್‌ ಸಹಿತ ಕಾಂಗ್ರೆಸ್‌ ನಾಯಕರು ಸಮಗ್ರ ತನಿಖೆ ನಡೆಸುವಂತೆ ಸರಕಾರವನ್ನು ಆಗ್ರಹಿಸಿದ್ದರು. ಆದರೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಫೋನ್‌ ಕದ್ದಾಲಿಕೆ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ನ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಇದೊಂದು ರಾಜಕೀಯ ಪ್ರೇರಿತ ಆರೋಪ ಎಂದು ಫೋನ್‌ ಕದ್ದಾಲಿಕೆ ಆರೋಪವನ್ನು ತಳ್ಳಿ ಹಾಕಿದ್ದರು.

ಕಾಂಗ್ರೆಸ್‌ನಲ್ಲಿ ಒಡಕು-ಗೊಂದಲ
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಬಣ ತನಿಖೆಯನ್ನು ಸ್ವಾಗತಿಸಿದೆ. ಅದರ ಜತೆಗೆ ಆಪರೇಷನ್‌ ಕಮಲ ಪ್ರಕರಣವನ್ನೂ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸರಕಾರದ ನಿರ್ಧಾರವನ್ನು ಸ್ವಾಗತಿಸಿದ್ದರೆ, ಕರ್ನಾಟಕ ಕಾಂಗ್ರೆಸ್‌ ಟ್ವಿಟರ್‌ ಮೂಲಕ ಸಿಬಿಐ ತನಿಖೆಯನ್ನು ವಿರೋಧಿಸಿ, ಫೋನ್‌ ಕದ್ದಾಲಿಕೆಯೇ ಸುಳ್ಳು ಎಂದು ಟ್ವೀಟ್‌ ಮಾಡಿ ಅನಂತರ ಪಕ್ಷದ ನಾಯಕರ ಆಕ್ಷೇಪದ ಹಿನ್ನೆಲೆಯಲ್ಲಿ ಟ್ವೀಟ್‌ ಡಿಲೀಟ್‌ ಮಾಡಲಾಗಿದೆ. ಮಾಜಿ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಸರಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡದೆ ಅಂತರ ಕಾಯ್ದುಕೊಂಡಿದ್ದಾರೆ.

ಜೆಡಿಎಸ್‌ ಆಗ್ರಹ
ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಕರಣವನ್ನು ಸಿಬಿಐಗೆ ವಹಿಸಿರುವುದಕ್ಕೆ ಪರೋಕ್ಷ ಆಕ್ಷೇಪ ವ್ಯಕ್ತಪಡಿಸಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಾಯಕ್ಕೆ ಮಣಿದು ತನಿಖೆಗೆ ವಹಿಸಲಾಗಿದ್ದು, 2008ರಲ್ಲಿ ಯಡಿಯೂರಪ್ಪ ಅವಧಿ ಹಾಗೂ ಸಿದ್ದರಾಮಯ್ಯ ಅವಧಿಯಲ್ಲಿ ಏನೇನಾಗಿದೆ ಎನ್ನುವುದರ ಬಗ್ಗೆ ತನಿಖೆಯಾಗಲಿ. ಯಾರು ಯಾರ ಜತೆ ಒಳ ಒಪ್ಪಂದ ಮಾಡಿಕೊಂಡು ಅಧಿಕಾರ ನಡೆಸಿದ್ದಾರೆ ಎನ್ನುವುದನ್ನೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಫೋನ್‌ ಕದ್ದಾಲಿಕೆ ವಿಷಯದಿಂದಾಗಿ ಜೆಡಿಎಸ್‌-ಕಾಂಗ್ರೆಸ್‌ ಪಕ್ಷದ ಒಂದು ವರ್ಷದ ಮೈತ್ರಿ ಅಧಿಕೃತ ವಿಚ್ಛೇದನ ಹಂತ ತಲುಪುವ ಸಾಧ್ಯತೆ ಇದೆ.

Advertisement

ಬಯಲಾಗಿದ್ದು ಹೇಗೆ?
ಬೆಂಗಳೂರಿನ ನೂತನ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ನೇಮಕದ ಬಳಿಕ ಅವರು ಮಧ್ಯವರ್ತಿ ಜತೆ ತಮ್ಮ ಪೋಸ್ಟಿಂಗ್‌ ಬಗ್ಗೆ ಮಾತನಾಡಿದರು ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಚೆಗೆ ಬಿಡುಗಡೆಯಾಗಿತ್ತು. ಆ ಬಗ್ಗೆ ಭಾಸ್ಕರ್‌ ರಾವ್‌ ತನಿಖೆಗೆ ಆದೇಶಿಸಿದ ಬಳಿಕ ಜಂಟಿ ಪೊಲೀಸ್‌ ಆಯುಕ್ತರು (ಅಪರಾಧ ವಿಭಾಗ) ಪ್ರಾಥಮಿಕ ತನಿಖೆ ನಡೆಸಿ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಆ ವರದಿಯನ್ನು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೂ ಸಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಬೆಂಗಳೂರು ಪೊಲೀಸ್‌ ಆಯುಕ್ತರ ಸುಪರ್ದಿಗೆ ಬರುವ ಕೆಲವು ಅಧಿಕಾರಿಗಳು ಟೆಲಿಫೋನ್‌ ಕದ್ದಾಲಿಕೆ ಮಾಡಿದ್ದಾರೆ ಎಂಬ ವಿಚಾರ ಬಯಲಾಯಿತು ಎನ್ನಲಾಗಿದೆ. ಭಾಸ್ಕರ್‌ ರಾವ್‌ ಸಹಿತ ರಾಜಕಾರಣಿಗಳು ಮತ್ತು ಅಧಿಕಾರಿಗಳ ಟೆಲಿಫೋನ್‌ ಕದ್ದಾಲಿಕೆ ಆಗಿದೆ ಎಂಬ ವಿಚಾರವೂ ಬೆಳಕಿಗೆ ಬಂತು ಎನ್ನಲಾಗಿದೆ.

ಸಿದ್ದರಾಮಯ್ಯ ಸಹಿತ ಅನೇಕ ನಾಯಕರು ಫೋನ್‌ ಟ್ಯಾಪಿಂಗ್‌ ಬಗ್ಗೆ ಸಮಗ್ರ ತನಿಖೆಗೆ
ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸಲು ಆದೇಶಿಸಲಾಗಿದೆ. ಸೋಮವಾರ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಾಗುವುದು. ಈ ಬಗ್ಗೆ ಸಮಗ್ರ
ತನಿಖೆ ನಡೆದು ಸತ್ಯಾಂಶ ಹೊರ ಬರಬೇಕು. ತಪ್ಪಿತಸ್ಥರ ವಿರುದ್ದ ಕ್ರಮವಾಗಬೇಕು.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ.

ಸಿಬಿಐ ತನಿಖೆಗೆ ಆದೇಶಿಸಿರುವ ಸರಕಾರದ ನಿರ್ಧಾರ ಸ್ವಾಗತಾರ್ಹ. ನನ್ನ ಮನವಿ ಮೇರೆಗೆ ಸಿಬಿಐಗೆ ಒಪ್ಪಿಸಲಾಗಿದೆ ಎಂದು ಬಿಜೆಪಿ ನಾಯಕರು ಹೇಳು ತ್ತಿದ್ದಾರೆ. ಇತ್ತೀಚಿನ ಆಪರೇಷನ್‌ ಕಮಲದಲ್ಲಿಯೂ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಇದೆ. ಅದರ ಬಗ್ಗೆಯೂ ಸಿಬಿಐ ತನಿಖೆ ನಡೆಸಬೇಕು.
-ಸಿದ್ದರಾಮಯ್ಯ,
ಮಾಜಿ ಮುಖ್ಯಮಂತ್ರಿ

ಸಿದ್ದರಾಮಯ್ಯ ಅವರ ಮಾತಿಗೆ ಗೌರವ ನೀಡಿರುವುದು ಸ್ವಾಗತಾರ್ಹ. ಸಿಬಿಐ ಮೂಲಕ ದೇವೇಗೌಡರ ಕುಟುಂಬಕ್ಕೆ ಕಡಿವಾಣ ಹಾಕುವುದು ಸಾಧ್ಯವಿಲ್ಲ. ಸಿಬಿಐ ತನಿಖೆ ಮಾಡಿದರೂ ಅಷ್ಟೇ ಡೋನಾಲ್ಡ್‌ ಟ್ರಂಪ್‌ ಸಹಕಾರ ಪಡೆದು ತನಿಖೆ ಮಾಡಿದರೂ ಅಷ್ಟೇ, ನನಗೆ ಯಾವುದೇ ಭಯವಿಲ್ಲ. ಎಲ್ಲ ತನಿಖೆಗೂ ಸಿದ್ದವಾಗಿದ್ದೇನೆ.
-ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next