ಲಂಡನ್: ವಿಶ್ವದ ಅತ್ಯಂತ ಹಿರಿಯ ಕ್ರಿಕೆಟ್ ಬರಹಗಾರರಲ್ಲಿ ಒಬ್ಬರಾಗಿರುವ, ಲಂಡನ್ನಿನ “ಸಂಡೇ ಟೆಲಿಗ್ರಾಫ್’ ಪತ್ರಿಕೆಯ ಶಿಲ್ಡ್ ಬೆರ್ರಿ ಅವರ ವೃತ್ತಿ ಬದುಕಿಗೆ ಈಗ 40ರ ಸಂಭ್ರಮ. ಈ ಸಂದರ್ಭದಲ್ಲಿ 4 ದಶಕಗಳ ಅವಧಿಯಲ್ಲಿ ತಾನು ಕಂಡ 10 ಮಂದಿ ವಿಶ್ವಶ್ರೇಷ್ಠ ಕ್ರಿಕೆಟಿಗರ ಯಾದಿಯೊಂದನ್ನು ಬೆರ್ರಿ ರಚಿಸಿದ್ದು, ಇದರಲ್ಲಿ ಭಾರತದ ಸಚಿನ್ ತೆಂಡುಲ್ಕರ್ ಅವರಿಗೆ 6ನೇ ಸ್ಥಾನ ಮೀಸಲಿಟ್ಟಿದ್ದಾರೆ. ಸಚಿನ್ ಈ ಪಟ್ಟಿಯಲ್ಲಿರುವ ಭಾರತದ ಏಕೈಕ ಕ್ರಿಕೆಟಿಗ.
ವೆಸ್ಟ್ ಇಂಡೀಸಿನ ಬ್ಯಾಟಿಂಗ್ ದೈತ್ಯನಾಗಿ ಮೆರೆದ ವಿವಿಯನ್ ರಿಚರ್ಡ್ಸ್ ಅವರಿಗೆ ಈ ಯಾದಿಯಲ್ಲಿ ಅಗ್ರಸ್ಥಾನ ಲಭಿಸಿದೆ. ಟೆಸ್ಟ್ ಕ್ರಿಕೆಟಿಗೆ ಸ್ಫೋಟಕ ಸ್ಪರ್ಶ ವನ್ನಿತ್ತ, ಎದುರಾಳಿ ಬೌಲರ್‌ಗಳನ್ನು ಮೊದಲ ಎಸೆತದಿಂದಲೇ ದಂಡಿಸಬಲ್ಲ ತಾಕ ತ್ತುಳ್ಳ ಈ ಕೆರಿಬಿಯನ್ ಬ್ಯಾಟ್ಸ್ ಮನ್‌ನನ್ನು ಶಿಲ್ಡ್ ಬೆರ್ರಿ “ಕಿಂಗ್ ವಿವ್’ ಎಂದು ಪ್ರಶಂಸಿದ್ದಾರೆ.
50 ಟೆಸ್ಟ್‌ಗಳಲ್ಲಿ ವೆಸ್ಟ್ ಇಂಡೀಸನ್ನು ಮುನ್ನಡೆಸಿದರೂ ಸರಣಿ ಸೋಲನ್ನೇ ಕಾಣದ ಕಾರಣಕ್ಕಾಗಿ ರಿಚರ್ಡ್ಸ್ ಕಿಂಗ್ ಎನಿಸಿಕೊಳ್ಳುತ್ತಾರೆ ಎಂದಿದ್ದಾರೆ ಬೆರ್ರಿ. “ಎದುರಾಳಿಯನ್ನು ಮಾನಸಿಕ ವಾಗಿ ಸೋಲಿಸಿ, ಗೆಲುವು ಬೆನ್ನಟ್ಟುತ್ತದೆ’ ಎಂಬ ಸನ್ ತ್ಸು ಅವರ “ಯುದ್ಧ ಕಲೆ’ಯನ್ನು ವಿವ್ ಅಕ್ಷರಶಃ ಪಾಲಿಸಿಕೊಂಡು ಬಂದಿದ್ದಾರೆ ಎಂಬುದು ಬೆರ್ರಿ ಅವರ ಮತ್ತೂಂದು ಮೆಚ್ಚು ನುಡಿ. ಈ ಯಾದಿಯಲ್ಲಿರುವ ವಿಂಡೀಸಿನ ಮತ್ತಿಬ್ಬರು ಕ್ರಿಕೆಟಿಗರೆಂದರೆ ಮಾಲ್ಕಂ ಮಾರ್ಷಲ್ (4) ಮತ್ತು ಬ್ರಿಯಾನ್ ಲಾರಾ (9). 1992ರಲ್ಲಿ ಪಾಕಿಸ್ಥಾನಕ್ಕೆ ವಿಶ್ವಕಪ್ ತಂದಿತ್ತ “ಸ್ಫೂರ್ತಿದಾಯಕ ನಾಯಕ’ ಇಮ್ರಾನ್ ಖಾನ್ ಅವರಿಗೆ ಈ ಯಾದಿಯಲ್ಲಿ ಅಚ್ಚರಿಯೆಂಬಂತೆ 2ನೇ ಸ್ಥಾನ ಲಭಿಸಿದೆ. ಈ ವಿಶ್ವಕಪ್ ವಿಜೇತ ತಂಡದ ಸದಸ್ಯ ವಾಸಿಮ್ ಅಕ್ರಮ್ 10ನೇ ಸ್ಥಾನ ಪಡೆದಿದ್ದಾರೆ.
ಇಂಗ್ಲೆಂಡಿನ ಏಕೈಕ ಕ್ರಿಕೆಟಿಗ, ಆಲ್‌ರೌಂಡರ್ ಇಯಾನ್ ಬೋಥಂ 5ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಜಾಕ್ ಕ್ಯಾಲಿಸ್‌ಗೆ 8ನೇ ಸ್ಥಾನ ಲಭಿಸಿದೆ. ಬೆರ್ರಿ ಅವರ ವಿಶ್ವಶ್ರೇಷ್ಠ ಕ್ರಿಕೆಟಿಗರ ಯಾದಿಯಲ್ಲಿರುವ ಆಸ್ಟ್ರೇಲಿಯದ ಇಬ್ಬರೆಂದರೆ ಶೇನ್ ವಾರ್ನ್ (3) ಮತ್ತು ಆ್ಯಡಂ ಗಿಲ್‌ಕ್ರಿಸ್ಟ್ (7). 63ರ ಹರೆಯದ ಬೆರ್ರಿ 3 ವರ್ಷ ಕಾಲ “ವಿಸ್ಡನ್’ ಸಂಪಾದಕ ರಾಗಿಯೂ ಸೇವೆ ಸಲ್ಲಿಸಿದ್ದರು.
ಶಿಲ್ಡ್ ಬೆರ್ರಿ ಟಾಪ್-10 ತಂಡ
1. ವಿವಿಯನ್ ರಿಚರ್ಡ್ಸ್, 2. ಇಮ್ರಾನ್ ಖಾನ್, 3. ಶೇನ್ ವಾರ್ನ್, 4. ಮಾಲ್ಕಂ ಮಾರ್ಷಲ್, 5. ಇಯಾನ್ ಬೋಥಂ, 6. ಸಚಿನ್ ತೆಂಡುಲ್ಕರ್, 7. ಆ್ಯಡಂ ಗಿಲ್‌ಕ್ರಿಸ್ಟ್, 8. ಜಾಕ್ ಕ್ಯಾಲಿಸ್, 9. ಬ್ರಿಯಾನ್ ಲಾರಾ, 10. ವಾಸಿಮ್ ಅಕ್ರಮ್.