ವಿಶ್ವದಾದ್ಯಂತ ಬಿಲಿಯನ್ ಗಟ್ಟಲೆ ಬಳಕೆದಾರರನ್ನು ಹೊಂದಿದೆ. ಇದು ತ್ವರಿತ ಸಂದೇಶ ಕಳುಹಿಸುವಿಕೆಯ ಒಂದು ಅಪ್ಲಿಕೇಶನ್ ಆಗಿದ್ದು, ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ವಾಟ್ಸ್ಯಾಪ್ ನೋಡಿಯೇ ಬೆಳಗಾಗುವುದು, ವಾಟ್ಸ್ಯಾಪ್ ನೋಡಿಯೇ ದಿನ ಅಂತ್ಯವಾಗುವುದು.ಹಾಗಂತ ಹೇಳಿ, ಈ ಸ್ಪರ್ಧಾತ್ಪಕ ಜಗತ್ತಿನಲ್ಲಿ ವಾಟ್ಸ್ಯಾಪ್ ಅಧಿಪತ್ಯಕ್ಕೆ ಸೆಡ್ಡು ಹೊಡೆಯುವವರೇ ಇಲ್ಲ ಎಂದು ನಾವು ಅಂದುಕೊಳ್ಳುವ ಹಾಗಿಲ್ಲ.
ಪ್ರತಿ ವರ್ಷ ಒಂದಷ್ಟು ಚಾಟಿಂಗ್ ಅಪ್ಲಿಕೇಷನ್ ಗಳು ಹೊಸ ಹೊಸದಾಗಿ ಬರುತ್ತಿವೆ. ಆದರೆ, ಇನ್ನೂ ವಾಟ್ಸ್ಯಾಪ್ ಸ್ಥಾನವನ್ನು ಹಿಂದಿಕ್ಕಲು ಯಾರಿಂದಲೂ ಸಾಧ್ಯವಾಗಲಿಲ್ಲ. ಕೆಲವು ಆ್ಯಪ್ ಗಳಲ್ಲಿ ವಾಟ್ಸ್ಯಾಪ್ ಗಿಂತಲೂ ಉತ್ತಮ ಫೀಚರ್‌ಗಳನ್ನು ಒಳಗೊಂಡಿದೆ. ಅದರಲ್ಲಿ ಟೆಲಿಗ್ರಾಂ ಸಹ ಒಂದು.
ಇದನ್ನೂ ಓದಿ : ಉಳ್ಳವರು ಬಡವರ ಕಷ್ಟಕ್ಕೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಲಿ
ಜಗತ್ತಿನಾದ್ಯಂತ ವಾಟ್ಸ್ಯಾಪ್ ಗೆ ಒಂದು ಹಂತಕ್ಕೆ ಠಕ್ಕರ್ ಕೊಡಲು ಯಶಸ್ವಿಯಾಗಿರುವ ಒಂದು ಅಪ್ಲಿಕೇಶನ್ ಅಂದರೆ ಅದು ಟೆಲಿಗ್ರಾಂ. ರಷ್ಯಾ ಮೂಲದ ಚಾಟಿಂಗ್ ಅಪ್ಲಿಕೇಶನ್ ಆಗಿರುವ ಟೆಲಿಗ್ರಾಂ, ಜಗತ್ತಿನಾದ್ಯಂತ ಕೋಟ್ಯಂತರ ಬಳಕೆದಾರರನ್ನು ಹೊಂದಿದ್ದರೂ, ಅದನ್ನೇ ತಮ್ಮ ಪ್ರೈಮರಿ ಚಾಟಿಂಗ್ ಆ್ಯಪ್ ಆಗಿ ಮಾಡಿಕೊಂಡಿರುವವರು ಕಮ್ಮಿಯೇ ಎನ್ನಬಹುದು. ವಾಟ್ಸ್ಯಾಪ್ ನಂತರದ ಸ್ಥಾನ ಕೊಟ್ಟವರೇ ಹೆಚ್ಚು. ಈಗ, ವಾಟ್ಸ್ಯಾಪ್ ಗಿಂತಲೂ ಭಿನ್ನವಾಗಿರುವ ಯಾವುದೆಲ್ಲಾ ಫೀಚರ್ ಗಳು ಟೆಲಿಗ್ರಾಂನಲ್ಲಿದೆ ಎಂಬುವುದನ್ನು ನೋಡೋಣ
ಟೆಲಿಗ್ರಾಂ ಅಪ್ಲಿಕೇಶನ್ ಅನಿಯಮಿತ ಸಂಗ್ರಹಣೆಗೆ ಅನುಮತಿ ನೀಡುತ್ತದೆ. ಅಂದರೆ, ನಿಮ್ಮ ಸಂದೇಶಗಳು, ಫೋಟೋ-ವೀಡಿಯೋ ಸಂಗ್ರಹ, ಡಾಕ್ಯುಮೆಂಟ್ ಗಳನ್ನು ಎಷ್ಟೇ ಜಿಬಿ ಡೆಟಾಗಳನ್ನು ಸಂಗ್ರಹಿಸಿ ಇಡಬಹುದು. ಅದಲ್ಲದೇ, ಇವೆಲ್ಲವೂ ಆಟೋ ಬ್ಯಾಕ್ ಅಪ್ (ಸ್ವಯಂಚಾಲಿತವಾಗಿ) ಆಗುತ್ತದೆ. ಆದ್ದರಿಂದ ನಿಮ್ಮ ಹೊಸ ಫೋನ್ ಅಥವಾ ಯಾವುದೇ ಇತರ ಡಿವೈಸ್‌ಗಳಲ್ಲಿ ಟೆಲಿಗ್ರಾಂ ಅಕೌಂಟ್ ಮೂಲಕ ಲಾಗಿನ್ ಆಗಬೇಕಾದರೆ, ಯಾವುದೇ ಸಂದೇಶ-ಮಾಧ್ಯಮಗಳನ್ನು ಕಳೆದುಕೊಳ್ಳದೆ ಲಾಗಿನ್ ಆಗಬಹುದು.
ಒಂದು ವಿಶಿಷ್ಟ ಮತ್ತು ವಿಭಿನ್ನ ಫೀಚರ್ ಎಂದರೆ, ವಾಟ್ಸಾಪ್ ವೈಯುಕ್ತಿಕ ಹಾಗೂ ಗ್ರೂಪ್ ಚಾಟ್‌ಗಳ ಅಪ್ಲಿಕೇಶನ್ ಆದರೆ, ಟೆಲಿಗ್ರಾಂನಲ್ಲಿ ಕೆಲವು ಚಾನಲ್‌ಗಳೂ ಇರಲಿದ್ದು, ಆ ಮೂಲಕ ಉಚಿತವಾಗಿ ಮಾಹಿತಿಗಳು ನಮಗೆ ಸಿಗುತ್ತದೆ. ಅದಲ್ಲದೆ, ಒಮ್ಮೆ ನೀವು ಪಡೆದಿರುವ ಫೈಲ್ ನನ್ನು ಯಾವುದೇ ಸಮಯದಲ್ಲೂ ಡೌನ್ ಲೋಡ್ ಮಾಡಬಹುದು. ವಾಟ್ಸ್ಯಾಪ್ ನಲ್ಲಾದರೆ, ಒಂದೆರಡು ತಿಂಗಳ ಹಿಂದಿನ ಫೈಲ್‌ಗಳನ್ನು ನಾವು ಮರಳಿ ಪಡೆಯಲು ಆಗುವುದಿಲ್ಲ. ಅದನ್ನು ಕಳಿಸಿದವರನ್ನೇ ಪುನಃ ಸಂಪರ್ಕಿಸಿ, ಅದನ್ನು ಪಡೆಯಬೇಕಾಗಿದೆ.
- ಎಷ್ಟೇ ದೊಡ್ಡ ಪೈಲ್‌ಗಳನ್ನು ಕಳುಹಿಸಬಹುದು
ಅನಿಯಮಿತ ಸ್ಟೋರೇಜ್ ಇರುವ ಕಾರಣದಿಂದ ದೊಡ್ಡ ದೊಡ್ಡ ಫೈಲ್‌ಗಳನ್ನು ನೀವು ಇತರರೊಂದಿಗೆ ಎಕ್ಸ್ಚೇಂಜ್ ಮಾಡಬಹುದು. ವಾಟ್ಸ್ಯಾಪ್ ನಲ್ಲಾದರೆ, 100ಎಂಬಿ ಡಾಕ್ಯುಮೆಂಟ್ ಹಾಗೂ 30-40 ಎಂಬಿ ವೀಡಿಯೋ ಫೈಲ್ ಗಳನ್ನು ಮಾತ್ರ ಕಳುಹಿಸಬಹುದು. ದೊಡ್ಡ ಫೈಲ್ ಕಳುಹಿಸಲು ಹಲವರು ಇತರ ಆ್ಯಪ್‌ಗಳ ಮೇಲೆ ಅವಲಂಬಿತರಾಗುವುದೂ ಉಂಟು. ಆದರೆ, ಟೆಲಿಗ್ರಾಂನಲ್ಲಿ 2 ಜಿಬಿ ಸೈಜ಼್ ಉಳ್ಳ ಫೈಲ್‌ಗಳನ್ನೂ ಇತರರೊಂದಿಗೆ ಹಂಚಬಹುದು. ವಾಟ್ಸ್ಯಾಪ್ ಗಿಂತಲೂ ಒಂದು ಕೈ ಮೇಲಾಗಲು ಇದು ಒಂದು ಪ್ರಮುಖ ಕಾರಣ. ಹಲವು ಪೈರೆಸಿ ಸಿನಿಮಾಗಳು ಇದೇ ಅಪ್ಲಿಕೇಶನ್‌ನಲ್ಲಿ ನೂರಾರು ಮಂದಿಯೊಂದಿಗೆ ಹಂಚಿಕೆಯಾಗುತ್ತದೆ.
ಇದನ್ನೂ ಓದಿ : ‘ಬೊಗಸೆಯಲ್ಲೊಂದು ಹೂನಗೆ’ ಎಂಬ ಗದ್ಯ ದೃಶ್ಯಕಾವ್ಯ
- ಗುಂಪು ಸದಸ್ಯರ ಸಂಖ್ಯಾ ಸಾಮರ್ಥ್ಯ
ಟೆಲಿಗ್ರಾಮ್ ನಲ್ಲಿರುವ ಮತ್ತೊಂದು ವಿಶೇಷತೆಯೆಂದರೆ, ಒಂದು ಗುಂಪಿನಲ್ಲಿ 2೦೦,೦೦೦ ಸದಸ್ಯರವರೆಗೆ ಸೇರಿಸಿಕೊಳ್ಳಬಹುದು. ವಾಟ್ಸಾಪ್‌ನಲ್ಲಿ ಗರಿಷ್ಠ 256 ಸದಸ್ಯರನ್ನು ಸೇರಿಸುವ ಸಾಮರ್ಥ್ಯವಿದೆ.
- ನಿಮ್ಮ ಮೊಬೈಲ್ ಸಂಖ್ಯೆಯನ್ನು ಹೈಡ್ ಮಾಡಬಹುದು!
ಎಷ್ಟೇ ಸದಸ್ಯರ ಗುಂಪಿನಲ್ಲಿ ನೀವಿದ್ದರೂ, ನಿಮ್ಮ ಗೌಪ್ಯತೆಯನ್ನು ಟೆಲಿಗ್ರಾಂ ರಕ್ಷಿಸುತ್ತದೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ಹೈಡ್ ಮಾಡಿಟ್ಟುಕೊಂಡೇ ಇತರರೊಂದಿಗೆ ಗುಂಪಿನಲ್ಲಿ ಹಾಗೂ ವೈಯುಕ್ತಿಕವಾಗಿಯೂ ಸಂವಹನ ನಡೆಸಬಹುದು. ವಾಟ್ಸ್ಯಾಪ್ ನಲ್ಲಾದರೆ, ಒಂದು ಗುಂಪಿನಲ್ಲಿರುವ ಎಲ್ಲಾ ಸದಸ್ಯರ ಮೊಬೈಲ್ ಸಂಖ್ಯೆಯನ್ನೂ ನೋಡಬಹುದು. ಮುಂದಿನ ದಿನಗಳಲ್ಲಿ, ವಾಟ್ಸ್ಯಾಪ್ ಸಹ ನಂಬರ್ ಹೈಡ್ ಮಾಡುವ ಫೀಚರ್ ಪರಿಚಯಿಸಲು ಮುಂದಾಗುತ್ತಿದೆ ಎಂದು ಎನ್ನಲಾಗುತ್ತಿದೆ.
ಗುಂಪುಗಳಂತೆ, ಟೆಲಿಗ್ರಾಂನಲ್ಲಿ ಚಾನಲ್ ಎಂಬ ವಿಶೇಷ ಫೀಚರ್ ಹೊಂದಿದ್ದು, ಯಾರೆಲ್ಲಾ ಫೈಲ್ ಗಳನ್ನು ಕಳುಹಿಸಬಹುದು ಎಂದು ಅಡ್ಮಿನ್ ಸೆಟ್ ಮಾಡಬಹುದು. ಅನಿಯಮಿತ ಸಂಖ್ಯೆಯ ಸದಸ್ಯರು, ಚಾನಲ್ ಅನ್ನು ಸಬ್ ಸ್ಕ್ರೈಬ್ ಮಾಡಬಹುದು(ಉಚಿತ). ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿತ ಫೈಲ್‌ಗಳನ್ನು ಹಂಚಲು, ಸಿನಿಮಾ ಹಂಚಲು, ಇನ್ನಿತರ ಫೋಟೋ-ವೀಡಿಯೋ ಪೈಲ್ ಗಳನ್ನು ಹಂಚಿಕೊಳ್ಳಲು ಇದು ಬಳಕೆಯಾಗುತ್ತದೆ. ಹಲಚು ಚಾನಲ್‌ಗಳು ಲಕ್ಷಾಂತರ ಸಬ್ ಸ್ಕ್ರೈಬರ್ ಗಳನ್ನು ಹೊಂದಿದೆ!
- ಮಲ್ಟಿ ಡಿವೈಸ್ ಲಾಗಿನ್ ಸಪೋರ್ಟ್
ಈ ಫೀಚರ್‌ನಿಂದಾಗಿ ಟೆಲಿಗ್ರಾಂ ವಾಟ್ಸಾಪ್‌ಗಿಂತಲೂ ವಿಶೇಷ ಸ್ಥಾನವನ್ನು ಪಡೆಯುತ್ತದೆ. ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚಿನ ಮೊಬೈಲ್-ಕಂಪ್ಯೂಟರ್ ಮೂಲಕ ಲಾಗ್‌ಇನ್ ಆಗಬಹುದು. ಎರಡರಲ್ಲೂ ಏಕಕಾಲಕ್ಕೆ ಸಂದೇಶವನ್ನೂ ಪಡೆಯಲು ಸಾಧ್ಯ. ಒಂದರಿಂದ ಲಾಗೌಟ್ ಆಗದೆಯೇ, ಇನ್ನೊಂದರಲ್ಲೂ ಲಾಗಿನ್ ಆಗಲು ಸಾಧ್ಯ. ಅದಲ್ಲದೆ, ಟೆಲಿಗ್ರಾಮ್ ಆಂಡ್ರಾಯ್ಡ್, ಐಒಎಸ್, ವಿಂಡೋಸ್ ಫೋನ್, ವಿಂಡೋಸ್ ಸಿಸ್ಟಮ್, ಮ್ಯಾಕ್ ಓಎಸ್, ಲಿನಕ್ಸ್ ಓಎಸ್ ಮತ್ತು ಯಾವುದೇ ಬ್ರೌಸರ್‌ನಲ್ಲೂ ಲಭ್ಯವಿದೆ.
ರಹಸ್ಯ ಚಾಟ್ ಎಂದರೆ, ಒಬ್ಬರ ಸಂಪರ್ಕದೊಂದಿಗೆ ನಾರ್ಮಲ್ ಚಾಟ್‌ವಲ್ಲದೇ, ಪ್ರತ್ಯೇಕವಾಗಿ ಸೀಕ್ರೆಟ್ ಚಾಟ್ ಮಾಡುವುದು. ಈ ಚಾಟ್‌ಅನ್ನು ಯಾವ ಡಿವೈಸ್ ಮೂಲಕ ಮಾಡುತ್ತೀರೋ, ಅದರಲ್ಲಿ ಮಾತ್ರ ಮುಂದುವರೆಸಬಹುದು. ಇತರ ಡಿವೈಸ್ ಗಳಲ್ಲಿ ಲಾಗ್‌ಇನ್ ಆಗಿದ್ದರೂ ಅದರಲ್ಲಿ ಈ ಸಿಕ್ರೆಟ್ ಚಾಟ್ ಕಾಣುವುದಿಲ್ಲ. ಅದೇ ರೀತಿ, ಈ ಚಾಟ್‌ಅನ್ನು ಡಿಲೀಟ್ ಮಾಡಲು ಒಂದು ಸೆಲ್ಫ್ ಟೈಮರ್ ಸೆಟ್ ಮಾಡಿ ಇಟ್ಟುಕೊಂಡರೆ, ಅದು ಸ್ವಯಂಚಾಲಿತವಾಗಿ ಡಿಲೀಟ್ ಆಗುತ್ತದೆ.
- ಸೈಲೆಂಟ್ ಮತ್ತು ಶೆಡ್ಯೂಲ್ಡ್ ಮೆಸೇಜ್
ನಿಮಗೆ ಒಂದು ನಿಗದಿತ ಸಯದಲ್ಲೇ ಒಂದು ಸಂದೇಶ ಕಳುಹಿಸಬೇಕೆಂದರೆ, ಅದನ್ನು ಸಹ ಟೆಲಿಗ್ರಾಂ ನಲ್ಲಿ ಮಾಡಲು ಸಾಧ್ಯ. ಸಮಯ ಸೆಟ್ ಮಾಡಿಟ್ಟರೆ ಸಾಕು. ಆಗ, ಆ ಸಮಯಕ್ಕೆ ಅದು ತನ್ನಿಂತಾನೆ ಸೆಂಡ್ ಆಗಿ ಬಿಡುತ್ತದೆ. ಉದಾಹರಣೆಗೆ ಒಬ್ಬರ ಹುಟ್ಟುಹಬ್ಬಕ್ಕೆ ಶುಭ ಕೋರಿ, ಸರಿಯಾಗಿ ೧೨ ಗಂಟೆಗೆ ಸಂದೇಶ ಕಳುಹಿಸಬೇಕೆಂದರೆ, ಆ ವ್ಯಕ್ತಿಯ ಚಾಟ್‌ಗೆ ಹೋಗಿ, ಸಂದೇಶ ಟೈಪ್ ಮಾಡಿ, ಬಲಬದಿಯಲ್ಲೇ ಇರುವ ಪೋಸ್ಟ್ ಚಿಹ್ನೆಯನ್ನು ಗಟ್ಟಿಯಾಗಿ ಒತ್ತಿಟ್ಟುಕೊಂಡರೆ, ಶೆಡ್ಯೂಲ್ ಮೆಸೇಜ್ ಎಂಬ ಆಪ್ಷನ್ ಬರುತ್ತದೆ. ಅದನ್ನು ಆಯ್ಕೆ ಮಾಡಿ, ಸಮಯ ನಿಗದಿ ಮಾಡಿದರೆ ಆಯ್ತು.
ಅದೇ ರೀತಿಯಲ್ಲಿ ಅಲ್ಲಿ ಸಿಗುವ ಮತ್ತೊಂದು ಆಯ್ಕೆ – ಸೆಂಡ್ ವಿದೌಟ್ ಸೌಂಡ್. ಅದನ್ನು ಆಯ್ಕೆ ಮಾಡಿದರೆ, ಯಾವುದೇ ನೋಟಿಫಿಕೇಶನ್ ಸೌಂಡ್ ಆಗದೆ, ಅವರಿಗೆ ಮೆಸೇಜ್ ತಲುಪುವುದು.
ಕೆಲವೊಮ್ಮೆ ನಿಮಗೆ ಸಮಯ ಸಿಕ್ಕಾಗ ಸಂದೇಶವನ್ನು ಟೈಪ್ ಮಾಡಿಟ್ಟು, ನಂತರ ಮರೆತು ವಾಟ್ಸಾಪ್‌ನಿಂದ ಹೊರಗೆ ಹೋದರೆ ಕೆಲ ಹೊತ್ತಿನ ಬಳಿಕ ವಾಟ್ಸಾಪ್‌ಗೆ ಮರಳಿದಾಗ ಆ ಸಂದೇಶ ಮಾಯವಾಗಿ ಬಿಡುತ್ತದೆ. ಎಷ್ಟೇ ದೊಡ್ಡ ಸಂದೇಶ ಟೈಪ್ ಮಾಡಿಟ್ಟುಕೊಂಡರೆ ಅದು ವ್ಯರ್ಥವಾಗಿ ಬಿಡುವುದು. ಆದರೆ, ಟೆಲಿಗ್ರಾಂನಲ್ಲಿ ಅದು ಡ್ರಾಫ್ಟ್ ಆಗಿ ಅಲ್ಲೇ ಉಳಿದುಕೊಳ್ಳುತ್ತದೆ. ಇತರ ಡಿವೈಸ್ ನಲ್ಲಿ ಲಾಗಿನ್ ಆಗಿದ್ದರೆ, ಅದರಲ್ಲೂ ಡ್ರಾಫ್ಟ್ ಕಾಣಸಿಗುತ್ತದೆ.
ನೀವು ಒಬ್ಬರಿಗೆ ಒಂದು ಸಂದೇಶವನ್ನು ಕಳುಹಿಸಿದ್ದೀರಿ ಅಂದುಕೊಳ್ಳೋಣ. ಅದರಲ್ಲಿ ಏನಾದರೂ ತಪ್ಪಾಗಿದ್ದರೆ, ವಾಟ್ಸ್ಯಾಪ್ ನಲ್ಲಾದರೆ ಒಂದಾ ಡಿಲೀಟ್ ಮಾಡಿ ಮತ್ತೊಂದು ಕಳುಹಿಸಬೇಕು ಅಥವಾ ತಪ್ಪಾಗಿರುವುದನ್ನು ಮತ್ತೊಂದು ಸಂದೇಶದಲ್ಲಿ ಹೇಳಬೇಕು. ಆದರೆ, ಟೆಲಿಗ್ರಾಂನಲ್ಲಿ ಕಳುಹಿಸಿರುವ ಸಂದೇಶವನ್ನೇ ಲಾಂಗ್ ಪ್ರೆಸ್ ಮಾಡಿದಾಗ ಮೇಲೆ ಎಡಿಟ್ ಮಾಡುವ ಆಯ್ಕೆ ಸಿಗುತ್ತದೆ. ಅದನ್ನು ಆಯ್ಕೆ ಮಾಡಿ ಸಂದೇಶ ಎಡಿಟ್ ಮಾಡಿ ಕಳುಹಿಸಿದರೆ, ಹಳೆಯ ಸಂದೇಶದಲ್ಲಾದ ತಪ್ಪು ಸರಿಯಾಗಿಬಿಡುತ್ತದೆ.
ಈ ಫೀಚರ್ ವಾಟ್ಸ್ಯಾಪ್ ನಲ್ಲಿ ಇದ್ದರೂ ಅದು ಕೆಲ ಸಮಯದವರೆಗೆ ಮಾತ್ರ ಆ್ಯಕ್ಟಿವ್ ಆಗಿರುತ್ತದೆ. ಅಂದರೆ, ಒಂದು ಸಂದೇಶ ಕಳುಹಿಸಿದ 1 ಗಂಟೆಯವರೆಗೆ ಡಿಲೀಟ್ ಫಾರ್ ಎವ್ರೀವನ್ (ಸಂದೇಶ ಪಡೆದವರ ಚಾಟ್ ನಿಂದಲೂ ಡಿಲೀಟ್ ಮಾಡುವುದು) ಮಾಡಬಹುದು. ಆದರೆ ಟೆಲಿಗ್ರಾಂನಲ್ಲಿ ಕಳುಹಿಸಿದ ಸಂದೇಶ ಮಾತ್ರವಲ್ಲದೆ, ಇನ್ನೊಬ್ಬರು ಕಳುಹಿಸಿದ ಸಂದೇಶವನ್ನೂ ಸಹ ಡಿಲೀಟ್ ಮಾಡಬಹುದು.
ಹಾಗೆಯೇ, ಯಾರಾದರೂ ಹೊಸದಾಗಿ ಟಿಲಿಗ್ರಾಂಗೆ ಬಂದರೂ ನಮಗೆ ಗೊತ್ತಾಗುತ್ತದೆ. ಇವಿಷ್ಟು ಮಾತ್ರವಲ್ಲದೆ ಇನ್ನೂ ಹಲವಾರು ವಿಶೇಷತೆಗಳಲ್ಲಿ ಟೆಲಿಗ್ರಾಂ ವಾಟ್ಸ್ಯಾಪ್ ಗಿಂತಲೂ ವಿಶೇಷತೆಯನ್ನು ಹೊಂದಿದೆ. ಕೋಟ್ಯಂತರ ಬಳಕೆದಾರರಿದ್ದರೂ, ಹಲವರು ಅದನ್ನು ಸೆಕೆಂಡರಿ ಚಾಟಿಂಗ್ ಆ್ಯಪ್ ಆಗಿ ಬಳಸುತ್ತಿದ್ದಾರೆ.
ಇಂದುಧರ ಹಳೆಯಂಗಡಿ
ಇದನ್ನೂ ಓದಿ : ವಿಶ್ವನಾಥ್ ಎಂದಿಗೂ ಒಂದ್ ಒಳ್ಳೆ ಸಲಹೆ ನೀಡಿಲ್ಲ