Advertisement

ದೂರಸಂಪರ್ಕ ಕ್ಷೇತ್ರದತ್ತ ಬೀಸಿದ ಸುಧಾರಣ ಗಾಳಿ

11:21 PM Sep 16, 2021 | Team Udayavani |

ಕಳೆದೊಂದು ದಶಕದಿಂದೀಚೆಗೆ ಸುಧಾರಣ ಕ್ರಮಗಳ ನಿರೀಕ್ಷೆಯಲ್ಲಿದ್ದ ದೇಶದ ದೂರಸಂಪರ್ಕ ವಲಯದತ್ತ ಕೇಂದ್ರ ಸರಕಾರ ಕೊನೆಗೂ ದೃಷ್ಟಿ ಹರಿಸಿದೆ. ಆರ್ಥಿಕವಾಗಿ ಮಾತ್ರವಲ್ಲದೆ ತಾಂತ್ರಿಕವಾಗಿಯೂ ವಿವಿಧ ಸಮಸ್ಯೆಗಳ ವರ್ತುಲದಲ್ಲಿ ಸಿಲುಕಿ ನಲುಗಿರುವ ದೂರಸಂಪರ್ಕ ವಲಯಕ್ಕೆ ಕಾಯಕಲ್ಪ ನೀಡುವ ಹಲವು ಸುಧಾರಣ ಕ್ರಮಗಳನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ಸಹಜವಾಗಿಯೇ ಕೇಂದ್ರದ ಈ ನಿರ್ಧಾರ ದಿಂದಾಗಿ ದೂರಸಂಪರ್ಕ ವಲಯದಲ್ಲಿ ಹೊಸ ಆಶಾವಾದ ಮೂಡಿದೆ.

Advertisement

ಟೆಲಿಕಾಂ ವಲಯದಲ್ಲಿ ಶೇ. 100 ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನೀಡಿರುವುದು ಕೇಂದ್ರದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದ್ದು ಇದು ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲಿದೆಯಲ್ಲದೆ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಲಭ್ಯವಾಗುವ ನಿರೀಕ್ಷೆಯನ್ನು ಮೂಡಿಸಿದೆ. ವಿವಿಧ ಟೆಲಿಕಾಂ ಕಂಪೆನಿಗಳು ಸರಕಾರಕ್ಕೆ ಪಾವತಿಸಬೇಕಿ ರುವ ಸರಿ ಹೊಂದಿಸಲಾದ ನಿವ್ವಳ ಆದಾಯದ ವ್ಯಾಖ್ಯಾನವನ್ನೇ ಬದ ಲಾಯಿಸುವ ಮೂಲಕ ಈ ಕಂಪೆನಿಗಳು ಸರಾಗವಾಗಿ ಉಸಿರಾಡು ವಂತಾಗಲು ಅವಕಾಶ ಮಾಡಿಕೊಡಲಾಗಿದೆ. ಬಾಕಿ ಪಾವತಿಗೆ ನಾಲ್ಕು ವರ್ಷಗಳ ಕಾಲಾವಕಾಶ, ದೂರಸಂಪರ್ಕೇತರ ಆದಾಯಕ್ಕೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಿರುವುದೂ ಕೂಡ ಟೆಲಿಕಾಂ ಕಂಪೆನಿ ಗಳ ಪಾಲಿಗೆ ದಿವೌÂಷಧವೇ ಸರಿ. ಕೆವೈಸಿಯನ್ನು ಸಂಪೂರ್ಣವಾಗಿ ಡಿಜಿ ಟಲೀಕರಣಗೊಳಿಸಲು ನಿರ್ಧರಿಸಲಾಗಿದ್ದು ಇದರಿಂದಾಗಿ ಗ್ರಾಹಕರು ಮತ್ತು ಟೆಲಿಕಾಂ ಕಂಪೆನಿಗಳು ಎದುರಿಸುತ್ತಿದ್ದ ಸಮಸ್ಯೆ ನಿವಾರಣೆ ಯಾಗಲಿದೆ. ವಿವಿಧ ಸೇವೆಗಳನ್ನು ಪಡೆದುಕೊಳ್ಳಲು ಗ್ರಾಹಕರು ಕೆವೈಸಿ ಪ್ರಕ್ರಿಯೆಗೆ ಒಳಗಾಗುವುದು ಕಡ್ಡಾಯವಾಗಿರುವುದರಿಂದ ಪದೇ ಪದೆ ಇದಕ್ಕಾಗಿ  ಅಲೆದಾಡಬೇಕಾದ ಪರಿಸ್ಥಿತಿ ಇತ್ತು.  ಸದ್ಯ ದೇಶದಲ್ಲಿ ದೂರ ಸಂಪರ್ಕ ಕ್ಷೇತ್ರವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಲಯ ದಲ್ಲಿ ಕ್ರಾಂತಿಕಾರಿ ಪಾತ್ರ ನಿರ್ವಹಿಸುತ್ತಾ ಬಂದಿದೆ. ಮೊಬೈಲ್‌ ಫೋನ್‌ನಿಂದ ಆರಂಭಗೊಂಡ ದೇಶದ ದೂರಸಂಪರ್ಕ ವಲಯದ ಸುಧಾರಣೆ ಈಗ ಸ್ಮಾರ್ಟ್‌ ಫೋನ್‌  ಯುಗದಲ್ಲಿದ್ದು ಸಂಪರ್ಕದ ಬಲವರ್ಧನೆಯ ಮೂಲಕ ನಾಗರಿಕರನ್ನು ಮತ್ತಷ್ಟು ಸಶಕ್ತರನ್ನಾಗಿಸಿದೆ. ಮಾಹಿತಿ ಲಭ್ಯ ತೆಯ ವೇಗ ಮತ್ತು ಪ್ರಮಾಣವನ್ನು ಹೆಚ್ಚಿಸಿದ್ದೇ ಅಲ್ಲದೆ ಆರ್ಥಿಕ ಚಟು ವಟಿಕೆಗಳಿಗೆ ಉತ್ತೇಜನ ನೀಡಿದೆ. ಕೇಂದ್ರ ಸರಕಾರ ಶೇ.100 ವಿದೇಶಿ ಹೂಡಿಕೆಗೆ ಅನುಮತಿ ನೀಡಿರುವುದರಿಂದ ಇನ್ನಷ್ಟು ಹೆಚ್ಚಿನ ವಿದೇಶಿ ಕಂಪೆನಿಗಳು ಹೂಡಿಕೆ ಮಾಡಲಿದ್ದು ಇದರಿಂದ ಕ್ಷೇತ್ರದಲ್ಲಿನ ಅತ್ಯಾಧುನಿಕ ತಂತ್ರಜ್ಞಾನಗಳು ಲಭಿಸಲಿವೆ. ಇತ್ತೀಚಿನ ಕೆಲವು ವರ್ಷಗಳಿಂದ ರಾಜಕೀಯ ವಲಯದಲ್ಲಿಯೂ ದೂರಸಂಪರ್ಕ ವಲಯ ಸದ್ದು ಮಾಡತೊಡಗಿದ್ದು ಪಕ್ಷಗಳ ನಾಯಕರು, ಕಾರ್ಯಕರ್ತರು ಸಾಂಪ್ರದಾ ಯಿಕ ವಿಧಾನಗಳ ಬದಲಿಗೆ ತಂತ್ರಜ್ಞಾನದ ಆವಿಷ್ಕಾರಗಳನ್ನು ಬಳಸಿ ಕೊಳ್ಳುವ ಮೂಲಕ ಜನರನ್ನು ತಲುಪತೊಡಗಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಕೇಂದ್ರದ ಈ ಸುಧಾರಣ ಕ್ರಮಗಳು ದೂರಸಂಪರ್ಕ ವಲಯಕ್ಕೆ ಹೊಸ ಚೈತನ್ಯ ತುಂಬುವುದರಲ್ಲಿ ಸಂಶಯವಿಲ್ಲ.

ಈ ಸುಧಾರಣ ಕ್ರಮಗಳ ಜಾರಿಯ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ವಿದೇಶಿ ನೇರ ಬಂಡವಾಳ ಹೂಡಿಕೆಯ ವಿಚಾರದಲ್ಲಂತೂ ನಿಗಾ ವಹಿಸಲೇಬೇಕಿದೆ. ವಿದೇಶಿ ಕಂಪೆನಿಗಳಿಗೆ ರತ್ನಗಂಬಳಿ ಹಾಸುವ ಭರದಲ್ಲಿ ದೇಸಿ ಕಂಪೆನಿಗಳು ಮೂಲೆ ಗುಂಪಾಗ ದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರಕಾರದ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next