Advertisement

ತೆಲಸಂಗ: ದ್ರಾಕ್ಷಿ ಮತ್ತೆ ಹುಳಿಯಾಗುವ ಆತಂಕ- ನಷ್ಟ ಅನುಭವಿಸುವ ಭೀತಿ

05:32 PM Oct 28, 2024 | Team Udayavani |

■ ಉದಯವಾಣಿ ಸಮಾಚಾರ
ತೆಲಸಂಗ: ಬೆಳಗಾವಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ದ್ರಾಕ್ಷಿಗೆ ಈಗ ದಾವನಿ ಹಾಗೂ ಕೊಳೆರೋಗ ಆವರಿಸಿದೆ. ತೆಲಸಂಗ, ಬನ್ನೂರ, ಕನ್ನಾಳ ಸೇರಿದಂತೆ ಅಥಣಿ ತಾಲೂಕಿನ ದ್ರಾಕ್ಷಿ ಬೆಳೆಗಾರರು ಪ್ರಸಕ್ತ ವರ್ಷವೂ ನಷ್ಟ ಅನುಭವಿಸುವ ಭೀತಿಯಲ್ಲಿದ್ದಾರೆ.

Advertisement

ರಾಜ್ಯದಲ್ಲಿಯೇ ದ್ರಾಕ್ಷಿ ಬೆಳೆಯುವಲ್ಲಿ 2ನೇ ಸ್ಥಾನದಲ್ಲಿರುವ ಅಥಣಿ ತಾಲೂಕಿನ ದ್ರಾಕ್ಷಿ ಬೆಳೆಗಾರರು, ದ್ರಾಕ್ಷಿ ಚಾಟ್ನಿ ಮಾಡುವ ಈ ಹಂತದಲ್ಲಿ ಹವಾಮಾನ ವೈಪರೀತ್ಯದಿಂದ ಮೊದಲು ತುತ್ತಿನಲ್ಲೇ ಕಲ್ಲು ಬಂದು ಆತಂಕ ಪಡುವಂತಾಗಿದೆ.

ಅಥಣಿ ತಾಲೂಕಿನ ಒಟ್ಟು 4600 ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು, ಅದರಲ್ಲಿಯೇ ತೆಲಸಂಗ, ಬನ್ನೂರ, ಕನ್ನಾಳ, ಕಕಮರಿ, ಕೊಟ್ಟಲಗಿ, ಹಾಲಳ್ಳಿ ಸೇರಿದಂತೆ ಅಥಣಿ ತಾಲೂಕಿನ ಪೂರ್ವ ಭಾಗದ ಬಹುತೇಕ ಗ್ರಾಮಗಳಲ್ಲಿ ದ್ರಾಕ್ಷಿ ಬೆಳೆಗೆ ಈ ರೋಗಗಳು ತಗಲಿದ್ದು, ಇಳುವರಿ ಗಣನೀಯವಾಗಿ ಕುಸಿಯುವ ಭೀತಿ ಎದುರಾಗಿದೆ.

ಮುಂಚಿತವಾಗಿ ಚಾಟ್ನಿ ಮಾಡಿದ ತೋಟಗಳಲ್ಲಿ ಈಗಾಗಲೇ ಹೂಗಳು ಮಾಡಿ, ಕಾಯಿ ಕಟ್ಟುವ ಹಂತದಲ್ಲಿವೆ. ಈ ಹಂತದಲ್ಲಿ ಉತ್ತಮ ಹವಾಮಾನದ ಅವಶ್ಯಕತೆ ಹೆಚ್ಚಾಗಿದೆ. ಕಳೆದ ವರ್ಷ ಬರ ಬಿದ್ದಿದ್ರ ಪರಿಣಾಮ ಪ್ರಸಕ್ತ ವರ್ಷ ಕಡ್ಡಿ ತಯಾರಾಗಿಲ್ಲ. ಇದರ ಪರಿಣಾಮ ಪ್ರಸಕ್ತ ವರ್ಷ ಮೊದಲೇ ಶೇ.50ಕ್ಕಿಂತ ಕಡಿಮೆ ಹೂವು ಕೊಟ್ಟಿದೆ. ಇಂತಹದರಲ್ಲಿ ಗಿಡಗಳಿಗೆ ಮತ್ತೊಮ್ಮೆ
ರೋಗ ಬಾಧಿಸಿರುವುದು ಆತಂಕ ಸೃಷ್ಟಿಸಿದೆ.

ಪ್ರಸಕ್ತ ವರ್ಷದ ದ್ರಾಕ್ಷಿ ಬೆಳೆಗೆ ಅಕ್ಟೋಬರ್‌ ತಿಂಗಳು ನಿರ್ಣಾಯಕ ತಿಂಗಳಾಗಿದೆ. ಆದರೆ ಸದ್ಯ ದ್ರಾಕ್ಷಿ ಬಳ್ಳಿಗಳಲ್ಲಿನ ರೋಗ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಕನಿಷ್ಠ 5 ರಿಂದ 6 ಲಕ್ಷ ರೂ.ಗಳ ವೆಚ್ಚ ಮಾಡಿದವರಿಗೆ ದ್ರಾಕ್ಷಿ ಹುಳಿಯಾಗುವ ಆತಂಕ ಎದುರಾಗಿದೆ.

Advertisement

ಹತ್ತು ವರ್ಷದಿಂದ ಬೆಲೆ ಅಷ್ಟೇ

ಬರದ ನಾಡಿಗೆ ವರವಾಗಿ ಬಂದ ದ್ರಾಕ್ಷಿ ಬೆಳೆ ಇಂದು ರೈತನಿಗೆ ಹುಳಿಯಾಗುತ್ತಿದೆ. ಒಂದೆಡೆ ಬರ, ಇನ್ನೊಂದೆಡೆ ಹವಾಮಾನ ವೈಪರೀತ್ಯ, ಮತ್ತೂಂದೆಡೆ ಸೂಕ್ತ ಬೆಲೆ ಸಿಗದಿರುವುದಕ್ಕೆ ದ್ರಾಕ್ಷಿ ಕೃಷಿ ಕ್ಷೇತ್ರ ಬಡವಾಗುತ್ತಿದ್ದು, ಬೆಳೆ ನಷ್ಟದ ಪರಿಹಾರ ಮತ್ತು ಬೆಳೆದ ದ್ರಾಕ್ಷಿ ಹಾಗೂ ಒಣ ದ್ರಾಕ್ಷಿಗೆ ಬೆಂಬಲ ಬೆಲೆಯ ನಿರೀಕ್ಷೆಗಳು ಹುಸಿಯಾಗಿವೆ.

ಕಳೆದ 10 ವರ್ಷಗಳಿಂದ ಒಣ-ಹಸಿ ದ್ರಾಕ್ಷಿ ಬೆಲೆ ಒಂದೇ ತೆರನಾಗಿದೆ. ಕೇಜಿಗೆ 25 ರಿಂದ 30 ರೂಪಾಯಿ. ಚೆನ್ನಾಗಿ ಬೆಳೆದ ಬೆರಳೆಣಿಕೆಯಷ್ಟು ರೈತರಿಗೆ 20ರಿಂದ 50 ರೂ.ವರೆಗೂ ಬೆಲೆ ದೊರೆಯುತ್ತದೆ. ಆದರೆ ದಿನಕ್ಕೆ 100ರೂ.ಇದ್ದ ಕೂಲಿ ಈಗ 5 ರಿಂದ 6ನೂರು ತಲುಪಿದೆ. ಔಷಧಿ, ಗೊಬ್ಬರ ಬೆಲೆ 10 ಪಟ್ಟು ಹೆಚ್ಚಿದೆ. ಈ ಮೊದಲು ಎಕರೆಯೊಂದರ ಉಪಚಾರಕ್ಕೆ ವರ್ಷಕ್ಕೆ 70 ಸಾವಿರದಿಂದ ರಿಂದ 1ಲಕ್ಷ ರೂ. ಸಾಕಾಗುತ್ತಿತ್ತು. ಈಗ 2 ರಿಂದ 3ಲಕ್ಷಕ್ಕೂ ಅಧಿಕ ಹಣ ಸುರಿಯಬೇಕು. ಆದರೆ ದ್ರಾಕ್ಷಿ ಬೆಲೆ ಮಾತ್ರ ಹೆಚ್ಚಿಲ್ಲ. ರೈತ ಬೆಳೆದ ದ್ರಾಕ್ಷಿಗೆ ವೈಜ್ಞಾನಿಕ ಬೆಲೆ ದೊರೆಯುತ್ತಿಲ್ಲ. ನಷ್ಟವೂ ಬೆನ್ನು ಬಿಡುತ್ತಿಲ್ಲ.

ಕಳೆದ ವರ್ಷದ ನೀರಿನ ಕೊರತೆಯಿಂದ ಗರ್ಭ ನಿಂತಿಲ್ಲ. ಬೇಕಿರುವಷ್ಟು ಹೂಗಟ್ಟಿಲ್ಲ. ಸದ್ಯಕ್ಕೆ ಕಳೆದ ವರ್ಷದ ದುಷ್ಪರಿಣಾಮ, ಪ್ರಸಕ್ತ ವರ್ಷದ ಹವಾಮಾನ ವೈಪರೀತ್ಯದಿಂದ ದ್ರಾಕ್ಷಿ ಬೆಳೆಗೆ ದಾವನಿ-ಕೊಳೆ ರೋಗ ಕಾಣಿಸಿಕೊಂಡಿದ್ದು, ರೈತರ ತೋಟಗಳಿಗೆ ಭೇಟಿ ನೀಡಿ ಸರಕಾರಕ್ಕೆ ವರದಿ ಸಲ್ಲಿಸುವೆ.

ಅಕ್ಷಯಕುಮಾರ  
ಉಪಾಧ್ಯಾಯ, ತೋಟಗಾರಿಕೆ
ಅಧಿಕಾರಿ, ತೆಲಸಂಗ.

Advertisement

Udayavani is now on Telegram. Click here to join our channel and stay updated with the latest news.

Next